Advertisement

ಗಾದೆ ಪುರಾಣ

11:22 AM May 02, 2019 | Hari Prasad |

01. ವೇದನೆ ಇದ್ದಲ್ಲಿ ಸಾಧನೆ
ಒಳ್ಳೆಯ ಫ‌ಸಲು ಪಡೆಯಲು ಭೂಮಿಯನ್ನು ಆಳವಾಗಿ ಉಳಬೇಕು. ಅಗಲವಾಗಿ ಉತ್ತರೆ ಎಲ್ಲರಿಗೂ ಕಾಣಿಸುತ್ತದೆಯೇ ಹೊರತು, ಅದರಿಂದ ಬೆಳೆಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಕೇವಲ ಕಾಣಿಸುವುದರಿಂದ ನಿಶ್ಚಿತ ಫ‌ಲ ಸಿಕ್ಕುವುದಿಲ್ಲ. ಯಾವುದೇ ವಿಷಯವನ್ನಾಗಲಿ, ಆಳವಾಗಿ ಅಭ್ಯಾಸ ಮಾಡಬೇಕೇ ಹೊರತು, ಸುಮ್ಮನೆ ಅದರ ರೂಪುರೇಷೆಗಳನ್ನು ತಿಳಿದುಕೊಂಡರೆ ಸಾಲದು ಎನ್ನುವುದು ಈ ಗಾದೆಯ ಒಟ್ಟು ಅರ್ಥ.

Advertisement

02. ಸುಂಕದವನ ಮುಂದೆ ಸುಖ ದುಃಖ ಹೇಳಿಕೊಂಡ ಹಾಗೆ
ಯಾರಿಗೆ ಏನು ಹೇಳಬೇಕೋ, ಎಷ್ಟು ಹೇಳಬೇಕೋ ಅಷ್ಟೇ ಹೇಳಬೇಕು. ಸಂಬಂಧವಿಲ್ಲದವರ ಎದುರಿಗೆ ತಾಪತ್ರಯಗಳನ್ನು ಹೇಳಿಕೊಳ್ಳುವುದು ಅವಿವೇಕ ಮತ್ತು ಅದರಿಂದ ಸಮಯ ವ್ಯರ್ಥ. ಅದರಿಂದ ನಗೆಪಾಟಲಿಗೆ ಈಡಾಗಬಹುದು ಅಷ್ಟೆ. ಸುಂಕದವನಿಗೆ ಸುಂಕ ವಸೂಲಿ ಮಾಡುವುದಷ್ಟೇ ಕೆಲಸ. ನಮ್ಮ ಕಷ್ಟ ಸುಖಗಳನ್ನು ಕಟ್ಟಿಕೊಂಡು ಅವನಿಗೆ ಏನೂ ಆಗಬೇಕಿಲ್ಲ.

03. ಬರೆ ಹಾಕಿಕೊಂಡ ಮಾತ್ರಕ್ಕೆ ಬೆಕ್ಕು ಹುಲಿಯಾದೀತೇ?
ಮೈ ಮೇಲೆ ಪಟ್ಟೆ, ಗರ್ಜನೆ, ಬೇಟೆಯಾಡುವ ಕ್ರಮ ಇವೆಲ್ಲಾ ಹುಲಿಗೆ ವಂಶಪಾರಂಪರ್ಯವಾಗಿ ಬಂದ ಗುಣಗಳು. ಗಾತ್ರದಲ್ಲಿ, ಸಾಹಸದಲ್ಲಿ ತನಗಿಂತ ಬಲಿಷ್ಠವಾದ ಹುಲಿಯನ್ನು ಅನುಕರಿಸಲು ಹೋಗಿ ಬೆಕ್ಕು ತನ್ನ ಮೈ ಮೇಲೆ ಬರೆ ಹಾಕಿಕೊಂಡ ಮಾತ್ರಕ್ಕೆ ಅದು ಹುಲಿಯಾಗಲು ಸಾಧ್ಯವೇ? ದೊಡ್ಡ ಮನುಷ್ಯರನ್ನು, ಪ್ರತಿಭಾವಂತರನ್ನು ಅನುಕರಿಸಲು ಹೋಗಿ ಮೂರ್ಖತನ ಪ್ರದರ್ಶಿಸಬಾರದು.

04. ಲೊಚಗುಟ್ಟುವ ಹಲ್ಲಿ ಭವಿಷ್ಯ ಹೇಳಬಲ್ಲದೇ?
ಹಲ್ಲಿಯ ಶಕುನ ನಂಬುವುದು, ಬೆಕ್ಕು ಅಡ್ಡ ಬಂದರೆ ಹಿಂದಕ್ಕೆ ಹೋಗುವುದು, ಬೆಳಗೆದ್ದು ನರಿ ಮುಖ ನೋಡಿದರೆ ಭಾಗ್ಯ ಬರುತ್ತದೆ ಎನ್ನುವುದು, ಎಡಗಾಲು ಎಡವುವುದು ಅಥವಾ ಒಂಟಿ ಸೀನು ಸೀನುವುದು ಕೆಟ್ಟ ಶಕುನ ಎನ್ನುವುದು… ಮೊದಲಾದ ಮೂಢನಂಬಿಕೆಗಳು ಇಂದಿಗೂ ನಮ್ಮಲ್ಲಿ ಜನಜನಿತವಾಗಿದೆ. ಪರೀಕ್ಷೆಗೆ ಒಳಪಡದ ಯಾವ ನಂಬಿಕೆಯೂ ನಂಬಲು ಅರ್ಹವಲ್ಲ. ಮೂಢನಂಬಿಕೆಗಳನ್ನು ಬಿಡಬೇಕು ಎನ್ನುವುದು ಈ ನುಡಿಗಟ್ಟಿನ ಅರ್ಥ.

– ಸಂಗ್ರಹ- ವಿವರಣೆ: ಸಂಪಟೂರು ವಿಶ್ವನಾಥ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next