Advertisement

ಸೊಸೆ ಗಟವಾಣಿ ಮಗಳು ಪುಣ್ಯವಂತೆ!

07:34 PM Jan 06, 2021 | Team Udayavani |

“ಯಾಕ್ರೀ ಸುಮಿತ್ರಮ್ಮ ಒಬ್ಬರೇ ಬಂದಿದ್ದೀರಿ? ಸೊಸೆ ಊರಲ್ಲಿಲ್ಲವಾ?’ಪದ್ದಕ್ಕ ಕುತೂಹಲದಿಂದ ಕೇಳಿದಳು.

Advertisement

ಅಂದು ವೆಂಕಟರಮಣ ದೇವಸ್ಥಾನದಲ್ಲಿ ಶ್ರೀನಿವಾಸಕಲ್ಯಾಣೋತ್ಸವ ನಡೆದಿತ್ತು. ಜನಸಾಕಷ್ಟಿದ್ದರು, ಪದ್ದಕ್ಕನ ಪ್ರಶ್ನೆಗೆ ಉತ್ತರ ಬರಲಿಲ್ಲ, ಅವರು ಬಿಟ್ಟಾರೆಯೇ? ಮತ್ತೆ ಕೇಳಿದರು: “ಯಾಕ್ರೀ, ತುಂಬಾ ಬೇಸರದಲ್ಲಿದ್ದೀರಾ? ಮನೆಯಲ್ಲಿ ಏನಾದರೂ ಕಟಿಪಿಟಿ? ಸೊಸೆ ಸರಿಯಿದ್ದಾಳೆ ತಾನೇ?’ ಸುಮಿತ್ರಮ್ಮನಿಗೆ ಈಗ ಮಾತನಾಡದೇ ವಿಧಿಯೇ ಇಲ್ಲ. “ಏನು ಹೇಳಲಿ ಪದ್ದಕ್ಕ? ಮಾಟಗಾತಿ. ಮನೇಲಿ ಎಲ್ಲರಿಗೂ ಮೋಡಿ ಮಾಡಿದ್ದಾಳೆ. ಮನೆ ಮುಂದೆರಂಗೋಲಿ ಯಿಂದ ಹಿಡಿದು ರಾತ್ರಿ ಉಂಡು ಮಲಗುವ ವರೆಗೂ ಅವಳು ಹೇಳಿದಂತೆಯೇ ನಡೆಯ ಬೇಕಂತೆ! ಗಂಡನಿಗೆ ಗಾರುಡಿ ಮಾಡಿ ಬಿಟ್ಟಿದ್ದಾಳೆ ಸೋಗಲಾಡಿ. ಈ ಮಗರಾಯ ಮದುವೆಗೆ ಮೊದಲು ಅಮ್ಮಾ, ಅಮ್ಮಾ ಎಂದು ನನ್ನ ಹಿಂದಿಂದೇ ಓಡಾಡುತ್ತಿದ್ದವ ಈಗ ಮಾತೇ ಕಡಿಮೆ ಮಾಡಿದ್ದಾನೆ.

ಆಫೀಸಿಗೆ ಹೋಗುವಾಗ ಅವಳ ರೂಮಿನ ಬಾಗಿಲ ಬಳಿ ನಿಂತು ಅದೇನೋ ಕಣ್ಸನ್ನೆ, ಬಾಯಿಸನ್ನೆ ಮಾಡಿ ಹೋಗ್ತಾನೆ. ಸಂಜೆಬಂದವನೇ ಕೋಣೆಒಳಗೆ ಹೋಗಿ ಬಾಗಿಲು ಹಾಕ್ಕೋತಾನೆ!ಅದೇನು ಗುಸುಗುಸು, ಪಿಸುಪಿಸು!ಶಾಂಪೂ, ಸೆಂಟು,ನೂರೆಂಟು ಕ್ರೀಂಗಳು, ತಿಂಗಳಿಗೊಮ್ಮೆ ಸೀರೆ, ಒಡವೆ, ಡ್ರೆಸ್ಸು,ಯಾವುದಕ್ಕೂ ಮಿತಿಯೇಇಲ್ಲ. ಯಾವಾಗನೋಡಿದರೂ ಟಿ.ವಿ.ಮೊಬೈಲ್‌ನಲ್ಲಿಯೇ ಮುಳುಗಿರ್ತಾಳೆ. ಸೊಸೆ ಬಂದರೂ ನಮಗೆ ಅಡುಗೆ ಮನೆ ಬಾಂಧವ್ಯ ತಪ್ಪಿಲ್ಲ ನೋಡಿ. ಗಟವಾಣಿ ಕಣ್ರೀ.. ಏನ್ಮಾಡೋದು, ಎಲ್ಲಾ ನಾವು ಪಡೆದು ಬಂದದ್ದು…’.ಪದ್ದಕ್ಕ ಉತ್ಸಾಹದಿಂದ ಕೇಳಿಸಿಕೊಂಡಳು. ಎಲ್ಲವೂ ಮೆದುಳಿನಲ್ಲಿ ರೆಕಾರ್ಡ್‌ ಆಗಿತ್ತು, ಅಂದಿನ ವಾರ್ತಾ ಪ್ರಸಾರಕ್ಕೆ ಸಾಕಷ್ಟು ರೋಚಕ ಮಾಹಿತಿ ಸಿಕ್ಕಿತ್ತು.

ವೆಂಕಟೇಶ- ಪದ್ಮಾವತಿಕಲ್ಯಾಣ ಮುಗಿದುಮಂಗಳಾರತಿ ಕಣ್ಣಿಗೆಒತ್ತಿಕೊಂಡು ಪ್ರಸಾದಪಡೆದುಹೊರಬಂದರು.ಪದ್ದಕ್ಕಳಿಗೆ ಇನ್ನೂಮಾಹಿತಿ ಬೇಕಿತ್ತು. “ಸುಮಿತ್ರಕ್ಕಾ, ಕಳೆದ ವರ್ಷ ಮದುವೆಯಾದಮಗಳು ಹೇಗಿದ್ದಾಳೆ?’ ಈ ಮಾತು ಕೇಳುತ್ತಿದ್ದಂತೆಯೇ ಸುಮಿತ್ರಮ್ಮನಲ್ಲಿ ಮಿಂಚಿನ ಸಂಚಾರವಾಯಿತು. ಆಕೆ ಉತ್ಸಾಹದ ಬುಗ್ಗೆಯಾಗಿ ಹೇಳಿದರು: “ನಮ್ಮ ಪುಣ್ಯ ಕಣ್ರೀ… ದೇವರು ಕರುಣಾಶಾಲಿ.ಅವಳನ್ನು ಒಳ್ಳೇ ಕಡೆ ಸೇರಿಸಿದ.ಕೈಗೊಂದು, ಕಾಲಿಗೊಂದು ಆಳುಕಾಳು.

ಮಾವನಿಗೆ ಈಗಲೇ ಕೈಲಾಗೋಲ್ಲ, ಅವರನ್ನ ನೋಡಿ ಕೊಳ್ಳೋಕೆ ಒಬ್ಬ, ಅಡುಗೆ ಮಾಡೋಕೆ ಮತ್ತೂಬ್ಬ ಕೆಲಸದವರಿದ್ದಾರೆ. ಅತ್ತೆಗೆ ಇವಳನ್ನು ಕಂಡರೆ ಭಯ! ಕೂರು ಎಂದರೆ ಕೂರುತ್ತಾರೆ, ಏಳು ಎಂದರೆ ಎದ್ದುನಿಲ್ಲುತ್ತಾರೆ. ಅಳಿಯ ಪುಣ್ಯಕೋಟಿಗೋವಿನಂಥವನು. ಇವಳ ಮೇಲೆಬೆಟ್ಟದಂಥ ಪ್ರೀತಿ. ಇಬ್ಬರೇ ವಾರದಲ್ಲಿನಾಲ್ಕು ದಿನ ಹೊರಗೆ ಊಟ, ಸಿನೆಮಾ,ಮಾಲ್‌ ಅದೂ ಇದೂಂತ ಸುತ್ತುತ್ತಲೇಇರುತ್ತಾರೆ. ನೀವೇ ಹೇಳಿ, ಈಗಸುಖಪಡದೇ ಮಗು ಆದ ಮೇಲೆ ಅನುಭವಿಸೋಕೆ ಆಗುತ್ತಾ? ರಾಣಿ ಥರಾ ಇದ್ದಾಳೆ ಮಗಳು…’. ಪದ್ದಕ್ಕ ಸಂಜೆಯ ವಾರ್ತಾಪ್ರಸಾರ ಆರಂಭಿಸಲು ಮಹಿಳಾ ಕಟ್ಟೆಯೆಡೆಗೆ ಸಾಗಿದರು.

Advertisement

 

ಕೆ. ಲೀಲಾ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next