ಜೇವರ್ಗಿ: ನೇಗಿಲು ಹಾಗೂ ರೈತ ಧರ್ಮ ಕಾಪಾಡುವುದೇ ಜೆಡಿಎಸ್ ಗುರಿ ಎಂದು ಜಿಲ್ಲಾ ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಹೇಳಿದರು. ತಾಲೂಕಿನ ಕೂಡಿ ಹಜರತ್ ಬಾಬಾ ಫಕ್ರೋದ್ಧೀನ್ ದರ್ಗಾ ಬಳಿಯಿರುವ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಮೂರ್‍ನಾಲ್ಕು ವರ್ಷಗಳಿಂದ ಭೀಕರ ಬರಗಾಲ ಆವರಿಸಿ ಅನ್ನದಾತನ ಸಂಕಷ್ಟ ಕೇಳುವರೇ ಇಲ್ಲದಂತಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತ ವಿರೋ ಧಿ ನೀತಿ ಅನುಸರಿಸುತ್ತಿವೆ. ಇಂತಹ ಭಂಡ ಸರಕಾರಗಳಿಗೆ ರೈತ ವರ್ಗ ತಕ್ಕ ಪಾಠ ಕಲಿಸಬೇಕಿದೆ ಎಂದರು. ಬರ ಆವರಿಸಿ ಸಂಕಷ್ಟದಲ್ಲಿರುವ ರೈತರ ಸಾಲಮನ್ನಾ ಮಾಡಲು ಹಿಂದೇಟು ಹಾಕುತ್ತಿರುವ ಸರಕಾರಗಳಿಗೆ ಉಳಿಗಾಲವಿಲ್ಲ. ರೈತರ ಹಿತ ಕಾಪಾಡುವ ಏಕೈಕ ಪಕ್ಷ ಎಂದರೇ ಜೆಡಿಎಸ್ ಬರುವ ದಿನಗಳಲ್ಲಿ ಪ್ರತಿಯೊಬ್ಬರೂ ಜೆಡಿಎಸ್‌ಗೆ ಬೆಂಬಲಿಸಿ ಆರ್ಶೀವದಿಸಬೇಕು ಎಂದು ಹೇಳಿದರು. ಇದೆ ವೇಳೆ ಗ್ರಾಪಂ ಮಾಜಿ ಅಧ್ಯಕ್ಷರಾದ ಬಸವರಾಜ ಕಾಶಿರಾಯಗೌಡ ಪಾಟೀಲ, ಬಾಬುಮೀಯಾ ನೆಲೋಗಿ, ಲಕ್ಷ್ಮಣ ವಡಗೇರಾ, ಸರಣಬಸಪ್ಪ ಕಂಬಾರ, ಬಾಬುರಾಯ ಕೂಡಿ ಹಾಗೂ ಕೂಡಿ, ಕೋಬಾಳ, ಹಂದನೂರ, ಕೋಳಕೂರ, ಹಿಪ್ಪರಗಾ, ಮಂದ್ರವಾಡ, ಬಣಮಿ ಗ್ರಾಮದ ಹಲವಾರು ಜನ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್‌ಗೆ ಸೇರ್ಪಡೆಗೊಂಡರು. ಜೆಡಿಎಸ್ ತಾಲೂಕಾಧ್ಯಕ್ಷ ಬಸವರಾಜ ಖಾನಗೌಡ, ಮುಖಂಡರಾದ ಎ.ಬಿ. ಹಿರೇಮಠ, ಎಸ್.ಕೆ. ಹೇರೂರ, ಶಂಕರ ಕಟ್ಟಿಸಂಗಾವಿ, ತಾಪಂ ಉಪಾಧ್ಯಕ್ಷ ಗೊಲ್ಲಾಳಪ್ಪ ಪೂಜಾರಿ, ಉಸ್ತಾದ ವಜೀದ್ ಹುಸೇನಿ, ವೆಂಕಟೇಶ ಬದ್ರಿ, ಪ್ರಕಾಶ ಪಾಟೀಲ ಯತ್ನಾಳ, ಚಂದ್ರಶೇಖರ ಮಲ್ಲಾಬಾದ, ಹಬೀಬ ಜಮಾದಾರ, ಯುವ ಘಟಕದ ಅಧ್ಯಕ್ಷ ಸಿದ್ದು ಮಾವನೂರ ಹಾಗೂ ಮತ್ತಿತರರು ಭಾಗವಹಿಸಿದರು.