ಕೆಜಿಎಫ್: ಬಂಗಾರಪೇಟೆ ಮತ್ತು ಕೆಜಿಎಫ್ ನಲ್ಲಿ ಕೋವಿಡ್ ಪ್ರಕರಣ ಜಾಸ್ತಿಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದ್ದರಿಂದ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಪರಿಶೀಲನೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಹೇಳಿದರು.
ನಗರದ ಎಸ್ಪಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಬೇತಮಂಗಲದ ಚಿಗರಾಪುರಕ್ಕೆ ಭೇಟಿ ನೀಡಿದ್ದು, ಅಲ್ಲಿ 14 ಸೋಂಕಿತರು ಇದ್ದಾರೆ. ಎಲ್ಲರೂ ಖುಷಿಯಾಗಿದ್ದಾರೆ. ಉತ್ತಮ ವಾತಾವರಣ ಇದೆ ಎಂದು ತಿಳಿಸಿದರು. ಜಿಲ್ಲಾಡಳಿತ ನೀಡುವ ವರದಿಯೇ ಅಂತಿಮ. ಪೊಲೀಸ್ ಠಾಣೆಗಳು, ಕಂಟೇನ್ಮೆಂಟ್ ಜೋನ್‌ಗಳು ಉತ್ತಮವಾಗಿವೆ. ಕೋವಿಡ್ ದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ನಮ್ಮಲ್ಲಿ ಲ್ಯಾಬ್ ಬಂದಿದೆ. ಹತ್ತು ನಿಮಿಷದಲ್ಲಿ ಪರೀಕ್ಷಾ ವರದಿ ಕೊಡಬಹುದು. ದಿನಕ್ಕೆ 300 ಮಂದಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದರು.
ಸೋಂಕು ನಿವಾರಕ ಶಕ್ತಿ ಇದ್ದವರು ಕೋವಿಡ್ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ಇತರೆ ಕಾಯಿಲೆ ಇರುವವರು ಹುಷಾರಾಗಿರಬೇಕು. ಜಿಲ್ಲಾಡಳಿತ ಚೆನ್ನಾಗಿ ವ್ಯವಸ್ಥೆ ಮಾಡಿದೆ. ಮುಖ್ಯಮಂತ್ರಿ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಸಚಿವರು ಹೇಳಿದರು. ಅಂತರ ಜಿಲ್ಲೆ ವ್ಯವಸ್ಥೆ ಇಲ್ಲದೇ ಇದ್ದಾಗ ನಮ್ಮದು ಗ್ರೀನ್ ವಲಯ ಆಗಿತ್ತು. ತರಕಾರಿ ಮತ್ತಿತರ ಸಾಗಾಣಿಕೆಗೆ ಅವಕಾಶ ಕೊಟ್ಟನಂತರ ಕೇಸ್‌ಗಳು ಹೆಚ್ಚಾದವು ಎಂದು ನಾಗೇಶ್ ಹೇಳಿದರು.
ಜಿಲ್ಲಾದ್ಯಂತ 15 ಕೋವಿಡ್ ಆಸ್ಪತ್ರೆಯನ್ನು ಮಾಡಲಾಗಿದೆ. ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಕಂಟೇನ್ಮೆಂಟ್ ವಲಯಕ್ಕೆ 5 ಲಕ್ಷ ರೂ. ಬಿಡುಗಡೆ ಮಾಡಲಾಗುತ್ತಿದೆ ಎಂದು ವದಂತಿ ಹಬ್ಬಿಸಲಾಗಿದೆ. ಎಲ್ಲಾ ಇಲಾಖೆ ಸೇರಿ ಕಂಟೇನ್ ಮೆಂಟ್ ವಲಯದಲ್ಲಿ ಉಸ್ತುವಾರಿ ಮಾಡಲಾಗುತ್ತಿದೆ. ಐದು ಲಕ್ಷ ಬರುವುದು ಸುಳ್ಳು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇವತ್ತಿಗೆ 545 ಕೇಸ್ ಇದೆ. ಅವರಲ್ಲಿ ಬಹುತೇಕ ಗುಣಮುಖರಾಗುತ್ತಿದ್ದಾರೆ. ಸಾವಿನ ಸಂಖ್ಯೆ ಇಲ್ಲ. ಇದುವರೆಗೂ 21 ಸಾವು ಆಗಿದೆ. ಅದು ಕೂಡ ಇತರ ಕಾಯಿಲೆ ಇರುವವರು ಎಂದು ಜಿಲ್ಲಾಧಿಕಾರಿ ಸತ್ಯಭಾಮ ಹೇಳಿದರು. ಎಸ್ಪಿ ಮಹಮದ್ ಸುಜೀತ, ತಹಶೀಲ್ದಾರ್ ಕೆ.ರಮೇಶ್ ಇದ್ದರು.
ವಿವಿಧ ಗ್ರಾಮಗಳಿಗೆ ಭೇಟಿ: ಜಿಲ್ಲೆಯಲ್ಲಿ ಕೋವಿಡ್ ವೈರಸ್ ಅತೀ ಹೆಚ್ಚು ಹರಡುವಿಕೆಯಿಂದಾಗಿ ಕೆಜಿಎಫ್ ಭಾಗದ ಜನತೆಯು ಇತ್ತೀಚೆಗೆ ಆತಂಕಕ್ಕೆ ಒಳಗಾಗಿ ದ್ದರಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಭೇಟಿ ನೀಡಿ, ಜನಸಾಮಾನ್ಯರಿಗೆ ಸಾಂತ್ವನ ಹೇಳಿ, ಭಯಭೀತರಾಗದಂತೆ ಧೈರ್ಯ ತುಂಬಿದರು. ಬೇತಮಂಗಲ, ಚಿಗರಾಪುರ, ಕೆಜಿಎಫ್ ಅಶೋಕನಗರ, ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆ, ಸಂಭ್ರಮ್ ಆಸ್ಪತ್ರೆ, ಕಂಟೇನ್ಮೆಂಟ್ ಜೋನ್ ಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು