ಬೆಂಗಳೂರು: ಪೈ ಇಂಟರ್‌ನ್ಯಾಷನಲ್ ಮೆಗಾ ಮಾನ್ಸೂನ್ ಮೇಳದ ಲಕ್ಕಿ ಡ್ರಾನಲ್ಲಿ 100 ಅದೃಷ್ಟಶಾಲಿ ಗ್ರಾಹಕರು 50 ಸಾವಿರ ರೂ. ಮೌಲ್ಯದ ಉಚಿತ ಶಾಪಿಂಗ್‌ಗೆ ಆಯ್ಕೆಯಾಗಿದ್ದಾರೆ.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ನಡೆದ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಅದೃಷ್ಟಶಾಲಿ ಕೂಪನ್ ಸಂಖ್ಯೆಯನ್ನು ಪುಟ್ಟ ಮಕ್ಕಳಿಂದ ಪಾರದರ್ಶಕವಾಗಿ ಬಿಡುಗಡೆ ಮಾಡಲಾಯಿತು. ಅದರಂತೆ ತಲಾ 100 ಮಂದಿಗೆ 50 ಸಾವಿರ ರೂ. ಹಾಗೂ 25 ಸಾವಿರ ರೂ. ಮೊತ್ತದ ಪೀಠೊಪಕರಣ ಖರೀದಿಗೆ ಉಚಿತ ಶಾಪಿಂಗ್ ಕೂಪನ್ ಸಂಖ್ಯೆ ಬಿಡುಗಡೆಗೊಳಿಸಲಾಯಿತು.
ಇದಲ್ಲದೆ ಮೂರನೇ ಬಹುಮಾನವಾಗಿ 500 ಮಂದಿಗೆ 5 ಸಾವಿರ ರೂ. ಮೌಲ್ಯದ ಶಾಪಿಂಗ್ ಕೂಪನ್, ನಾಲ್ಕನೇ ಬಹುಮಾನವಾಗಿ 5 ಸಾವಿರ ಅದೃಷ್ಟಶಾಲಿ ಗ್ರಾಹಕರಿಗೆ 1 ಸಾವಿರ ರೂ. ಉಚಿತ ಶಾಪಿಂಗ್ ಹಾಗೂ 5ನೇ ಬಹುಮಾನವಾಗಿ 1 ಲಕ್ಷ ಗ್ರಾಹಕರಿಗೆ 1000 ಲಾಯಲ್ಟಿ ಪಾಯಿಂಟ್ಸ್ ಸಿಗಲಿದೆ. ಇದೇ ವೇಳೆ ಕಾರ್ಯಕ್ರಮಕ್ಕೆ ಬಂದವರ ಪೈಕಿ ಅದೃಷ್ಟಶಾಲಿಗಳಿಗೂ ಲಕ್ಕಿ ಡ್ರಾ ಮೂಲಕ ಬಹುಮಾನ ನೀಡಲಾಯಿತು.
ಪೈ ಇಂಟರ್ ನ್ಯಾಷನಲ್ ಎಲೆಕ್ಟ್ರಾನಿಕ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್ ಪೈ ಮಾತನಾಡಿ, ಸಂಸ್ಥೆಯ ವತಿಯಿಂದ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ಗ್ರಾಹಕರ ಹಿತ ಕಾಪಾಡಲಾಗುತ್ತಿದೆ. ಅದರಂತೆ 2017-18ನೇ ಸಾಲಿನಲ್ಲಿ ಸಂಸ್ಥೆ ಒಟ್ಟು 1162 ಕೋಟಿ ರೂ. ವಹಿವಾಟು ನಡೆಸಿದ್ದು, 2018-19ನೇ ಆರ್ಥಿಕ ವರ್ಷದಲ್ಲಿ 1600 ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಿದೆ ಎಂದು ಹೇಳಿದರು.
2000ರ ಇಸವಿಯಲ್ಲಿ ಬೆಂಗಳೂರಿನಲ್ಲಿ ಕೇವಲ 1 ಮಳಿಗೆಯೊಂದಿಗೆ ಸಂಸ್ಥೆ ಆರಂಭಗೊಂಡಿತ್ತು. ಸದ್ಯ ಬೆಂಗಳೂರಿನಲ್ಲಿ 30 ಮಳಿಗೆಗಳಿವೆ. ಜತೆಗೆ ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಲ್ಲಿಯೂ ಮಳಿಗೆಗಳಿದ್ದು, ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿದೆ. ಈವರೆಗೆ ಸಂಸ್ಥೆಯ ಮಳಿಗೆಗಳಲ್ಲಿ ಶಾಪಿಂಗ್ ಮಾಡಿದ ಗ್ರಾಹಕರಿಗೆ 234 ವಿವಿಧ ರೀತಿಯ ಕಾರು, 16 ಕೋಟಿ ರೂ. ಮೊತ್ತದ ಶಾಪಿಂಗ್ ಕೂಪನ್, 6 ಕೋಟಿ ರೂ. ಮೊತ್ತದ ಚಿನ್ನ ಹಾಗೂ 2 ಕೋಟಿ ರೂ. ನಗದು ಬಹುಮಾನ ನೀಡಲಾಗಿದೆ ಎಂದು ಹೇಳಿದರು.
ಸಂಸ್ಥೆಯಿಂದ ಈ ಬಾರಿ 10 ಲಕ್ಷ ಕೂಪನ್‌ಗಳನ್ನು ಮುದ್ರಣ ಮಾಡಲಾಗಿದ್ದು, ಆ ಪೈಕಿ 8 ಲಕ್ಷಕ್ಕೂ ಹೆಚ್ಚಿನ ಕೂಪನ್‌ಗಳು ಮಾರಾಟವಾಗಿವೆ. ಅದೃಷ್ಟಶಾಲಿಗಳನ್ನು ಪಾರದರ್ಶಕ ರೀತಿಯಲ್ಲಿ ಆಯ್ಕೆ ಮಾಡಿದ್ದು, ಆಯ್ಕೆ ಪ್ರಕ್ರಿಯೆಯನ್ನು ಯುಟ್ಯೂಬ್ ಹಾಗೂ ಫೇಸ್‌ಬುಕ್ ಸಾಮಾಜಿಕ ತಾಣದಲ್ಲಿ ನೇರ ಪ್ರಸಾರ ಮಾಡಲಾಗಿದೆ ಎಂದು ರಾಜ್‌ಕುಮಾರ್ ಪೈ ತಿಳಿಸಿದರು.
ಈ ವೇಳೆ ಸಂಸ್ಥೆಯ ಹಣಕಾಸು ವಿಭಾಗದ ನಿರ್ದೇಶಕಿ ಮೀನಾ ರಾಜ್‌ಕುಮಾರ್ ಪೈ, ನಿರ್ದೇಶಕರಾದ ಅಜಿತ್‌ಕುಮಾರ್ ಪೈ, ಗುರುಪ್ರಸಾದ್ ಪೈ ಸೇರಿದಂತೆ ಪ್ರಮುಖರು ಹಾಜರಿದ್ದರು.
ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ಗೃಹ ಬಳಕೆ ವಸ್ತುಗಳನ್ನು ತಲುಪಿಸಬೇಕೆಂದು ಸಂಸ್ಥೆಯ ಉದ್ದೇಶ. ಅದರಂತೆ ಹೆನ್ರಿ ಹಾಗೂ ಪೆರಲ್ ಎಂಬ ಬ್ರಾಂಡ್‌ಗಳನ್ನು ಪರಿಚಯಿಸಿದೆ. ಜತೆಗೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಲಾಗಿದ್ದು, 30 ಅನಾಥ ಮಕ್ಕಳನ್ನು ದತ್ತು ಪಡೆದಿದ್ದು, ಮುಂದಿನ ದಿನಗಳಲ್ಲಿ 100 ಮಂದಿ ಅನಾಥ ಮಕ್ಕಳನ್ನು ದತ್ತು ಪಡೆಯಲು ಉದ್ದೇಶಿಸಲಾಗಿದೆ.
-ರಾಜ್‌ಕುಮಾರ್ ಪೈ, ಪೈ ಇಂಟರ್‌ನ್ಯಾಷನಲ್ ಎಂ.ಡಿ