ಇದೇ ಅಕ್ಟೋಬರ್ 14ರಂದು ತೆರೆಗೆ ಬಂದಿರುವ “ಎಂಆರ್‌ಪಿ’ ಸಿನಿಮಾ ನಿಧಾನವಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತ ಸಿನಿ ಪ್ರಿಯರ ಗಮನ ಸೆಳೆಯುತ್ತಿದೆ. ಸ್ಥೂಲಕಾಯದ ವ್ಯಕ್ತಿಯೊಬ್ಬನ ಜೀವನದಲ್ಲಿ ಏನೇನು ಘಟನೆಗಳು ನಡೆಯುತ್ತದೆ ಎನ್ನುವುದರ ಸುತ್ತ “ಎಂಆರ್‌ಪಿ’ ಸಿನಿಮಾದ ಕಥಾಹಂದರ ಸಾಗುತ್ತದೆ.
ಇಲ್ಲಿಯವರೆಗೆ ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದ ಹರಿ ಈ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಾಫ್ಟ್ವೇರ್ ಇಂಜಿನಿಯರ್ ಆಗಿ ವಾಸ್ತವಕ್ಕೆ ಕನ್ನಡಿ ಹಿಡಿಯುವ ಪಾತ್ರದಲ್ಲಿ ಮಿಂಚಿದ್ದಾರೆ. ಔಟ್ ಆ್ಯಂಡ್ ಕಾಮಿಡಿಯಾಗಿ ತೆರೆಗೆ ಬಂದಿರುವ “ಎಂಆರ್‌ಪಿ’ ಸಿನಿಮಾದಲ್ಲಿ ಹರಿಗೆ ಚೈತ್ರಾ ರೆಡ್ಡಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ವಿಜಯ್ ಚೆಂಡೂರ್, ಬಾಲ ರಾಜವಾಡಿ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ “ನನ್ ಮಗಳೇ ಹೀರೋಯಿನ್’ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಬಾಹುಬಲಿ “ಎಂಆರ್‌ಪಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಇನ್ನು “ಎಂಆರ್‌ಪಿ’ ಚಿತ್ರವನ್ನು ನಿರ್ದೇಶಕ ಎಂ. ಡಿ ಶ್ರೀಧರ್, ಛಾಯಾಗ್ರಹಕ ಕೃಷ್ಣ ಕುಮಾರ್ (ಕೆ.ಕೆ), ಮೋಹನ್ ಕುಮಾರ್ ಹಾಗೂ ರಂಗಸ್ವಾಮಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಹರ್ಷವರ್ಧನ ಸಂಗೀತ ಸಂಯೋಜಿಸುತ್ತಿದ್ದು, ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ, ಕೆ. ಎಂ ಪ್ರಕಾಶ್ ಸಂಕಲನವಿದೆ.
ಬಹುದಿನಗಳ ನಂತರ ಸಂಪೂರ್ಣ ಕಾಮಿಡಿ ಕಥಾಹಂದರವನ್ನು ಇಟ್ಟುಕೊಂಡು ತೆರೆಗೆ ಬಂದಿರುವ “ಎಂಆರ್‌ಪಿ’ ಬಗ್ಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕಾಮಿಡಿ ಎಳೆಯ ಜೊತೆಗೆ ಸರಳ ಸಂದೇಶವನ್ನಿಟ್ಟುಕೊಂಡಿರುವ “ಎಂಆರ್‌ಪಿ’ ನಿಧಾನವಾಗಿ ಸಿನಿಪ್ರಿಯರಿಗೆ ಕಿಕ್ ನೀಡುತ್ತಿದೆ.