ಮೈಸೂರು: ಹಳೆ ವಸ್ತುಗಳನ್ನು ಮರು ಬಳಕೆ ಮಾಡುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ಆರಂಭಿಸಿರುವ ನನ್ನ ಜೀವನ ನನ್ನ ಸ್ವಚ್ಛ ನಗರ ಎಂಬ ವಿಶೇಷ ಅಭಿಯಾನಕ್ಕೆ ಭಾನುವಾರ ಕೆಎಂಪಿಕೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅನುಪಯುಕ್ತ ವಸ್ತುಗಳನ್ನು ಹಸ್ತಾಂತರಿಸಲಾಯಿತು.
ಪಾಲಿಕೆಯು ಮೇ 20 ರಿಂದ ಜೂನ್ 5ರ ವರೆಗೆ ಹಮ್ಮಿಕೊಂಡಿರುವ ಈ ಅಭಿಯಾನಕ್ಕೆ ಕೆಎಂಪಿಕೆ ಚಾರಿಟೆಬಲ್ ಟ್ರಸ್ಟ್ ಕೈಜೋಡಿಸಿದೆ. ಹಳೆಯ ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಪಾಲಿಕೆಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜು ವಸ್ತುಗಳನ್ನು ಸ್ವೀಕರಿಸಿ ಮಾತನಾಡಿ, ನಗರಾದ್ಯಂತ ಪಾಲಿಕೆಯ 9 ವಲಯಗಳಲ್ಲಿ ಒಟ್ಟು 27 ಕಡೆಗಳಲ್ಲಿ ವಸ್ತುಗಳನ್ನು ಸಂಗ್ರಹಿಸುವ ಕೇಂದ್ರಗಳನ್ನು ತೆರೆದಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರು ಹಳೆ ಬಟ್ಟೆ, ಓದಿದ ಪುಸ್ತಕಗಳು, ಹಳೆಯ ಆಟಿಕೆಗಳು, ಹಳೆಯ ಬೈಸಿಕಲ್, ಹಳೆಯ ನ್ಯೂಸ್ ಪೇಪರ್‌ಗಳನ್ನು ನೀಡಿದರೆ ಅದನ್ನು ಪಾಲಿಕೆ ಸ್ವೀಕರಿಸುತ್ತದೆ. ನಿತ್ಯವೂ ಬೆಳಗಿನ ವೇಳೆ ಕಸ ಸಂಗ್ರಹಣೆಗೆ ಬರುವ ವಾಹನಗಳಿಗೂ ಈ ವಸ್ತುಗಳನ್ನು ನೀಡಬಹುದಾಗಿದೆ ಎಂದು ಮನವಿ ಮಾಡಿದರು.
ಅನುಪಯುಕ್ತ ವಸ್ತು ನೀಡಿದ್ದೇವೆ: ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಹಳೆಯ ಬಟ್ಟೆಗಳು ಹಾಗೂ ಪುಸ್ತಕಗಳನ್ನು ಅನುಪಯುಕ್ತ ವಸ್ತುಗಳ ಸಂಗ್ರಹ ಕೇಂದ್ರಕ್ಕೆ ನೀಡಿದ್ದೇವೆ. ಇದರಿಂದ ಸಾಕಷ್ಟು ಜನಕ್ಕೆ ಅನುಕೂಲವಾಗಲಿದೆ. ಪುಸ್ತಕಗಳು ಅಗತ್ಯವಿರುವವರಿಗೆ ಬಳಕೆಯಾಗುತ್ತದೆ. ಈ ಅಭಿಯಾನದಿಂದ ನಗರದಲ್ಲಿ ಸಂಗ್ರಹವಾಗುವ ಕಸದ ಪ್ರಮಾಣ ಕಡಿಮೆಯಾಗುತ್ತದೆ. ಬಳಕೆಯಾಗದೆ ಇರಿಸಿರುವ ವಸ್ತುಗಳು ಬೇರೊಬ್ಬರಿಗೆ ಬಳಕೆಗೆ ಬರುತ್ತವೆ. ಅಂತಹ ವಸ್ತುಗಳನ್ನು ಪಾಲಿಕೆಗೆ ಹಸ್ತಾಂತರಿಸಿದರೆ ಅವುಗಳನ್ನು ಮರು ಬಳಕೆ ಮಾಡಬಹುದಾಗಿದೆ. ಇದೊಂದು ಅತ್ಯುತ್ತಮ ಸೇವಾ ಕಾರ್ಯವಾಗಿದೆ ಎಂದರು.
ವಲಯ ಕಚೇರಿಯ ಆರೋಗ್ಯ ನಿರೀಕ್ಷಕಿ ಪ್ರೀತಿ, ಸಂಚಾಲಕರಾದ ಎಸ್.ಎನ್. ರಾಜೇಶ್, ಬೈರತಿ ಲಿಂಗರಾಜು, ಮಂಜುನಾಥ್, ರವಿಚಂದ್ರ ಇತರರು ಇದ್ದರು.