Advertisement

ತುರ್ತು ಸಹಾಯವಾಣಿ “112’ಕ್ಕೆ ಉತ್ತಮ ಸ್ಪಂದನೆ

02:49 AM Jan 18, 2021 | Team Udayavani |

ಮಂಗಳೂರು/ಉಡುಪಿ: ತುರ್ತು ಸಂದರ್ಭಗಳ ಸಹಾಯವಾಣಿ “112’ಕ್ಕೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆ ಕರೆಗಳು ಹೋಗುತ್ತಿವೆ. ಅದರಲ್ಲಿ ಕೌಟುಂಬಿಕ ಕಲಹಗಳಿಗೆ ಸಂಬಂಧಿಸಿದ ಕರೆಗಳೇ ಅಧಿಕ!

Advertisement

ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವ್ಯಾಪ್ತಿಯ ಠಾಣೆಗಳಲ್ಲಿ 2020ರ ನ. 14ರಂದು ಈ ಸಹಾಯವಾಣಿಗೆ ಚಾಲನೆ ನೀಡಿದ್ದು, ಈವರೆಗೆ 453ಕ್ಕೂ ಅಧಿಕ ಕರೆ ಸ್ವೀಕರಿಸಲಾಗಿದೆ. ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಡಿ. 14ರಂದು ಚಾಲನೆ ನೀಡಿದ್ದು, ದಿನಕ್ಕೆ ಸರಾಸರಿ 30ರಷ್ಟು ಕರೆಗಳು ಬರುತ್ತಿವೆ. ಉಡುಪಿ ಜಿಲ್ಲೆಯಲ್ಲಿ ಪ್ರತೀ ದಿನ 10ಕ್ಕೂ ಅಧಿಕ ಕರೆಗಳು ಬರುತ್ತವೆ. ಇಲ್ಲಿಯೂ ಕೌಟುಂಬಿಕ ವಿಚಾರಗಳಿಗೆ ಸಂಬಂಧಿಸಿದ ಕರೆಗಳು ಅಧಿಕ ಎಂದು ಮೂಲಗಳು ತಿಳಿಸಿವೆ.

ಪತಿಯನ್ನು ಹೆದರಿಸುವುದಕ್ಕೂ ಕರೆ! :

ಇತ್ತೀಚೆಗೆ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಿಂದ ಬಂದ ಕರೆಯನ್ವಯ ತತ್‌ಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿದ “ಏನು ಸಮಸ್ಯೆ?’ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಮಹಿಳೆ, “ಪತಿ ಆಗ ನನ್ನೊಡನೆ ಗಲಾಟೆ ಮಾಡುತ್ತಿದ್ದರು. ಈಗ ಗಲಾಟೆ ಇಲ್ಲ. ನಾನು ಅವರನ್ನು ಹೆದರಿಸಲು ನಿಮಗೆ ಕರೆ ಮಾಡಿದೆ’ ಎಂದುತ್ತರಿಸಿದರು ಎನ್ನುತ್ತಾರೆ ಪೊಲೀಸ್‌ ಸಿಬಂದಿ.

ತರಹೇವಾರಿ ಪ್ರಕರಣ :

Advertisement

ಸಾರ್ವಜನಿಕ ಶಾಂತಿಭಂಗ, ರಸ್ತೆ ಅಪಘಾತ, ಪಾರ್ಕಿಂಗ್‌ ಅವ್ಯವಸ್ಥೆ, ಅನಾರೋಗ್ಯ ಪೀಡಿತ ಅಶಕ್ತರ ಬಗ್ಗೆ, ಧ್ವನಿವರ್ಧಕ ಬಳಕೆ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿ 112ಕ್ಕೆ ಕರೆಗಳು ಬರುತ್ತಿವೆ. ಇತ್ತೀಚೆಗೆ ಪುತ್ತೂರಿನಲ್ಲಿ ಇಬ್ಬರು ಕಲ್ಲಂಗಡಿ ವ್ಯಾಪಾರಸ್ಥರ ನಡುವಿನ ವಿವಾದವನ್ನು ಕೂಡ ಈ ಪೊಲೀಸ್‌ ಸಿಬಂದಿ ಬಗೆಹರಿಸಿದ್ದಾರೆ.

ಸದ್ಯ ಪೊಲೀಸ್‌ ಸೇವೆ ಮಾತ್ರ  :

ಪೊಲೀಸ್‌, ಅಗ್ನಿಶಾಮಕ, ಆ್ಯಂಬುಲೆನ್ಸ್‌ ಸೇರಿದಂತೆ ಎಲ್ಲ ತುರ್ತು ಸೇವೆಗಳನ್ನು ಸುಲಭದಲ್ಲಿ ಪಡೆಯಲು ದೇಶಕ್ಕೆ ಒಂದೇ ಸಂಖ್ಯೆಯಾಗಿ 112ನ್ನು ಆರಂಭಿಸಲಾಗಿದೆ. ಆದರೆ ಪ್ರಸ್ತುತ ದ.ಕ., ಉಡುಪಿ ಜಿಲ್ಲೆಗಳಲ್ಲಿ ಪೊಲೀಸ್‌ ಇಲಾಖೆಯ ಸೇವೆಯನ್ನು ಮಾತ್ರ ನೇರವಾಗಿ 112 ಮೂಲಕ ನೀಡಲಾಗುತ್ತದೆ. ಈ ಹಿಂದೆ ಇದ್ದ ಪೊಲೀಸ್‌ ನಿಯಂತ್ರಣ ಕೊಠಡಿ ಸಂಖ್ಯೆ 100 ಕೂಡ ಚಾಲ್ತಿಯಲ್ಲಿದೆ.

ಠಾಣೆಗಳ ಭಾರ ಇಳಿಕೆ? :

112ಕ್ಕೆ ಬರುವ ಕರೆಯನ್ನಾಧರಿಸಿ ಪೊಲೀಸರು ಸ್ಥಳಕ್ಕೇ ತೆರಳಿ ಸ್ಪಂದಿಸುತ್ತಾರೆ. ಅಗತ್ಯವೆನಿಸಿದರೆ ಮಾತ್ರ ಠಾಣೆಗೆ ಕರೆಯಿಸಿ ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಹೆಚ್ಚಿನ ಪ್ರಕರಣ ವಿಚಾರಣೆ ವೇಳೆಯೇ ಬಗೆಹರಿಯುತ್ತವೆ. ಹೀಗಾಗಿ ಮುಂದಿನ ದಿನಗಳಲ್ಲಿ ಠಾಣೆಗಳ ಮೇಲಿನ ಒತ್ತಡ ಕಡಿಮೆಯಾಗಬಹುದು ಎನ್ನುತ್ತಾರೆ ತುರ್ತು ಸ್ಪಂದನ ವಾಹನದಲ್ಲಿ ಕಾರ್ಯಾಚರಿಸುವ ಸಿಬಂದಿ.

112 ತುರ್ತು ಸಹಾಯವಾಣಿಗೆ ವಿವಿಧ ರೀತಿಯ ಸಹಾಯವನ್ನು ಕೇಳಿ ಕರೆಗಳು ಬರುತ್ತವೆ. ನಾನು ವೈರ್‌ಲೆಸ್‌ ವಿಭಾಗದಲ್ಲಿ ಎಸ್‌ಪಿ ಆಗಿದ್ದಾಗ 112ರ ಬಗ್ಗೆ ಗಮನ ಹರಿಸುತ್ತಿದ್ದೆ. ಕರಾವಳಿ ಭಾಗದಿಂದ ಉತ್ತಮ ಸ್ಪಂದನೆ ದೊರೆತಿರುವುದನ್ನು ಗಮನಿಸಿದ್ದೇನೆ. ಯಾವುದೇ ಕರೆಗಳು ಬಂದರೂ ಪ್ರತಿಕ್ರಿಯಿಸಲಾಗುತ್ತದೆ.– ಎನ್‌. ಶಶಿಕುಮಾರ್‌,ಪೊಲೀಸ್‌ ಆಯುಕ್ತರು, ಮಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next