ಬೀದರ: ಕೋವಿಡ್ ಸೋಂಕಿನ ಮೂರನೇ ಆತಂಕ ಹಿನ್ನಲೆ ಹದಿಹರೆಯದ ಮಕ್ಕಳಿಗೆ ಜೀವ ರಕ್ಷಕ ಲಸಿಕಾ ಮೇಳಕ್ಕೆ ಸೋಮವಾರ ಚಾಲನೆ ದೊರೆತಿದ್ದು, ಗಡಿನಾಡು ಬೀದರನಲ್ಲಿ ಮೊದಲ ದಿನ ಶೇ.26.76ರಷ್ಟು ಲಸಿಕಾಕರಣ ಆಗಿದೆ.
450 ತಂಡಗಳು ಶಿಸ್ತು ಬದ್ದವಾಗಿ 15 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ಕಾರ್ಯೋನ್ಮುಖವಾಗಿವೆ. ಸೋಂಕಿನ ಆರ್ಭಟದ ಜತೆಗೆ ಒಮಿಕ್ರಾನ್ ಹೊಸ ತಳಿಯ ಭೀತಿ ಸಹ ಹೆಚ್ಚಿದೆ. ಸದ್ಯ ಸೋಂಕಿನಿಂದ ಜೀವ ಉಳಿಸಿಕೊಳ್ಳಲು ಲಸಿಕೆಯೇ ಮಾರ್ಗ.
ಇನ್ನೂ ಮುಂದಿನ ಎರಡ್ಮೂರು ತಿಂಗಳಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಸೇರಿ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುವರಿಂದ ಮಕ್ಕಳಿಗೆ ಲಸಿಕೆ ನೀಡುವುದು ಬಹಳ ಮುಖ್ಯವಾಗಿದೆ. ಹೀಗಾಗಿ ಲಸಿಕಾಕರಣಕ್ಕೆ ಒತ್ತು ಕೊಡುತ್ತಿರುವ ಸರ್ಕಾರ 15 ರಿಂದ 18 ವರ್ಷದೊಳಗಿನ ಆರೋಗ್ಯವಂತ ಮಕ್ಕಳಿಗೆ ಲಸಿಕೆ ನೀಡಲು ಸರ್ಕಾರ ಕಾಳಜಿ ವಹಿಸಿದೆ.
2007ರ ಜ.1ಕ್ಕಿಂತ ಮೊದಲು ಜನಿಸಿರುವ ಮಕ್ಕಳಿಗೆ ಸೋಮವಾರದಿಂದ ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿಯೇ ಆರೋಗ್ಯ ಇಲಾಖೆ ಕ್ಯಾಂಪ್ ನಡೆಸಿ ಲಸಿಕಾಕರಣ ಆರಂಭಿಸಿವೆ. ಜಿಲ್ಲೆಯಲ್ಲಿ ಒಟ್ಟು 1,05,083 ಗುರಿ ನೀಡಲಾಗಿದೆ. ಅದರಂತೆ ಮೊದಲ ದಿನ ಶೇ.50 ಸಾವಿರ ಲಸಿಕೆ ಗುರಿ ಹಾಕಿಕೊಂಡಿದ್ದು, ಅದರಲ್ಲಿ 28,120 ಲಸಿಕಾಕರಣ ಆಗಿದೆ.
ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳು, ವಿವಿಧ ವಸತಿ ಶಾಲೆಗಳು, ಐಟಿಐ, ಪ್ಯಾರಾಮೆಡಿಕಲ್, ಪಾಲಿಟೆಕ್ನಿಕ್, ನರ್ಸಿಂಗ್, ಡಿಪಾರ್ಮ್, ಡಿಪ್ಲೋಮಾ ಕೋರ್ಸ್‌ಗಳನ್ನು ಓದುವ ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಶನ್ ಶುರುವಾಗಿದ್ದು, ಮಕ್ಕಳು ಸರತಿ ಸಾಲಿನಲ್ಲಿ ಬಂದು ಲಸಿಕೆ ಪಡೆದುಕೊಂಡರು.
ಲಸಿಕೆ ಪಡೆದವರಲ್ಲಿ ಯಾವುದೇ ಬದಲಾವಣೆ ಆಗಿರುವುದು ವರದಿಯಾಗಿಲ್ಲ. ಲಸಿಕಾಕರಣಕ್ಕಾಗಿ ಶಾಲೆ- ಕಾಲೇಜುಗಳಲ್ಲಿ ವ್ಯಾಕ್ಸಿನ್ ಪರಿಕರಗಳು, ಲಸಿಕಾಕರಣ ಮತ್ತು ನಂತರ ವಿಶ್ರಾಂತಿ ಹೀಗೆ ಮೂರು ಕೊಠಡಿಗಳ ವ್ಯವಸ್ಥೆ ಮಾಡಲಾಗಿದ್ದು, ಪಾಲಕರಿಂದ ಸಹಿವುಳ್ಳ ಒಪ್ಪಿಗೆ ಪತ್ರ ಪಡೆದ ನಂತರವೇ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ.
ಬೀದರ ಜಿಲ್ಲೆಯಲ್ಲಿ ಸದ್ಯ 75 ಸಾವಿರ ಕೋವ್ಯಾಕ್ಸಿನ್ ಡೋಸ್ ಲಭ್ಯ ಇದೆ. ಇನ್ನುಳಿದ ಡೋಸ್‌ಗಳು ಶೀಘ್ರ ಬರಲಿದೆ. ಮೂರ್‍ನಾಲ್ಕು ದಿನಗಳಲ್ಲಿ ಸಂಪೂರ್ಣ ಮಕ್ಕಳಿಗೆ ವ್ಯಾಕ್ಸಿನೇಶನ್ ಮುಗಿಸಲು ಜಿಲ್ಲಾಡಳಿತ ತಯ್ನಾರಿ ಮಾಡಿಕೊಂಡಿದೆ.