Advertisement
ಬೆಳ್ತಂಗಡಿ: ಕಲ್ಮಂಜ ಗ್ರಾಮದ ಪಜಿರಡ್ಕದ ಕಾಡಿನಲ್ಲಿ ಟೆಂಟ್ ಹಾಕಿ ವಾಸಿಸುತ್ತಿದ್ದ ಮನೆಗಳಿಗೆ ಅಧಿಕಾರಿಗಳ ದಂಡು ಭೇಟಿ ನೀಡತೊಡಗಿದೆ. ರವಿವಾರ ರಜಾದಿನವಾದರೂ ಶಾಸಕರ ಹಾಗೂ ತಹಶೀಲ್ದಾರ್ ಸೂಚನೆಯಂತೆ ಕಂದಾಯ ನಿರೀಕ್ಷಕ ರವಿ ಹಾಗೂ ಕಲ್ಮಂಜ ಗ್ರಾಮ ಕರಣಿಕ ರಾಘವೇಂದ್ರ ಅವರು ಭೇಟಿ ನೀಡಿದ್ದಾರೆ. ಎರಡು ದಿನಗಳ ಒಳಗೆ ಈ ಐದೂ ಮನೆಯವರಿಗೆ ನಿವೇಶನ ಮಂಜೂರು ಮಾಡಲು ಅವರು ಕ್ರಮ ಕೈಗೊಂಡಿದ್ದಾರೆ. ಸೋಮವಾರ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಮೋಹನ್ ಕುಮಾರ್ ಭೇಟಿ ನೀಡಿದರು.
ಸೋಮವಾರ ಶಾಸಕ ಕೆ. ವಸಂತ ಬಂಗೇರ ಅವರನ್ನು ಸಂತ್ರಸ್ತರು ಭೇಟಿ ಮಾಡಿದರು. ಮಂಜೂರಾತಿ ಪತ್ರ ಸಿದ್ಧಗೊಳ್ಳುತ್ತಿದ್ದು ಎರಡು ದಿನಗಳ ಒಳಗಾಗಿ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. 1 ವಾರದ ಒಳಗೆ ತಲಾ 2 ಲಕ್ಷ ರೂ.ಗಳಂತೆ ಮಂಜೂರು ಮಾಡಿಸುತ್ತೇನೆ. ಅದರಲ್ಲಿ ಮನೆ ಕಟ್ಟಿಸಬೇಕು ಎಂದು ಹೇಳಿದರು. ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಜಿ.ಪಂ. ಸದಸ್ಯೆ ನಮಿತಾ, ದಲಿತ ಹಕ್ಕುಗಳ ಹೋರಾಟಗಾರ ಶೇಖರ್ ಎಲ್., ಕಾಂಗ್ರೆಸ್ ಮುಖಂಡ ಸುಬ್ಬಯ್ಯ ಶೆಟ್ಟಿ ಉಪಸ್ಥಿತರಿದ್ದರು. ಉಜಿರೆ – ಧರ್ಮಸ್ಥಳ ರಸ್ತೆ ಅಥವಾ ಉಜಿರೆ ಚಾರ್ಮಾಡಿ ರಸ್ತೆಯಿಂದ ಸಮಾನವಾಗಿ 3 ಕಿಮೀ. ದೂರದಲ್ಲಿ ಕಲ್ಮಂಜ ಗ್ರಾಮ ಪಂಚಾಯತ್ ಸರಹದ್ದಿನ ಪಜಿರಡ್ಕ ಎಂಬಲ್ಲಿ ಸರಕಾರಿ ಕಾಡಿನಲ್ಲಿ ಸೂರಿನ ಆಸರೆಯ ನಿರೀಕ್ಷೆಯಲ್ಲಿ ಕೊರಗುತ್ತಿದ್ದ ಕುಟುಂಬಗಳ ಕುರಿತು ಉದಯವಾಣಿ ವರದಿ ಮಾಡಿತ್ತು. ಇವರಿಗೆ ಸರಕಾರದ ಮನೆ, ನಿವೇಶನ, ಶೌಚಾಲಯ, ಪಡಿತರ ಚೀಟಿ, ಚುನಾವಣ ಗುರುತುಪತ್ರ ಸಿಕ್ಕಿಲ್ಲ. ಆಧಾರ್ ಕಾರ್ಡು ಬಿಟ್ಟರೆ ಬೇರೇನಿಲ್ಲ. ಸುಶೀಲಾ, ದೇವಕಿ, ಥಾಮಸ್, ಲಕ್ಷ್ಮೀ ಮಲೆಕುಡಿಯ, ಕಮಲಾ ಮೊಗೇರ ಅವರ ಮನೆಗಳಿವೆ. ‘ಉದಯವಾಣಿ‘ಯಲ್ಲಿ ಈ ಬಗ್ಗೆ ವರದಿ ಪ್ರಕಟವಾದುದನ್ನು ಗಮನಿಸಿ ತತ್‌ಕ್ಷಣ ಸಂಬಂಧಪಟ್ಟವರನ್ನು ಕರೆಸಿ ಕ್ರಮಕ್ಕೆ ಸೂಚಿಸಿದ್ದಾರೆ.
Related Articles
ಟೆಂಟ್ ಮನೆಗೆ ಅಧಿಕಾರಿಗಳು ಭೇಟಿ ನೀಡಿದರು.
Advertisement