ಕೊಪ್ಪಳ: ಕೃಷಿ ಇಲಾಖೆ ಪ್ರಸಕ್ತ ವರ್ಷದಲ್ಲಿ ಆರಂಭಿಸಿರುವ ಬೆಳೆ ಸಮೀಕ್ಷೆಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ದೊರೆತಿದೆ. ವಿಜಯಪುರ, ಬಾಗಲಕೋಟೆ, ದಾವಣಗೆರೆ ಸೇರಿ ಕೆಲ ಜಿಲ್ಲೆಗಳ ರೈತರು ಅರ್ಧದಷ್ಟು ಬೆಳೆ ಸಮೀಕ್ಷೆಯನ್ನು ಪೂರೈಸಿದ್ದಾರೆ. ಸಮೀಕ್ಷೆಗೆ ಇನ್ನೂ ಕಾಲಾವಕಾಶವಿದ್ದು, ಮೊದಲ ಪ್ರಯೋಗಕ್ಕೆ ನಾಡಿನ ರೈತರಿಂದ ಸ್ಪಂದನೆಯೂ ದೊರೆಯುತ್ತಿದೆ.
ರಾಜ್ಯದಲ್ಲಿ ವಿವಿಧ ಬೆಳೆಗಳ ನಿಖರತೆ, ಯಾವ ಬೆಳೆ, ಎಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತದೆ ಎನ್ನುವ ಮಾಹಿತಿ ಜತೆಗೆ ಸರ್ಕಾರದಿಂದ ಘೋಷಣೆಯಾಗುವ ವಿವಿಧಯೋಜನೆಗಳಿಗೂ ತುಂಬಾ ಉಪಕಾರಿಯಾಗಲಿದೆ. ಜತೆಗೆ ಬೆಳೆವಿಮೆ ವಿತರಣೆ ಹಾಗೂ ಬರ ಸಂದರ್ಭದಲ್ಲೂ ಬೆಳೆ ಸಮೀಕ್ಷಾ ಮಾಹಿತಿ ಅಷ್ಟೇ ಅಗತ್ಯವಾಗಿದೆ. ಈ ಮೊದಲು ಅನುವುಗಾರರು ಹಾಗೂ ಖಾಸಗಿ ವ್ಯಕ್ತಿಗಳ(ಪಿಆರ್) ಗಳ ಮೂಲಕ ಸರ್ಕಾರವು ಬೆಳೆ ಸಮೀಕ್ಷೆ ಮಾಡಿಸುತ್ತಿತ್ತು. ಆದರೆ ತುಂಬಾ ತೊಂದರೆಯಾಗುತ್ತಿದ್ದರಿಂದ ರೈತರಿಗೆ ಸರ್ಕಾರದಿಂದ ಹಲವು ಸೌಲಭ್ಯ ದೊರೆಯುತ್ತಿರಲಿಲ್ಲ. ರೈತರಿಂದಲೂ ಸಾವಿರಾರು ಆಕ್ಷೇಪಣೆಗಳು ಸಲ್ಲಿಕೆಯಾಗುತ್ತಿದ್ದವು. ಇದೆಲ್ಲವನ್ನರಿತ ಸರ್ಕಾರ ಪ್ರಸಕ್ತ ವರ್ಷ ರೈತನೇ ತನ್ನ ಬೆಳೆಯನ್ನು ತಾನೇ ಘೋಷಿಸಕೊಳ್ಳಬೇಕೆಂದು ನಿರ್ಧರಿಸಿ ಬೆಳೆ ಸಮೀಕ್ಷೆ ಆಪ್ ಬಿಡುಗಡೆ ಮಾಡಿದೆ. ಆ.15ರಂದು ಬೆಳೆ ಸಮೀಕ್ಷೆಗೆ ಚಾಲನೆ ದೊರೆತಿದ್ದು, ರಾಜ್ಯದ ಹಲವು ಭಾಗದಿಂದ ಉತ್ತಮ ಸ್ಪಂದನೆಯೂ ದೊರೆಯುತ್ತಿದೆ.
ರಾಜ್ಯದ ವಿಜಯಪುರ, ಬಾಗಲಕೋಟೆ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಈಗಾಗಲೇ ನಿಗದಿತ ಅರ್ಧದಷ್ಟು ಬೆಳೆ ಸಮೀಕ್ಷೆಯನ್ನು ರೈತರು ಪೂರ್ಣಗೊಳಿಸಿದ್ದಾರೆ. ಅಂದರೆ, ಸರ್ಕಾರ ನಿಗಪಡಿಸಿದ ಗುರಿಯ ಪ್ರಕಾರ ವಿಜಯಪುರದಲ್ಲಿ 5,81,040 ತಾಕುಗಳಿಗೆ 3,18,495 ತಾಕು ಬೆಳೆ ಸಮೀಕ್ಷೆ ಪೂರ್ಣಗೊಳಿಸಿದೆ. ಬಾಗಲಕೋಟೆ ಜಿಲ್ಲೆಯ 4,93,995 ತಾಕಿನ ಪೈಕಿ 2,64,121 ತಾಕು ಬೆಳೆ ಸಮೀಕ್ಷೆ ಮುಗಿದಿದೆ. ದಾವಣಗೆರೆ ಜಿಲ್ಲೆಯಲ್ಲಿ 4,78,208 ತಾಕುಗಳ ಪೈಕಿ 2,38,886 ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ. ಗದಗ ಜಿಲ್ಲೆಯಲ್ಲಿ 3,02,312 ತಾಕಿಗೆ 1,39,058 ತಾಕು ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ. ಹೀಗೆ ಕಲಬುರಗಿ, ಕೋಲಾರ, ಕೊಪ್ಪಳ ಜಿಲ್ಲೆಗಳು ಬೆಳೆ ಸಮೀಕ್ಷೆಯ ಪ್ರಗತಿಯಲ್ಲಿ ಉತ್ತಮ ಸ್ಪಂದನೆ ತೋರುತ್ತಿವೆ.
ರಾಜ್ಯಾದ್ಯಂತ ಕೃಷಿ ಇಲಾಖೆಯು 2,12,10,907 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆಗೆ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆಗೆ ಗುರಿ ನಿಗದಿಪಡಿಸಿದ್ದು, ಈ ಪೈಕಿ ಆ.15ರಿಂದ ಗುರುವಾರದ ಅಂತ್ಯಕ್ಕೆ 61,80,436 ತಾಕುಗಳ ಬೆಳೆ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ. ಅಂದರೆ ಶೇ.30 ಬೆಳೆ ಸಮೀಕ್ಷೆ ಮುಕ್ತಾಯವಾಗಿದೆ. ಇನ್ನು ಸೆ.24ರವರೆಗೂ ಬೆಳೆ ಸಮೀಕ್ಷೆಗೆ ಅವಕಾಶವಿದೆ. ಅಲ್ಲಿಯವರೆಗೆ ರೈತನೇ ತನ್ನ ಬೆಳೆಯನ್ನು ಘೋಷಿಸಕೊಳ್ಳಬೇಕು. ಒಂದು ವೇಳೆ ಆಪ್ ಮೂಲಕ ಬೆಳೆ ಸಮೀಕ್ಷೆ ಪೂರೈಸದೆ ಇದ್ದಲ್ಲಿ ಖಾಸಗಿ ವ್ಯಕ್ತಿಗಳ ಮೂಲಕ ಸರ್ಕಾರ ಬೆಳೆ ಸಮೀಕ್ಷೆ ಪೂರೈಸಲಿದೆ.
ರಾಜ್ಯದ 12 ಜಿಲ್ಲೆಗಳು ಶೇ.30 ಬೆಳೆ ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದರೆ, ಇನ್ನು 12 ಜಿಲ್ಲೆಗಳು ಶೇ.25ರೊಳಗೆ ಬೆಳೆ ಸಮೀಕ್ಷೆ ನಡೆಸಿವೆ. ಇವುಗಳಲ್ಲಿ ಶಿವಮೊಗ್ಗ, ಬೆಂಗಳೂರು ಗ್ರಾಮೀಣ, ಮಂಡ್ಯ, ಬೆಂಗಳೂರು ನಗರ, ಉಡುಪಿ ಸೇರಿ ಕೊಡಗು ಜಿಲ್ಲೆಗಳಲ್ಲಿ ಬೆಳೆ ಸಮೀಕ್ಷೆಯ ಪ್ರಗತಿ ಅಷ್ಟೊಂದು ವೇಗಗತಿಯಲ್ಲಿ ನಡೆದಿಲ್ಲ. ಇದಕ್ಕೆ ಕೃಷಿ ಇಲಾಖೆಯ ಜಾಗೃತಿ ಕೊರತೆಯೋ ಅಥವಾ ರೈತರು ಸಮೀಕ್ಷೆಗೆ ಆಸಕ್ತಿ ತೋರದ ಕಾರಣವೋ ತಿಳಿದಿಲ್ಲ. ಒಟ್ಟಿನಲ್ಲಿ ಹಲವು ಜಿಲ್ಲೆಗಳಲ್ಲಿ ಬೆಳೆ ಸಮೀಕ್ಷೆಗೆ ರೈತರಿಂದ ಸ್ಪಂದನೆ ದೊರೆತಿದೆ. ಇದು ಕೃಷಿ ಇಲಾಖೆಗೆ ವರದಾನವಾಗಿದೆ.
ದೇಶದಲ್ಲಿ ಪ್ರಥಮ ಬಾರಿಗೆ ರಾಜ್ಯದಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ ಆರಂಭ ಮಾಡಿದ್ದೇವೆ. ಎಲ್ಲೆಡೆಯಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಬೆಳೆ ಸಮೀಕ್ಷೆಯಿಂದ ರಾಜ್ಯ ಸರ್ಕಾರಕ್ಕೆ ನಿಖರ ಬೆಳೆಯ ಮಾಹಿತಿ ದೊರೆಯಲಿದೆ. ಇದರಿಂದ ಹಲವು ಅನುಕೂಲಗಳಾಗಲಿವೆ. ನಿಗದಿತ ಅವಧಿಯೊಳಗೆ ರೈತರು ತಮ್ಮ ಬೆಳೆ ಸಮೀಕ್ಷೆ ಮಾಡಿ ಅಪ್‌ಲೋಡ್ ಮಾಡಿದರೆ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗುವುದು ತಪ್ಪಲಿದೆ. ಈವರೆಗೂ 66ಲಕ್ಷ ರೈತರು ಬೆಳೆ ಸಮೀಕ್ಷೆ ಮಾಡಿದ್ದಾರೆ.
– ಬಿ.ಸಿ. ಪಾಟೀಲ್, ಕೃಷಿ ಸಚಿವ
-ದತ್ತು ಕಮ್ಮಾರ