Advertisement

ಕರಾವಳಿಯಲ್ಲಿ ಉತ್ತಮ ಮಳೆ; ಕೆಲವೆಡೆ ಹಾನಿ

02:50 AM Jul 18, 2020 | Hari Prasad |

ಮಂಗಳೂರು/ ಉಡುಪಿ: ಕರಾವಳಿಯಲ್ಲಿ ಉತ್ತಮ ಮಳೆ ಮುಂದುವರಿದಿದೆ.

Advertisement

ಮಂಗಳೂರು ನಗರದಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಜಿಟಿ ಜಿಟಿ ಮಳೆಯಾಗಿದ್ದು, ರಾತ್ರಿಯೂ ಮುಂದುವರಿದಿತ್ತು.

ನಗರದ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು. ಕೆಲವು ಕಡೆಗಳಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿತ್ತು. ಕೆಲವು ಕಡೆಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಯಿತು.

ನಗರದ ಬೊಂಡಂತಿಲ ಬಳಿ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ. ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದಲ್ಲಿ ಮನೆಗೆ ಹಾನಿಯಾಗಿದೆ. ಬಜಪೆ ಕಳವಾರಿನ ಮನೆಯೊಂದರ ಕಾಂಪೌಂಡ್‌ ಕುಸಿದಿದೆ.

ಪುತ್ತೂರು, ಉಪ್ಪಿನಂಗಡಿ, ಕಡಬ, ಸುಳ್ಯ, ಜಾಲ್ಸೂರು, ಸುಬ್ರಹ್ಮಣ್ಯ, ಬಂಟ್ವಾಳ, ಕನ್ಯಾನ, ವಿಟ್ಲ, ಬೆಳ್ತಂಗಡಿ, ಧರ್ಮಸ್ಥಳ, ಮುಡಿಪು, ಮಡಂತ್ಯಾರು, ವೇಣೂರು, ಸುರತ್ಕಲ್‌ ಮೊದಲಾದೆಡೆ ಉತ್ತಮ ಮಳೆಯಾಗಿದೆ.

Advertisement

ಉಡುಪಿ ಜಿಲ್ಲೆಯ ಉಡುಪಿ, ಕಾಪು, ಪಡುಬಿದ್ರಿ, ಬೆಳ್ಮಣ್‌, ಕಾರ್ಕಳ, ಹಿರಿಯಡ್ಕ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಹೆಬ್ರಿ, ಗಂಗೊಳ್ಳಿ, ಸೇರಿದಂತೆ ವಿವಿಧೆಡೆ ದಿನವಿಡೀ ಉತ್ತಮ ಮಳೆಯಾಗಿದೆ.

ಕೊಡಗಿನಲ್ಲಿ ಉತ್ತಮ ಮಳೆ
ಕೊಡಗಿನಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆೆಯಾಗುತ್ತಿದ್ದು, ಜೀವನದಿ ಕಾವೇರಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕಾವೇರಿಯ ಉಗಮಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಈ ಬಾರಿ ಮುಂಗಾರಿಗೆ ಪೂರ್ವಭಾವಿಯಾಗಿ ಭಾಗಮಂಡಲ ನದಿ ಪಾತ್ರದಲ್ಲಿನ ಹೂಳೆತ್ತಿರುವುದರಿಂದ ಕಾವೇರಿಯ ನೀರು ಸಂಪರ್ಕ ರಸ್ತೆಗಳನ್ನು ಆವರಿಸಿಲ್ಲ. ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತಲ ಕಳೆದೆರಡು ದಿನಗಳಿಂದ ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಶುಕ್ರವಾರ ಮಧ್ಯಾಹ್ನದ ಅನಂತರ ಮಳೆಯ ಬಿರುಸು ತಗ್ಗಿದೆ.
ದಕ್ಷಿಣ ಕೊಡಗಿನ ಬಿರುನಾಣಿ – ನ್‌ಟ್‌ ಕುಂದ್‌ ರಸ್ತೆಯ ಸೇತುವೆ ಮೇಲೆ 3 ಅಡಿ ಎತ್ತರದಲ್ಲಿ ನೀರು ಹರಿದಿದೆ.
ಬ್ರಹ್ಮಗಿರಿ ಅರಣ್ಯ ವ್ಯಾಪ್ತಿಯ ಈ ಪ್ರದೇಶದಲ್ಲಿ 12 ಕುಟುಂಬಗಳಿದ್ದು, ಸಂಪರ್ಕ ಕಡಿತಕ್ಕೆ ಒಳಗಾಗಿದ್ದಾರೆ. ಕಕ್ಕಟ್ಟ್ ಪೊಳೆ ನದಿ ತುಂಬಿ ಹರಿಯುತ್ತಿದೆ.

ಆಗುಂಬೆ: 19 ಸೆಂ.ಮೀ. ಮಳೆ
ಶುಕ್ರವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂಗಾರು ಬಿರುಸಾಗಿತ್ತು. ಈ ಅವಧಿಯಲ್ಲಿ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಯಿತು. ಆಗುಂಬೆಯಲ್ಲಿ 19 ಸೆಂ.ಮೀ. ಮಳೆಯಾಗಿದ್ದು, ಇದು ರಾಜ್ಯದ ಅತ್ಯಧಿಕವಾಗಿತ್ತು.

ಈ ಅವಧಿಯಲ್ಲಿ ವಿವಿಧೆಡೆ ಸುರಿದ ಮಳೆ ಪ್ರಮಾಣ ಹೀಗಿದೆ (ಸೆಂ.ಮೀ.ಗಳಲ್ಲಿ):
ಕೊಲ್ಲೂರು, ಭಾಗಮಂಡಲ ತಲಾ 12, ಭಟ್ಕಳ, ಶಿರಾಲಿ, ಮೂಲ್ಕಿ, ಕೋಟ, ಕಾರ್ಕಳ ತಲಾ 11, ಕುಂದಾಪುರ, ಪುತ್ತೂರು, ಧರ್ಮಸ್ಥಳ, ಹೊನ್ನಾವರ, ಕಮ್ಮರಡಿ ತಲಾ 9, ಉಡುಪಿ, ಸುಬ್ರಹ್ಮಣ್ಯ, ಉಪ್ಪಿನಂಗಡಿ, ಮಾಣಿ ತಲಾ 8, ಮೂಡುಬಿದಿರೆ, ಕೊಟ್ಟಿಗೆಹಾರ, ಮಡಿಕೇರಿ, ಹೊಸನಗರ ತಲಾ 7, ಬೆಳ್ತಂಗಡಿ, ಮಂಗಳೂರು ವಿಮಾನ ನಿಲ್ದಾಣ, ಗೋಕರ್ಣ, ಕದ್ರಾ, ಮೂರ್ನಾಡು ತಲಾ 6, ಕಾರವಾರ, ಪಣಂಬೂರು, ವಿರಾಜಪೇಟೆ, ಸೋಮವಾರಪೇಟೆ, ಶೃಂಗೇರಿ, ಕಳಸ ತಲಾ 5, ಸಾಗರ, ಜಯಪುರ ತಲಾ 4, ಹುಂಚದಕಟ್ಟೆ 3, ಯೆಲ್ಲಾಪುರ, ತ್ಯಾಗರ್ತಿ, ಅರಸಾಳು, ಹಾರಂಗಿ ತಲಾ 2, ಧಾರವಾಡ, ಹಾವೇರಿ, ಕುಶಾಲನಗರ, ತರೀಕೆರೆ ತಲಾ 1.

ರವಿವಾರ ಮುಂಜಾನೆಯ ವರೆಗಿನ 48 ತಾಸುಗಳ ಅವಧಿಯಲ್ಲಿ ಕರಾವಳಿಯ ಎಲ್ಲೆಡೆ ಮತ್ತು ಒಳನಾಡಿನ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.

ಕರಾವಳಿಯಲ್ಲಿ ಜು.18 ಆರೆಂಜ್‌ ಮತ್ತು ಜು. 19ರಂದು ಎಲ್ಲೊ ಅಲರ್ಟ್‌ ಘೋಷಿಸಲಾಗಿದೆ. ಸಮುದ್ರ ಪ್ರಕ್ಷುಬ್ಧವಿರಲಿದ್ದು, ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಎಚ್ಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next