Advertisement

ಹಲವೆಡೆ ಮುಂಗಾರು ಚುರುಕು

03:00 AM Jul 05, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಜಲಾಶಯಗಳ ಒಳಹರಿವು ಹೆಚ್ಚಳವಾಗಿದೆ. ಇನ್ನೂ ಮೂರ್‍ ನಾಲ್ಕು ದಿನ ಕರಾವಳಿ ಸೇರಿ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ರಾಜ್ಯದಲ್ಲಿ ಮಂಗಳವಾರ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ. ಮುಂದಿನ ಮೂರ್‍ನಾಲ್ಕು ದಿನ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗಾವಿ, ಹಾಸನ ಮತ್ತಿತರ ಕಡೆ ಚದುರಿದಂತೆ ಹಾಗೂ ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಜುಲೈ 9ರವರೆಗೆ ಈ ವಾತಾವರಣ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮಂಗಳವಾರ ಬೆಳಗ್ಗೆ 8.30ಕ್ಕೆ ಕೊಲ್ಲೂರಿನಲ್ಲಿ 15 ಸೆಂ.ಮೀ., ಹೊನ್ನಾವರದಲ್ಲಿ 13 ಸೆಂ.ಮೀ., ಕೊಡಗಿನ ಭಾಗಮಂಡಲ, ಶಿವಮೊಗ್ಗದ ಆಗುಂಬೆ ಯಲ್ಲಿ 6 ಸೆಂ.ಮೀ., ಮಂಗಳೂರು, ಕದ್ರಾ, ಕೊಟ್ಟಿಗೆಹಾರದಲ್ಲಿ 5 ಸೆಂ.ಮೀ., ಲಿಂಗನಮಕ್ಕಿ ಸುತ್ತಮುತ್ತ 4 ಸೆಂ. ಮೀ., ಪಣಂಬೂರು, ಬೆಳ್ತಂಗಡಿ, ಸಿದ್ದಾಪುರ, ಕಾರವಾರ, ಮಡಿಕೇರಿ, ಮಾಣಿ, ಬಂಟ್ವಾಳ, ಶೃಂಗೇರಿ ಮತ್ತಿತರ ಕಡೆ 3ರಿಂದ 4 ಸೆಂ.ಮೀ. ಮಳೆ ದಾಖಲಾಗಿದೆ. ತುಮಕೂರು, ಬೆಳಗಾವಿ, ಕಲಘಟಗಿ, ಯಾದಗಿರಿಯ ಗುರು ಮಿಟ್ಕಲ್‌, ತ್ಯಾಗರ್ತಿ, ಹೊಸನಗರ, ಚಿಕ್ಕಮಗಳೂರು, ಬಾಳೆಹೊನ್ನೂರು, ಪಂಚನಹಳ್ಳಿ, ಆಲೂರು, ಅರಸೀಕೆರೆ, ಬೆಂಗಳೂರು ನಗರ, ನೆಲಮಂಗಲದಲ್ಲಿ 1 ರಿಂದ 2 ಸೆಂ.ಮೀ. ಮಳೆಯಾಗಿದೆ.

ಒಂದು ದಿನ ಉತ್ತಮ ಮಳೆಯಾದರೆ 100 ಕೋಟಿ ಉಳಿತಾಯ
ಬೆಂಗಳೂರು:
ರಾಜ್ಯಾದ್ಯಂತ ಒಂದು ದಿನ ಉತ್ತಮ ಮಳೆಯಾದರೆ 100 ಕೋಟಿ ರೂ. ಉಳಿತಾಯ. ಹೀಗೆಂದು ಹೇಳಿದವರು ಇಂಧನ ಸಚಿವ ಡಿ.ಕೆ.ಶಿವಕುಮಾರ್‌. ಅವರ ಈ ಹೇಳಿಕೆ ರಾಜ್ಯದ ರೈತರಷ್ಟೇ ಅಲ್ಲದೇ ಇಂಧನ ಇಲಾಖೆಯ ಆರ್ಥಿಕ ಸ್ಥಿತಿಯೂ ಮಳೆಯ ಮೇಲೆಯೇ ಅವಲಂಬಿತವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದಂತಿತ್ತು. ‘ಇಡೀ ರಾಜ್ಯಾದ್ಯಂತ ಒಂದು ದಿನ ಉತ್ತಮ ಮಳೆಯಾದರೆ ಇಂಧನ ಇಲಾಖೆಗೆ 100 ಕೋಟಿ ಉಳಿತಾಯವಾಗಲಿದೆ. ಈವರೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ಆತಂಕ ಮೂಡಿಸಿದೆ. ಇನ್ನೂ ಸ್ವಲ್ಪ ದಿನ ಕಾದು ನೋಡಲಾಗುವುದು. ಮುಂದಿನ ಪರಿಸ್ಥಿತಿ ನೋಡಿಕೊಂಡು ವಿದ್ಯುತ್‌ ಪೂರೈಕೆ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next