Advertisement
ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡದ ಪರಿಣಾಮ ಮೂರು ದಿನಗಳಿಂದ ಕೆಲವು ಕಡೆ ಉತ್ತಮ ಮಳೆಯಾಗುತ್ತಿದೆ. ಮಂಗಳೂರು, ಬೆಳ್ತಂಗಡಿ, ಗುರುವಾಯನಕೆರೆ, ಮುಂಡಾಜೆ, ಮಡಂತ್ಯಾರು, ಕಳೆಂಜ, ಬಂಟ್ವಾಳ, ಬಿ.ಸಿ.ರೋಡ್, ಉಪ್ಪಿನಂಗಡಿ, ವಿಟ್ಲ, ಪುತ್ತೂರು, ಕಡಬ, ಸುಳ್ಯ, ಸುರತ್ಕಲ್, ಕೋಟೆಕಾರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ಉತ್ತಮ ಮಳೆಯಾಗಿದೆ.ಉಡುಪಿ ಜಿಲ್ಲೆಯ ಮಣಿಪಾಲ, ಪಡುಬಿದ್ರಿ, ಕಟಪಾಡಿ, ಕಾಪು, ಶಿರ್ವ, ಕಾರ್ಕಳ ಮುಂತಾದ ಕಡೆಗಳಲ್ಲಿ ಸಂಜೆ ವೇಳೆಗೆ ಮಳೆ ಸುರಿದಿದೆ.
Related Articles
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಪಣಂಬೂರಿನಲ್ಲಿ 35 ಡಿ.ಸೆ. ಗರಿಷ್ಠ ಮತ್ತು 27 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನಗಳಲ್ಲಿ ಸಂಜೆ ವೇಳೆಗೆ ಗಾಳಿಯೊಂದಿಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ದ.ಕ. ಜಿಲ್ಲೆಯಲ್ಲಿ 64.5 ಮಿ.ಮೀ. ನಿಂದ 115.5 ಮಿ.ಮೀ. ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಅದೇ ರೀತಿ 10ರಿಂದ 20 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ.
Advertisement
ಸಿಡಿಲು ಬಡಿದು ಹಾನಿಕಡಬ ತಾಲೂಕಿನ ಕುಟ್ರಾಪ್ಪಾಡಿ ಗ್ರಾಮದ ಮೀನಾಡಿ ನಿವಾಸಿ ಬಾಳಪ್ಪ ಗೌಡ ಅವರ ಮನೆಗೆ ಸಿಡಿಲು ಬಡಿದು ಒಂದು ಪಾರ್ಶ್ವ ಹಾನಿಗೀಡಾಗಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಇಚಿಲಂಪಾಡಿಯ ಪಾದೆ ನಿವಾಸಿ ಸಾಂತಪ್ಪ ಗೌಡ ಅವರ ಮನೆಗೂ ಮಳೆಯಿಂದ ಹಾನಿಯಾಗಿದೆ. ಆಲಂಕಾರು ಗೋಳಿತ್ತಡಿ ಸಮೀಪ ಗಾಳಿಗೆ ಬೃಹತ್ ಗಾತ್ರದ ಮರವೊಂದು ರಸ್ತೆಗುರುಳಿದ ಪರಿಣಾಮ ಕೆಲಕಾಲ ರಸ್ತೆ ತಡೆ ಉಂಟಾಗಿತ್ತು. ಬಳಿಕ ಕಡಬ ಪೊಲೀಸರು ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿದ್ದಾರೆ. ಮರ ಬಿದ್ದುದರಿಂದ ವಿದ್ಯುತ್ ತಂತಿಗೆ ಹಾನಿಯಾಗಿದೆ. ಸಿಡಿಲು ಬಡಿದು ಹಾನಿ
ನೆರಿಯ ಗ್ರಾ.ಪಂ. ವ್ಯಾಪ್ತಿಯ ಅಕ್ಕೊಲೆಯಲ್ಲಿ ಸಿಡಿಲಿನ ಆಘಾತಕ್ಕೆ ಶಬೀರ್ ಗಾಯಗೊಂಡಿದ್ದಾರೆ. ಚಾರ್ಮಾಡಿ ಘಾಟಿಯ ಎರುಕಲ್ಲು ಗುಡ್ಡಕ್ಕೂ ಸಿಡಿಲು ಬಡಿದಿದೆ. ನೆರಿಯ ಗ್ರಾಮದ ಪುಲ್ಲಾಜೆಯಲ್ಲಿ ಸೀತಮ್ಮ ಅವರ ಮನೆಗೆ ಬೃಹತ್ ಗಾತ್ರದ ಮರ ಹಾಗೂ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಮನೆಯೊಳಗೆ ಶೇಖರಿಸಿಟ್ಟಿದ್ದ 2 ಕ್ವಿಂಟಾಲ್ ಅಡಿಕೆ, ದಿನಸಿ ಸಾಮಗ್ರಿ ನಷ್ಟವಾಗಿದೆ. ಕೊಡಗು: ವಿವಿಧೆಡೆ ಮಳೆ
ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ರವಿವಾರ ನಾಪೋಕ್ಲು, ಬೇತು ಗ್ರಾಮ ವ್ಯಾಪ್ತಿಯಲ್ಲಿ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗಿದೆ.ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ತುಂತುರು ಮಳೆಯಾಗಿದೆ.