Advertisement

ಕರಾವಳಿಯಲ್ಲಿ ಉತ್ತಮ ಮಳೆ; ಕೆಲವೆಡೆ ಮರ ಉರುಳಿ ಹಾನಿ

01:53 AM Jun 13, 2022 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರವಿವಾರ ಉತ್ತಮ ಮಳೆ ಯಾಗಿದ್ದು ಮುಂಗಾರು ಆಗಮ್ಜದ ವಾತಾವರಣ ಕಂಡುಬಂದಿದೆ. ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕು ಗಳಲ್ಲಿ ದಿನವಿಡೀ ಉತ್ತಮ ಮಳೆ ಸುರಿದಿದೆ. ಮಂಗಳೂರು, ಬಂಟ್ವಾಳ, ಮೂಡುಬಿದಿರೆಯಲ್ಲಿ ಮಧ್ಯಾಹ್ನದ ವೇಳೆಗೆ ಸ್ವಲ್ಪ ಬಿಸಿಲಿನ ವಾತಾವರಣ ಬಿಟ್ಟರೆ ದಿನಪೂರ್ತಿ ಮಳೆಯಾಗಿದೆ. ಇಚ್ಲಂಪಾಡಿ,¤ ಅನಿಲದಲ್ಲಿ ಮರ ಬಿದ್ದು ವಾಹನಗಳಿಗೆ ಹಾನಿಯಾಗಿದೆ.

Advertisement

ಸುಬ್ರಹ್ಮಣ್ಯ, ಸುಳ್ಯ: ದಿನವಿಡೀ ಮಳೆ
ಸುಳ್ಯ: ಸುಳ್ಯ, ಸುಬ್ರಹ್ಮಣ್ಯ ಪರಿಸರದಲ್ಲಿ ರವಿವಾರ ದಿನವಿಡೀ ಮಳೆಯಾಯಿತು. ಶನಿವಾರವೂ ಧಾರಕಾರ ಮಳೆಯಾಗಿದ್ದು, ರವಿವಾರವೂ ಬೆಳಗ್ಗೆ ಯಿಂದಲೇ ಮಳೆ ಮುಂದುವರಿದಿದೆ. ಸುಳ್ಯ ನಗರ, ಕನಕ ಮಜಲು, ಕಲ್ಲಗುಂಡಿ, ಸಂಪಾಜೆ, ಅರಂತೋಡು, ಐವರ್ನಾಡು, ಬೆಳ್ಳಾರೆ, ಕಲ್ಮಡ್ಕ, ಪಂಜ, ಸುಬ್ರಹ್ಮಣ್ಯ, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಐನಕಿದು, ಗುತ್ತಿಗಾರು, ಮಡಪ್ಪಾಡಿ, ಬಿಳಿನೆಲೆ ಭಾಗದಲ್ಲೂ ಮಳೆಯಾಯಿತು.

ಉಡುಪಿ: ಅಲ್ಲಲ್ಲಿ ಮಳೆ
ಉಡುಪಿ: ಜಿಲ್ಲೆಯಾದ್ಯಂತ ಶನಿವಾರ ತಡರಾತ್ರಿ, ರವಿವಾರ ಬಿಟ್ಟುಬಿಟ್ಟು ಮಳೆಯಾಗಿದೆ. ಬೈಂದೂರು, ಹೆಬ್ರಿ ಭಾಗದಲ್ಲಿ ಅತೀ ಹೆಚ್ಚು ಮಳೆ ಸುರಿದಿದೆ. ರವಿವಾರ ಬೆಳಗ್ಗೆಯಿಂದ ಸಂಜೆವರೆಗೆ ಕಾರ್ಕಳ, ಕುಂದಾಪುರ ಸಹಿತ ಉಡುಪಿ, ಮಣಿಪಾಲ, ಮಲ್ಪೆ, ಪರ್ಕಳ ಸುತ್ತಮುತ್ತ ಬಿಟ್ಟುಬಿಟ್ಟು ಮಳೆಯಾಗಿದೆ.

ಕಾಸರಗೋಡು: ಬಿರುಸಿನ ಮಳೆ
ಕುಂಬಳೆ: ಕಾಸರಗೋಡು ಜಿಲ್ಲೆಯಲ್ಲಿ ರವಿವಾರ ಬಿರುಸಿನ ಮಳೆ ಸುರಿದಿದೆ. ಕುಂಬಳೆ ಜುಮಾ ಮಸೀದಿ ಬಳಿಯ ಇಬ್ರಾಹಿಂ ಕುಟುಂಬ ವಾಸವಾಗಿದ್ದ ಮನೆಗೆ ಮರ ಬಿದ್ದು ಹಾನಿಯಾಗಿದೆ. ಮನೆಯೊಳಗಿದ್ದವರು ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕುಂಬಳೆ ಪೊಲೀಸರು, ಸ್ಥಳೀಯರು, ಹೆದ್ದಾರಿ ಕಾಮಗಾರಿಯ ಸಿಬಂದಿ ಆಗಮಿಸಿ ಬಿದ್ದ ಮರವನ್ನು ಕಡಿದು ತೆರವುಗೊಳಿಸಿದರು.

ಉಭಯ ಜಿಲ್ಲೆಯಲ್ಲಿ ಕ್ಷೀಣಿಸಿದ್ದ ಮುಂಗಾರು ಮಳೆ ರವಿವಾರದಿಂದ ಚುರುಕುಗೊಳ್ಳುವ ಲಕ್ಷಣ ಗೋಚರಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಜೂ.15ರ ವರೆಗೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದ್ದು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next