Advertisement

ಕೊಡಗು, ಮಲೆನಾಡು ಭಾಗದಲ್ಲಿ ಉತ್ತಮ ಮಳೆ

11:41 PM Jul 06, 2019 | Team Udayavani |

ಬೆಂಗಳೂರು: ಕೊಡಗು ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗಿದೆ. ಮಡಿಕೇರಿಯ ವಿವಿಧೆಡೆ ಬರೆ ಕುಸಿತ ಮತ್ತು ರಸ್ತೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಶನಿವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ರಾಜ್ಯದಲ್ಲಿಯೇ ಗರಿಷ್ಠ 16 ಸೆಂ.ಮೀ.ಮಳೆಯಾಗಿದೆ. ಮೂಡಿಗೆರೆ 15, ಲಿಂಗನಮಕ್ಕಿ 14 ಮತ್ತು ಭಾಗಮಂಡಲದಲ್ಲಿ 12 ಸೆಂ.ಮೀ.ಮಳೆ ಸುರಿದಿದೆ.

Advertisement

ಕೆಲವೆಡೆ ಮರಗಳು ಧರೆಗುರುಳಿವೆ. ನದಿ, ಕಿರುತೊರೆ, ಹೊಳೆಗಳಲ್ಲಿನ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ಇಳಿಯುವ ಮೆಟ್ಟಿಲುಗಳು ಜಲಾವೃತವಾಗಿವೆ. ಕಾವೇರಿ ನದಿ ಪಾತ್ರದ ಮೂರ್ನಾಡು ಬಲಮುರಿ, ಸಿದ್ದಾಪುರ, ಕುಶಾಲನಗರ ವಿಭಾಗಗಳಲ್ಲು ಉತ್ತಮ ಮಳೆಯಾಗುತ್ತಿದ್ದು, ಸೋಮವಾರಪೇಟೆ ರಸ್ತೆಯ ಅಂಚಿನಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರಿಂದಾಗಿ ಜನ ಆತಂಕಗೊಂಡಿದ್ದಾರೆ.

ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿ ಮಲೆನಾಡು ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಮಾವಿನ ಮರದ ಟೊಂಗೆ ಬಿದ್ದು ವ್ಯಾಪಾರಿಯೊಬ್ಬ ಗಾಯಗೊಂಡಿದ್ದಾನೆ. ಯಲ್ಲಾಪುರ ಸಮೀಪದ ಸಾವಗದ್ದೆ-ಬಿಸಗೋಡ ರಸ್ತೆಯಲ್ಲಿ ಮರ ಬಿದ್ದು, ಕೆಲಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಬೆಂಗಳೂರಿನಲ್ಲಿ ಸಂಜೆಯ ವೇಳೆ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು.

ಸೋಮವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಮತ್ತು ಉತ್ತರ ಒಳನಾಡಿನ ಹೆಚ್ಚಿನ ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next