Advertisement

Rain;ಕರಾವಳಿಯಲ್ಲಿ ಬಿರುಸು ಪಡೆದ ಮಳೆ; ತುಂಬುತ್ತಿವೆ ಹಳ್ಳ-ಕೊಳ್ಳ

12:45 AM Jun 25, 2023 | Team Udayavani |

ಮಂಗಳೂರು: ರಾಜ್ಯ ಕರಾವಳಿ ಭಾಗದಲ್ಲಿ ಕೆಲವು ದಿನಗಳ ಹಿಂದೆ ಕ್ಷೀಣಿಸಿದ್ದಮುಂಗಾರು ಬಿರುಸು ಪಡೆದುಕೊಂಡಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಶನಿವಾರ ಉತ್ತಮ ಮಳೆ ಸುರಿದಿದೆ.

Advertisement

ಜಿಲ್ಲೆಯ ಬಂಟ್ವಾಳ, ಬಿ.ಸಿ. ರೋಡ್‌, ಫ‌ರಂಗಿಪೇಟೆ, ವಿಟ್ಲ, ಕನ್ಯಾನ, ಬೆಳ್ತಂಗಡಿ, ಚಾರ್ಮಾಡಿ, ಗುರುವಾಯನಕೆರೆ, ಧರ್ಮಸ್ಥಳ, ಉಜಿರೆ, ಮಡಂತ್ಯಾರು, ಕರಾಯ, ವೇಣೂರು, ಕೊಕ್ಕಡ, ನಾರಾವಿ, ಪುತ್ತೂರು, ಉಪ್ಪಿನಂಗಡಿ, ಇಳಂತಿಲ, ಕಡಬ, ಸುಬ್ರಹ್ಮಣ್ಯ, ಸುಳ್ಯ, ಐವರ್ನಾಡು, ಬೆಳ್ಳಾರೆ, ಐನೆಕಿದು, ಸುರತ್ಕಲ್‌, ಮಂಗಳೂರು, ಮೂಡುಬಿದಿರೆ, ಮೂಲ್ಕಿ, ಮುಡಿಪು ಸಹಿತ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.

ಮರ ಬಿದ್ದು ಹಾನಿ
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ವಾಸ್ತವ್ಯದ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಮಂಗಳೂರಿನ ಕೊಡಕ್ಕಲ್‌ ಬಳಿ ರಸ್ತೆಯೊಂದಕ್ಕೆ ಮರ ಬಿದ್ದು, ಕೆಲ ಕಾಲ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಸಮುದ್ರದಲ್ಲಿ ಅಲೆಗಳ ಅಬ್ಬರವೂ ಹೆಚ್ಚಿತ್ತು.

ವಾರದಿಂದ ವಾರಕ್ಕೆ ಮಳೆ ಹೆಚ್ಚಳ
ಉಭಯ ಜಿಲ್ಲೆಗಳಲ್ಲಿ ಕಳೆದ ಎರಡು ವಾರಗಳಿಗೆ ಹೋಲಿಕೆ ಮಾಡಿದರೆ ಈ ವಾರ ಮಳೆಯ ಬಿರುಸು ಹೆಚ್ಚಾಗಿದೆ. ಜೂ. 11ರಿಂದ 17ರ ವರೆಗೆ ದ.ಕ. ಜಿಲ್ಲೆಯಲ್ಲಿ 74.5 ಮಿ.ಮೀ. ಮತ್ತು ಉಡುಪಿ ಜಿಲ್ಲೆಯಲ್ಲಿ 79.6 ಮಿ.ಮೀ. ಮಳೆಯಾಗಿತ್ತು. ಆದರೆ ಜೂ. 18ರಿಂದ 24ರ ವರೆಗೆ ದ.ಕ. ಜಿಲ್ಲೆಯಲ್ಲಿ 110.6 ಮಿ.ಮೀ. ಮತ್ತು ಉಡುಪಿ ಜಿಲ್ಲೆಯಲ್ಲಿ 80.6 ಮಿ.ಮೀ. ಮಳೆಯಾದ ವರದಿಯಾಗಿದೆ. ಸದ್ಯದ ಮುನ್ಸೂಚನೆಯಂತೆ ಮುಂದಿನ 3 ದಿನಗಳ ಕಾಲ ಮತ್ತಷ್ಟು ಮಳೆ ಸುರಿಯುವ ನಿರೀಕ್ಷೆ ಇದೆ. ಸದ್ಯದ ಮುಂಗಾರು ಅವಧಿಯ ಲೆಕ್ಕಾಚಾರದಂತೆ ಜೂನ್‌ 1ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 207 ಮಿ.ಮೀ. ಮಳೆಯಾಗಿದ್ದು, ಶೇ. 70ರಷ್ಟು ಕೊರತೆ ಮತ್ತು ಉಡುಪಿ ಜಿಲ್ಲೆಯಲ್ಲಿ 266 ಮಿ.ಮೀ. ಮಳೆಯಾಗಿ ಶೇ. 68ರಷ್ಟು ಕೊರತೆ ಇದೆ.

ಉಷ್ಣಾಂಶದಲ್ಲಿ ಇಳಿಕೆ
ದ.ಕ., ಉಡುಪಿ ಜಿಲ್ಲೆಯಲ್ಲಿ ಶನಿವಾರ ಮಳೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಇಳಿಕೆ ಕಂಡಿತ್ತು. ಶನಿವಾರ ಮಂಗಳೂರಿನಲ್ಲಿ 28 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1 ಡಿ.ಸೆ. ಕಡಿಮೆ ಇತ್ತು. ವಾಡಿಕೆಯಂತೆ 23.2 ಡಿ.ಗೆ ಕನಿಷ್ಠ ತಾಪಮಾನ ದಾಖಲಾಗಿತ್ತು.

Advertisement

ನಿಯಂತ್ರಣ ಕೊಠಡಿ
ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಹಿಂದೆಯೇ ಟೋಲ್‌ ಫ್ರೀ ಸಂಖ್ಯೆ ತೆರೆದಿದೆ. ಅದರಂತೆ 24×7 ನಿಯಂತ್ರಣ ಕೊಠಡಿ 1077 ಅಥವಾ 0824-2442590 ಸಂಪರ್ಕಿಸಬಹುದು.

ಕುಮಾರಧಾರೆಯಲ್ಲಿ ಹರಿವು ಹೆಚ್ಚಳ
ಸುಳ್ಯ/ಸುಬ್ರಹ್ಮಣ್ಯ: ಸುಳ್ಯ ನಗರ, ಕುಕ್ಕೆ ಸುಬ್ರಹ್ಮಣ್ಯ ಭಾಗದಲ್ಲಿ ಶನಿವಾರ ಮಧ್ಯಾಹ್ನ ಒಂದು ಗಂಟೆ ಕಾಲ ಧಾರಾಕಾರ ಮಳೆಯಾಗಿದೆ. ಉಳಿದಂತೆ ಬೆಳಗ್ಗೆ ಹಾಗೂ ಸಂಜೆ ವೇಳೆಗೆ ಸಾಧಾರಣ ಮಳೆಯಾಗಿದೆ. ಸುಳ್ಯ ನಗರ, ಸುಳ್ಯ ತಾಲೂಕಿನ ಬೆಳ್ಳಾರೆ, ಐವರ್ನಾಡು, ಜಾಲೂÕರು, ಮಂಡೆಕೋಲು, ಪಂಜ, ಕೊಲ್ಲಮೊಗ್ರು, ಗುತ್ತಿಗಾರು, ಅರಂತೋಡು, ಸಂಪಾಜೆ, ಕಡಬ ತಾಲೂಕಿನ ಎಡಮಂಗಲ, ಕುಕ್ಕೆ ಸುಬ್ರಹ್ಮಣ್ಯ, ಬಿಳಿನೆಲೆ ಐನೆಕಿದು ಭಾಗದಲ್ಲಿ ಮಳೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಅಲ್ಪ ಏರಿಕೆ ಕಂಡಿದೆ.

ಆರೆಂಜ್‌ ಅಲರ್ಟ್‌
ರಾಜ್ಯ ಕರಾವಳಿ ಭಾಗದಲ್ಲಿ “ಆರೆಂಜ್‌ ಅಲರ್ಟ್‌’ ಅನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಜೂ. 25ರ ಬೆಳಗ್ಗೆ 8.30ರ ವರೆಗೆ ಆರೆಂಜ್‌ ಅಲರ್ಟ್‌ ಘೊಷಣೆ ಮಾಡಲಾಗಿದ್ದು, ಈ ವೇಳೆ 115.6 ಮಿ.ಮೀ.ನಿಂದ 204.4 ಮಿ.ಮೀ. ವರೆಗೆ ಮಳೆಯಾಗುವ ನಿರೀಕ್ಷೆ ಇದೆ. ಜೂ. 25ರ ಬೆಳಗ್ಗೆ 8.30ರಿಂದ 29ರ ವರೆಗೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಈ ವೇಳೆ 64.5 ಮಿ.ಮೀ.ನಿಂದ 115.5 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ.

ಕೇರಳ ಭಾಗದಲ್ಲಿ ನಿಮ್ನ ಒತ್ತಡ (ಟ್ರಫ್‌) ನಿರ್ಮಾಣವಾಗಿದ್ದು, ರಾಜ್ಯ ಕರಾವಳಿ ಭಾಗದಲ್ಲಿ ಜೂ. 25ರ ಬೆಳಗ್ಗೆ ವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ನಿಮ್ನ ಒತ್ತಡದ ಪರಿಣಾಮ ಮುಂದಿನ ಕೆಲವು ದಿನಗಳ ಕಾಲ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. – ಪ್ರಸಾದ್‌, ಭಾರತೀಯ
ಹವಾಮಾನ ಇಲಾಖೆ ಅಧಿಕಾರಿ

ಉಡುಪಿ ಜಿಲ್ಲೆಯ ಹಲವು ಮನೆಗಳಿಗೆ ಹಾನಿ
ಉಡುಪಿ: ಜಿಲ್ಲೆಯಲ್ಲಿ ಶನಿವಾರ ಹಲವೆಡೆ ಉತ್ತಮ ಮಳೆಯಾ ಗಿದ್ದು, ಹಲವೆಡೆ ಹಾನಿ ಸಂಭವಿಸಿದೆ. ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ 4 ಮನೆಗಳಿಗೆ ಹಾನಿಯಾಗಿದೆ. ಹೆಮ್ಮಾಡಿಯ ನೀಲು, ಚಂದ್ರ, ತೆಕ್ಕಟ್ಟೆ ಗುಲಾಬಿ, ಬಸ್ರೂರು ಮುತ್ತು ಮಡಿವಾಳ್ತಿ ಅವರ ಮನೆಗೆ ಹಾನಿ ಸಂಭವಿಸಿದೆ.

ಪಡುಬಿದ್ರಿ, ಬೈಂದೂರು, ಹೆಬ್ರಿ, ಕಾರ್ಕಳ, ಅಜೆಕಾರು, ಶಂಕರ ನಾರಾಯಣ, ಕುಂದಾಪುರ, ಕಾರ್ಕಳ, ಕಾಪು, ಸಿದ್ದಾಪುರ, ಬ್ರಹ್ಮಾವರ, ಕಾಪು, ಬೆಳ್ಮಣ್‌ ಸುತ್ತಮುತ್ತಲಿನ ಭಾಗದಲ್ಲಿ ಕೆಲಕಾಲ ನಿರಂತರ ಮಳೆಯಾಗಿದೆ. ಉಡುಪಿ, ಮಣಿಪಾಲ, ಪರ್ಕಳ, ಮಲ್ಪೆ ಪರಿಸರದಲ್ಲಿ ಬೆಳಗ್ಗೆ ಮೋಡ ಬಿಸಿಲಿನ ವಾತಾವರಣ ಇದ್ದು, ಮಧ್ಯಾಹ್ನ ಅನಂತರ ಮಳೆಯಾಗಿದೆ.

ಜಿಲ್ಲೆಯ ಸ್ವರ್ಣಾ, ಸೀತಾನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.

ಮನೆ ಕುಸಿತ: ಮಹಿಳೆ ಅಪಾಯದಿಂದ ಪಾರು
ಅಲೆವೂರು ಗ್ರಾಮದ ಪ್ರಗತಿ ನಗರದಲ್ಲಿ ಸುಮಾ ರಮೇಶ್‌ ಆಚಾರ್ಯ ಅವರ ಮನೆಗೆ ಪಕ್ಕದ ಮನೆಯ ಗೋಡೆ ಕುಸಿದು ಬಿದ್ದು, ಮನೆಗೆ ತೀವ್ರ ಹಾನಿ ಸಂಭವಿಸಿದೆ.

ಸುಮಾ ಅವರು ಮನೆಯ ಹೊರಗೆ ಇದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್‌ ಕಿಣಿ, ಗ್ರಾ.ಪಂ. ಅಧ್ಯಕ್ಷೆ ಪುಷ್ಪಾ ಅಂಚನ್‌, ಸದಸ್ಯ ಜಲೇಶ್‌ ಶೆಟ್ಟಿ, ಮಾಜಿ ಸದಸ್ಯ ಸುಂದರ ನಾಯಕ್‌ ಭೇಟಿ ನೀಡಿದರು.

ಮುಂಡ್ಲಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ
ಕಾರ್ಕಳ: ಪಶ್ಚಿಮ ಘಟ್ಟ ತಪ್ಪಲಿನ ಮಾಳ, ಈದು ಭಾಗದಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗಿದ್ದು ಶನಿವಾರ ಸಂಜೆ ತನಕ ಈ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಪರಿಣಾಮ ಸ್ವರ್ಣಾ ನದಿ ಸೇರುವ ಮುಂಡ್ಲಿ ಜಲಾಶಯದಲ್ಲಿ ನೀರಿಮ ಮಟ್ಟ ಏರಿಕೆ ಕಂಡಿದೆ. ಮಾಳ ಹಾಗೂ ತೆಳ್ಳಾರು ಭಾಗದಿಂದ ನದಿಗಳೆರಡು ಹರಿದು ಬಂದು ಮುಂಡ್ಲಿ ಜಲಾಶಯದ ಮೂಲಕ ಎಣ್ಣೆಹೊಳೆ ಸೇರಿ ಮುಂದೆ ಸ್ವರ್ಣೆಯ ಮೂಲಕ ಉಡುಪಿ ಭಾಗದ ಕಜೆ ಭಾಗಕ್ಕೆ ಹರಿಯುತ್ತದೆ.

ಬೆಳ್ತಂಗಡಿ: ಮರಗಳು ಉರುಳಿ ಹಾನಿ
ಬೆಳ್ತಂಗಡಿ: ಮುಂಗಾರು ಆರಂಭವಾಗುವ ಮುನ್ನವೇ ಸುರಿದ ಮಳೆಗೆ ಬೆಳ್ತಂಗಡಿ ತಾಲೂಕಿನಲ್ಲಿ ರಸ್ತೆ ಸಹಿತ ಮರಗಳು ಉರುಳಿ ಹಾನಿ ಸಂಭವಿಸುತ್ತಿವೆ.

ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆ ಸುರಿಯಲಾರಂಭಿಸಿದ್ದು ಶನಿವಾರ ಕಡಿರುದ್ಯಾವರ ಗ್ರಾಮದ ಅಮೀನಮ್ಮ ಫಕ್ರುದ್ದೀನ್‌ ಅವರ ವಾಸ್ತವ್ಯದ ಮನೆಯ ಮೇಲೆ ಗಾಳಿ ಮಳೆಗೆ ಮರ ಬಿದ್ದು ಮನೆ ಭಾಗಶಃ ಹಾನಿಗೀಡಾಗಿದೆ. ಸ್ಥಳಕ್ಕೆ ಪಂಚಾಯತ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಉಳಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯಲ್ಲೇ ನೀರು ಹರಿದು ಸಮಸ್ಯೆ ಎದುರಾಗಿದ್ದು ಅಲ್ಲಲ್ಲಿ ಮಣ್ಣಿನ ರಸ್ತೆಗಳು ಹದಗೆಟ್ಟಿವೆ.

ಕುಂದಾಪುರ: ಉತ್ತಮ ಮಳೆ; ಕಡಲಬ್ಬರವೂ ಬಿರುಸು
ಕುಂದಾಪುರ: ಕುಂದಾಪುರ, ಬೈಂದೂರು ಭಾಗದಲ್ಲಿ ಶನಿವಾರ ದಿನವಿಡೀ ಭಾರೀ ಮಳೆಯಾ ಗಿದೆ. ಕಡಲಬ್ಬರವೂ ಬಿರುಸಾಗಿತ್ತು.

ಕುಂದಾಪುರ, ಬೈಂದೂರು, ಕೋಟೇಶ್ವರ, ಸಿದ್ದಾಪುರ, ಕೊಲ್ಲೂರು, ಗೋಳಿಯಂಗಡಿ ಸಹಿತ ಎಲ್ಲ ಕಡೆಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ನಿರಂತರ ಮಳೆಯಾಗಿತ್ತು.

2-3 ದಿನಗಳಿಂದ ಮಳೆ ಬಿರುಸು ಪಡೆದಿರುವುದರಿಂದ ಕುಂದಾಪುರದ ವಿವಿಧೆಡೆಗಳಲ್ಲಿ ಮುಂಗಾರು ಹಂಗಾಮಿನ ನಾಟಿ ಕಾರ್ಯಕ್ಕೂ ಚಾಲನೆ ಸಿಕ್ಕಿದೆ.

ನಿರಂತರ ಮಳೆಯಿಂದಾಗಿ ಶನಿವಾರ ಕೋಡಿ, ಗಂಗೊಳ್ಳಿ, ಕಂಚುಗೋಡು, ಮರವಂತೆ, ನಾವುಂದ, ಕೊಡೇರಿ, ಶಿರೂರು ಭಾಗದಲ್ಲಿ ಕಡಲ ಅಲೆಗಳ ಅಬ್ಬರವೂ ತುಸು ಜೋರಾಗಿಯೇ ಇತ್ತು. ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದ ದೃಶ್ಯ ಕಂಡು ಬಂತು.

ಬಿ.ಸಿ.ರೋಡು – ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ
ಕೃತಕ ನೆರೆ, ಕೆಸರಿನ ಭೀತಿ
ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಕಾಮಗಾರಿಯಿಂದ ಮಳೆಗಾಲದಲ್ಲಿ ಈ ಬಾರಿಯೂ ಹೆದ್ದಾರಿ ಸಂಚಾರ ಸಂಕಷ್ಟವನ್ನು ತರುವ ಸಾಧ್ಯತೆ ಹೆಚ್ಚಿದ್ದು, ರಸ್ತೆಯಲ್ಲಿ ಕೃತಕ ನೆರೆಯ ಜತೆಗೆ ಕೆಸರುಮಯಗೊಳ್ಳುವ ಆತಂಕವೂ ಎದುರಾಗಿದೆ. ಕಳೆದ ಬಾರಿ ಕಲ್ಲಡ್ಕ ಪ್ರದೇಶ ದಲ್ಲಿ ಸಾಕಷ್ಟು ತೊಂದರೆಯಾಗಿದ್ದು, ಈ ಬಾರಿ ಪುನರಾವರ್ತನೆ ಯಾಗುವ ಸಾಧ್ಯತೆ ಇದೆ.

ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಮಧ್ಯೆ ಕಲ್ಲಡ್ಕದಲ್ಲಿ ಮಾತ್ರ ಫ್ಲೆ$çಓವರ್‌ ನಿರ್ಮಾಣಗೊಳ್ಳುತ್ತಿದ್ದು, ಅದಕ್ಕೆ ಅದಕ್ಕೆ ಪಿಲ್ಲರ್‌ಗಳ ನಿರ್ಮಾಣವಾಗಿದೆಯೇ ಹೊರತು ಭೂ ಭಾಗ ದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಹೀಗಾಗಿ ಮತ್ತೆ ಮಳೆ ನೀರು ಹರಿಯಲು ಸಾಧ್ಯವಾಗದೆ ಪೇಟೆಯಲ್ಲಿ ನೀರು ತುಂಬುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯಕ್ಕೆ ಮಳೆ ವಿಳಂಬವಾಗಿರುವ ಜತೆಗೆ ದೊಡ್ಡ ಪ್ರಮಾಣದ ಮಳೆ ಇನ್ನೂ ಬಾರದೇ ಇರುವುದರಿಂದ ಈಗ ಸಮಸ್ಯೆಯಾಗದೇ ಇದ್ದರೂ ಮುಂದೆ ಹೇಗಾಗುತ್ತದೆ ಎಂಬುದನ್ನು ಹೇಳು ವಂತಿಲ್ಲ. ಉಳಿದಂತೆ ಪಾಣೆಮಂಗಳೂರು, ಮೆಲ್ಕಾರ್‌, ಮಾಣಿ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್‌ ನಿರ್ಮಾಣಕ್ಕಾಗಿ ಹೆದ್ದಾರಿ ಯನ್ನು ಎತ್ತರಗೊಳಿಸಲು ವ್ಯಾಪಕ ಪ್ರಮಾಣದಲ್ಲಿ ಮಣ್ಣು ತುಂಬಿಸಲಾಗಿದ್ದು, ಹೀಗಾಗಿ ತಗ್ಗಿನಲ್ಲಿರುವ ಈ ಜಂಕ್ಷನ್‌ಗಳ ಸ್ಥಿತಿ ಏನು ಎಂದು ಹೇಳುವಂತಿಲ್ಲ.

ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್‌ ಬಳಿ ಅಂಡರ್‌ಪಾಸ್‌ ನಿರ್ಮಾಣವಾಗಿದ್ದರೂ ಮಣ್ಣು ತುಂಬಿಸುವ ಕಾರ್ಯ ನಡೆದಿಲ್ಲ. ಆದರೂ ಅಗೆದು ಹಾಕಿರುವ ಪರಿಣಾಮ ನೀರು ಯಾವ ರೀತಿ ಹರಿಯುತ್ತದೆ ಎಂದು ಹೇಳುವಂತಿಲ್ಲ.
ನೆಲ್ಯಾಡಿ ಜಂಕ್ಷನ್‌ ಪ್ರದೇಶದಲ್ಲಿ ಹಲವು ಅಂಡರ್‌ಪಾಸ್‌ ನಿರ್ಮಿಸಿ ಸಾಕಷ್ಟು ಉದ್ದಕ್ಕೆ ಹೆದ್ದಾರಿಯನ್ನು ಎತ್ತರಿಸಲಾಗಿದೆ. ಹೀಗಾಗಿ ತಗ್ಗಿನಲ್ಲಿರುವ ನೆಲ್ಯಾಡಿ ಪೇಟೆಯ ಪರಿಸ್ಥಿತಿಯೂ ಮಳೆ ನೀರಿನಿಂದ ತುಂಬುವ ಸಾಧ್ಯತೆ ಇದೆ ಎಂಬ ಅನುಮಾನ ಸ್ಥಳೀಯರದ್ದು.

ಹೀಗಾಗಿ ಪ್ರಸ್ತುತ ಮಳೆ ನಿಧಾನಕ್ಕೆ ವೇಗವನ್ನು ಪಡೆದು ಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಹಂತ ಹಂತವಾಗಿ ಮಳೆ ನೀರು ಹರಿಯುವುದಕ್ಕೆ ವ್ಯವಸ್ಥೆ ಮಾಡಿಕೊಟ್ಟಲ್ಲಿ ಮುಂದೆ ಎದುರಾಗುವ ಅನಾಹುತವನ್ನು ತಪ್ಪಿಸಬಹುದು. ಇಲ್ಲದೇ ಇದ್ದರೆ ಈ ಬಾರಿಯೂ ಮಂಗಳೂರು-ಬೆಂಗಳೂರು ಹೆದ್ದಾರಿ ಸಂಚಾರ ಅಯೋಮಯವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next