Advertisement

ನರೇಗಾ ಯೋಜನೆಯಡಿ ಉತ್ತಮ ಪ್ರಗತಿ

04:16 PM May 06, 2022 | Team Udayavani |

ಹೊನ್ನಾಳಿ: ಉದ್ಯೋಗ ಖಾತ್ರಿ ಯೋಜನೆಯಡಿ ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕಿನಾದ್ಯಂತ 10 ಲಕ್ಷಕ್ಕಿಂತ ಹೆಚ್ಚು ಮಾನವ ದಿನ ಸೃಜನೆಯಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ತಾಲೂಕಿನ ಮಾದೇನಹಳ್ಳಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ‘ನಮ್ಮ ಹೊಲ ನಮ್ಮ ರಸ್ತೆ’ ಯೋಜನೆಯಡಿ 9 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ವರ್ಷ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕು ಗ್ರಾಪಂ ಕಟ್ಟಡ, ಸಮಗ್ರ ಕೆರೆ ಅಭಿವೃದ್ಧಿ, ನಮ್ಮ ಹೊಲ ನಮ್ಮ ರಸ್ತೆ, ವೈಯಕ್ತಿಕ ಕಾಮಗಾರಿ ಯೋಜನೆಯಡಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಅಭಿವೃದ್ಧಿಗೆ ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡಿದ್ದರಿಂದ ಜೆಲ್ಲೆಯಲ್ಲಿಯೇ ನಮ್ಮ ತಾಲೂಕು ಪ್ರಥಮ ಸ್ಥಾನದಲ್ಲಿತ್ತು. ಈ ವರ್ಷವೂ ನರೇಗಾ ಯೋಜನಡಿಯಲ್ಲಿ ಅವಳಿ ತಾಲೂಕಿನಲ್ಲಿ ವಿವಿಧ ಕಾಮಗಾರಿಗಳನ್ನು ಮಾಡಿಸಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಅವಳಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಮಾಡಿಸಿದ್ದೇನೆ. ಗ್ರಾಮಗಳಲ್ಲಿ ಇನ್ನೂ ಯಾವುದಾದರೂ ಅಭಿವೃದ್ಧಿ ಕಾರ್ಯ ಆಗಬೇಕಿದೆ ಎಂದು ತಿಳಿಸಿದರೆ ಅದನ್ನು ಗಮನಿಸಿ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇನೆ. ಎರಡು ತಾಲೂಕುಗಳ 295 ಅಂಗನವಾಡಿ ಕಟ್ಟಡಗಳ ಪೈಕಿ 218 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ನಡೆಯುತ್ತಿವೆ. 77 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡ, ಸರ್ಕಾರಿ ಶಾಲಾ ಕೊಠಡಿಗಳಲ್ಲಿ ಹಾಗೂ ಸಮುದಾಯ ಭವನದಲ್ಲಿ ನಡೆಯುತ್ತಿವೆ. ಬಾಕಿ 77 ಅಂಗನವಾಡಿ ಕೇಂದ್ರಗಳಿಗೂ ಸ್ವಂತ ಕಟ್ಟಡಗಳನ್ನು ನಿರ್ಮಿಸಿ ಕೊಡುವುದಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ 11.60 ಲಕ್ಷ ರೂ. ವೆಚ್ಚದ ಸುಸಜ್ಜಿತವಾದ ಅಂಗನವಾಡಿ ಕಟ್ಟಡ ಹಾಗೂ 15 ಲಕ್ಷ ರೂ. ವೆಚ್ಚದ ಸಿಸಿ ರಸ್ತೆಯನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಉದ್ಘಾಟಿಸಿದರು. ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಮಾದೇನಹಳ್ಳಿ ನಾಗರಾಜ್‌, ಗ್ರಾಪಂ ಸದಸ್ಯರಾದ ಮಮತಾ ಸಿದ್ದೇಶ್‌, ಕವಿತಾ ಶಿವಕುಮಾರ್‌, ಕುಬೇರಪ್ಪ, ಮುಖಂಡರಾದ ನಾಗರಾಜ, ಉಜ್ಜಪ್ಪ, ತಿಮ್ಮನಗೌಡ, ದೊಡ್ಡೇಶ್‌, ನಾಗರಾಜಪ್ಪ, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ, ಭಾಗ್ಯ, ನಾಗರತ್ನಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next