ಶಾಲೆ ಗೇಟು ದಾಟಿ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಬಲು ದೂರದಿಂದ ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸುವ ಪುಟಾಣಿ ಮಕ್ಕಳ ಇಂಪಾದ ಸ್ವರಗಳು ಇವು. ಪ್ರತಿದಿನ, ಪ್ರತಿಸಲ ಅದೆಷ್ಟು ಬಾರಿ ನಮಸ್ಕರಿಸಿದರೂ ಮತ್ತೂಮ್ಮೆ ನಮಸ್ಕರಿಸುವ ಮುಗ್ಧ ಮನಸ್ಸುಗಳಿಗೆ ಗುರುವಂದನೆಯೇ ಮೊದಲ ಸಂಭ್ರಮ. ಪ್ರತಿದಿನ ನೂರಾರು ಕೈಗಳ ನಮನಗಳು ಈಗ ನನಗೂ ಸಿಗುತ್ತಿದೆ. ನಾನೂ ಒಬ್ಬಳು ಶಾಲಾಶಿಕ್ಷಕಿ.
ನಾವೆಷ್ಟೇ ಪ್ರಬುದ್ಧರಾಗಿದ್ದರೂ ಮಕ್ಕಳ ಜೊತೆ ಮಕ್ಕಳಾಗಲೇ ಬೇಕಲ್ಲವೇ? ಅದೆಂತಹ ಮೋಡಿಯ ಜಾಲವೋ ನನಗೆ ತಿಳಿಯದು! ಮಕ್ಕಳ ಜೊತೆ ಬೆರೆಯುವುದು ಯೋಗಾಭ್ಯಾಸ ಮಾಡಿ ಮನಸ್ಸನ್ನು ಹತೋಟಿಯಲ್ಲಿ ಇಟ್ಟಂತೆಯೇ ಸರಿ. ಪ್ರಪಂಚದ ಇತರ ಜಂಜಾಟವನ್ನು ಮರೆಸಿ ಇದ್ದುದರಲ್ಲೇ ಖುಷಿ ಪಡೆಯುವ ಮನಸ್ಸುಗಳು. ಯಾವ ಮುಜುಗರ, ಯಾವ ಭೀತಿಯೂ ಇಲ್ಲದೆ ಸ್ವತ್ಛಂದವಾಗಿ ಹಾರಾಡುವ ಪುಟ್ಟ ಪುಟ್ಟ ಚಿಟ್ಟೆಗಳ ಲೋಕದಲ್ಲಿ ಹಾರಾಡುವ ಸಂಭ್ರಮ ಈಗ ನನ್ನ ಪಾಲಿಗೆ. ಮತ್ತೂಮ್ಮೆ ನಾನು ಬಾಲ್ಯದತ್ತ ತಿರುಗುತ್ತಿದ್ದೇನೋ ಅನ್ನಿಸಿದ್ದು ಮಾತ್ರ ಸುಳ್ಳಲ್ಲ. ಸ್ಫರ್ಧಾತ್ಮಕ ಯುಗದಲ್ಲಿ ನಾನು-ನನ್ನದು ಎಂಬ ಪೈಪೋಟಿಯಲ್ಲಿ ನಮ್ಮವರು-ತಮ್ಮವರು ಎಂಬ ಭಾವನಾತ್ಮಕ ಸಂಬಂಧಗಳು ದೂರವಾಗುತ್ತಿರುವ ಯಾಂತ್ರಿಕ ಬದುಕಿನಲ್ಲಿ ಮಕ್ಕಳ ಮುಗ್ಧತೆ ಎಲ್ಲವನ್ನು ಕಲಿಸುತ್ತದೆ ಎನ್ನಲೆ!
ಆಗ ತಾನೇ ಅಂಗನವಾಡಿಯಿಂದ ಎರಡು ಪದ್ಯ, ಎರಡು ಅಕ್ಷರಗಳನ್ನು ಪಠಿಸುತ್ತ, ಒಂದನೆಯ ತರಗತಿಗೆ ಬಂದಿರುವ ಪುಟ್ಟ ಪುಟ್ಟ ಮಕ್ಕಳಿಗೆ ತಮ್ಮ ಹೆಸರೇ ಕೆಲವೊಮ್ಮೆ ಗೊಂದಲ. ಮಾತನಾಡಲು ಶುರು ಮಾಡಿದರೆಂದರೆ ಅವರ ಆಡುಭಾಷೆ ಬೆರೆತ ಸಂಭಾಷಣೆಯನ್ನು ಕೇಳುವುದೇ ಕಿವಿಗೆ ಇಂಪು. ಮುಗ್ಧತೆಯ ಪ್ರತಿರೂಪವೇ ಮಕ್ಕಳು. ಅವರು ಆಡಿದ್ದೇ ಆಟ. ಮಾಡಿದ್ದೇ ಪಾಠ. ತಪ್ಪು ಮಾಡಿದಾಗ ಬೈಯೋಣವೆಂದರೂ ಕೆಲವೊಮ್ಮೆ ಮನಸ್ಸು ಒಲ್ಲದು. ಕೆಲವೊಮ್ಮೆ ನಗೆಗಡಲಲ್ಲಿ ತೇಲಿ ಕೊನೆಗೆ ಕಾರಣವಿಲ್ಲದೇ ಪೇಚಾಡುವ ಕ್ಷಣ. ಮಕ್ಕಳ ಪ್ರತಿಯೊಂದು ಹಾವ-ಭಾವ, ಚೇಷ್ಠೆ, ಮುಗ್ಧತೆಯಲ್ಲಿ ನಾವು ನಮ್ಮ ಬಾಲ್ಯವನ್ನು ನೆನಪಿಸುವಂತಿವೆ.
” ಟೀಚಾರ್, ಮೂತ್ರ ಬರ್ತಿದೆ. ಟೀಚಾರ್, ಮೂತ್ರ ಬರ್ತಿದೆ’ ಎಂದು ಪಾಠ ಆರಂಭಿಸುವ ಮೊದಲೇ ಪಾಠಕ್ಕೆ ಪೂರ್ಣ ವಿರಾಮ ನೀಡಲು ಹೊಂಚು ಹಾಕುವ ಕೆಲ ಮಕ್ಕಳನ್ನು ಕಂಡಾಗ “ಚಡ್ಡಿಯಲ್ಲೇ ಮೂತ್ರ ಮಾಡಿಕೊಳ್ಳಿ’ ಎನ್ನಲೇ ಅಥವಾ “ಹೋಗು’ ಎನ್ನಲೇ ! ಪಾಪ ನಿಂತುಕೊಳ್ಳುವ ಭಂಗಿ ನೋಡಿದರೇ “ಹೋಗಿ ಬೇಗ ಬಾ…’ ಎಂದು ಹೇಳಿ ಬಿಡುವುದೇ ವಾಸಿ ಎಂದೆನಿಸುತ್ತದೆ.
ಒಂದೊಂದು ಮಕ್ಕಳಲ್ಲಿ ನೂರಾರು ಪ್ರಶ್ನೆ. ನೂರಾರು ಅರ್ಥವಿಲ್ಲದ ಅವರದೇ ದೂರುಗಳು. ತೊದಲು ಮಾತಿನಿಂದ ಒಂದೇ ಬಾರಿ ತೂರಿ ಬರುವ ಪ್ರಶ್ನೆಗಳನ್ನು ತಾಳ್ಮೆಯಿಂದ ಕೇಳಿಕೊಂಡರೆ ಒಳಿತು, ಉತ್ತರ ಸಿಗದೆ ಸುಮ್ಮನಾಗುವವರು ಅವರಲ್ಲವೇ ಅಲ್ಲ. ಇಂಗ್ಲೀಷ್ ವರ್ಕ್ ಬುಕ್ ತರಲು ಹೇಳಿದರೆ ಇನ್ಯಾವುದೋ ಪುಸ್ತಕ ಹಿಡಿದುಕೊಂಡು ಬರುವವರಿದ್ದಾರೆ. ಇನ್ನು ಕೆಲವರು ಮಹಾ ಪಂಡಿತರಂತೆ, “ಚೀಚರ್ ನಾನು… ಚೀಚರ್ ನಾನು…’ ಎಂದು ಪ್ರಶ್ನೆ ಮುಗಿಯುವ ಮೊದಲೇ ಕೈ 90% ಮೇಲೇತ್ತುತ್ತಾರೆ. ಅಪ್ಪಿತಪ್ಪಿ ಎಲ್ಲ ಬಲ್ಲವ ಇವನೆಂದು ಆತನಲ್ಲಿ ಉತ್ತರವನ್ನು ಅಪೇಕ್ಷಿಸಿದರೆ, ತನಗೂ ಪ್ರಶ್ನೆಗೂ ಏನೂ ಸಂಬಂಧವೇ ಇಲ್ಲವೆನ್ನುವಂತೆ ಇರುತ್ತಾರೆ.
ಇವುಗಳು ಕೆಲವು ಸ್ಯಾಂಪಲ್‌ಗಳು ಅಷ್ಟೇ. ಮಕ್ಕಳ ಜೊತೆ ಮಕ್ಕಳಾಗಿ, ಅವರಿಗೆ ಕಲಿಸಿ ತಾನೂ ಕಲಿಯುತ್ತ ದಿನಪೂರ್ತಿ ಅತ್ತಿಂದಿತ್ತ ಓಡಾಡುತ್ತಿದ್ದರೆ ಬೇಸರ-ದುಗುಡ ಹತ್ತಿರ ಸುಳಿಯಲು ಸಾಧ್ಯವೇ ಇಲ್ಲ.
ಸೌಮ್ಯ ಆರಂಬೋಡಿ
ಶಿಕ್ಷಕಿ, ಸೈಂಟ್ ಪ್ಯಾಟ್ರಿಕ್ಸ್ ಆಂಗ್ಲ ಮಾಧ್ಯಮ ಶಾಲೆ, ಸಿದ್ಧಕಟ್ಟೆ