ಹುಣಸೂರು: ವಿದ್ಯಾರ್ಥಿಗಳು ಸತತ ಅಭ್ಯಾಸ, ಶ್ರದ್ಧಾಸಕ್ತಿ, ಆತ್ಮವಿಶ್ವಾಸದಿಂದ ಉನ್ನತ ಶಿಕ್ಷಣ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ನಂಜನಗೂಡು ಪದವಿ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ.ಎಂ.ಮಾದೇವ್ ಭರಣಿ ಸೂಚಿಸಿದರು.
ತಾಲೂಕಿನ ಹನಗೋಡು ಪದವಿ ಕಾಲೇಜು ವಾರ್ಷಿಕೋತ್ಸವದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ವಿದ್ಯಾರ್ಥಿಗಳಲ್ಲಿ ಓದಿನ ಹಸಿವು, ಶೈಕ್ಷಣಿಕ ಗುರಿಯೊಂದಿಗೆ ವ್ಯಾಸಂಗ ಮಾಡಬೇಕು. ಇಂಗ್ಲಿಷ್ ಬರಲ್ಲವೆಂಬ ಕೀಳರಿಮೆ ಬಿಟ್ಟು, ಮನಸ್ಸಿಟ್ಟು ಅಭ್ಯಾಸ ನಡೆಸಿದಲ್ಲಿ ಎಲ್ಲವೂ ಕರಗತವಾಗಲಿದೆ.
ಓದಿನ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ನಿಮ್ಮ ಬುದ್ಧಿ ವಿಕಸನಕ್ಕೆ ಪೂರಕ. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ನಿಮ್ಮ ಸಾಧನೆ ಇತರರಿಗೆ ಸ್ಪೂರ್ತಿಯಾಗುವಂತಿರಬೇಕು. ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಪ್ರಾಂಶುಪಾಲ ಡಾ.ವೈ.ಎಸ್.ಹನುಮಂತರಾಯ ಮಾತನಾಡಿ, ಕಾಲೇಜು ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದೆ, ಆದರೆ ಮೂಲ ಸೌಕರ್ಯದ ಕೊರತೆ ಇದೆ, ಇದೀಗ ಕಾಲೇಜಿನ ಕಟ್ಟಡಕ್ಕೆ ಒಂದು ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಕಟ್ಟಡ ನಿರ್ಮಿಸಲಾಗುವುದು, ಆಡಿಟೋರಿಯಂ, ಕಾಪೌಂಡ್ ಹಾಗೂ ಮತ್ತಿತರ ಸೌಲಭ್ಯಗಳು ದೊರೆಯಬೇಕಿದೆ ಎಂದರು.
ಐ.ಕ್ಯೂ.ಎ.ಸಿ.ಸಂಚಾಲಕ ಡಾ.ಬಾಲರಾಜ್, ಕ್ರೀಡಾ ಸಂಚಾಲಕ ಪ್ರೊ.ಗಂಗು, ಇಕೋ ಕ್ಲಬ್ ಸಂಚಾಲಕ ಪ್ರೊ.ಬಿ.ಕೆ.ಪ್ರಕಾಶ್, ಯುವರೆಡ್ ಕ್ರಾಸ್ ಘಟಕದ ಸಂಚಾಲಕ ಪ್ರೊ.ಜೆ.ಕೆ.ಉಮೇಶ್, ಗ್ರಂಥಪಾಲಕ ಪ್ರೊ.ದಿನೇಶ್ ತಮ್ಮ ವಿಭಾಗಗಳ ಚಟುವಟಿಕೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕ್ರೀಡೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಸಮಗ್ರ ಪ್ರಶಸ್ತಿ ಪಡೆದ ರಕ್ಷಿತ್ ಸೇರಿದಂತೆ ಪ್ರತಿಭಾವಂತ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಮತ್ತು ಎನ್ನೆಸ್ಸೆಸ್‌ನಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿ ಸಮಿತಿು ಉಪಾಧ್ಯಕ್ಷೆ ಎಸ್.ಸ್ವಾತಿ, ಸಾಂಸ್ಕೃತಿಕ ಕಾರ್ಯದರ್ಶಿ ಪೂಜಾ ಕಾರ್ಯಕ್ರಮ ನೆರವೇರಿಸಿಕೊಟ್ಟರು.