ರಬಕವಿ-ಬನಹಟ್ಟಿ : ವಾಯುವಿಹಾರ, ವ್ಯಾಯಾಮ ಮತ್ತು ಯೋಗಗಳನ್ನು ಮಹಿಳೆಯರು ಕೂಡಾ ನಿರಂತರವಾಗಿ ಕೈಗೊಂಡು ಉತ್ತಮ ಆರೋಗ್ಯವನ್ನು ಹೊಂದಬಹುದು ಎಂಬುದಕ್ಕೆ ಸ್ಥಳೀಯ ಬನಹಟ್ಟಿಯ ಮಹಿಳೆಯರ ಸಂಜೀವಿನಿ ವಾಯು ವಿಹಾರಿಗಳ ಸಂಘವೇ ಸಾಕ್ಷಿ. ಸತತ ಹದಿನಾರು ವರ್ಷಗಳಿಂದ ಇಲ್ಲಿಯ ಸಂಘದ ಸದಸ್ಯರು ಪ್ರತಿದಿನ ಬೆಳಗ್ಗೆ 6 ರಿಂದ 7 ರವರೆಗೆ ಸ್ಥಳೀಯ ಎಸ್. ಆರ್.ಎ ಮೈದಾನದಲ್ಲಿ ಯೋಗಾಸನ ಮಾಡುತ್ತಾ ಬಂದಿರುವುದು ವಿಶೇಷ.
2001ರಲ್ಲಿ ಎಕ್ಸಂಬಾದ ಯೋಗ ಗುರು ಸಂಗಮದೇವರಿಂದ ಇಲ್ಲಿಯ ಕೆಲವು ಮಹಿಳೆಯರು ಯೋಗಾಸನಗಳನ್ನು ಕಲಿತುಕೊಂಡರು. ಆರಂಭದಲ್ಲಿ ಕೆಲವು ಜನ ಮಾತ್ರ ಯೋಗಾಸನಗಳನ್ನು ಮಾಡುತ್ತಿದ್ದರು. ಆದರೆ 2006 ರಲ್ಲಿ ಪತಂಜಲಿಯಿಂದ ಯೋಗ ತರಬೇತಿ ಪಡೆದುಕೊಂಡು ಬಂದ ಯೋಗ ಶಿಕ್ಷಕ ಅಥಣಿಯ ಪಾಟೀಲ ದಂಪತಿಗಳು ಬನಹಟ್ಟಿಯಲ್ಲಿ ಏಳುದಿನಗಳ ಕಾಲ ಯೋಗಾಸನ ಶಿಭಿರ ಹಮ್ಮಿಕೊಂಡಿದ್ದರು.
ಅಂದಿನ ಶಿಬಿರದಲ್ಲಿ ಬಹಳಷ್ಟು ಜನ ಮಹಿಳೆಯರು ಭಾಗವಹಿಸಿದ್ದರು. ಏಳು ದಿನಗಳ ಕಾಲ ಭಾಗವಹಿಸಿ ಮುಂದೆ ಅದನ್ನೇ ಇನ್ನೂ ಕೆಲ ಮಹಿಳೆಯರು ಮುಂದುವರೆಸಿಕೊಂಡು ಬಂದರು. ಹೀಗಾಗಿ ಯೋಗಾಸನ ಮಾಡುವ ಮಹಿಳೆಯರ ಸಂಖ್ಯೆ ಮತಷ್ಟು ಹೆಚ್ಚಾಯಿತು. ಸದ್ಯ 31 ಕ್ಕೂ ಹೆಚ್ಚು ಮಹಿಳೆಯರು ಐದಾರು ವರ್ಷಗಳಿಂದ ಪ್ರತಿನಿತ್ಯ ಯೋಗಾಸನದಲ್ಲಿ ತೊಡಗಿದ್ದಾರೆ.
ಅಲ್ಪಕಾಲದ ನಡಿಗೆಯ ನಂತರ ಮೈದಾನದಲ್ಲಿ ಶಿಸ್ತು ಬದ್ಧವಾಗಿ ಕುಳಿತುಕೊಂಡು 45 ನಿಮಿಷಗಳ ಕಾಲ ವಿವಿಧ ಯೋಗಾಸನಗಳನ್ನು ಮಾಡುತ್ತಾರೆ. ಇವರು ಯೋಗಾಸನ ಮಾಡುವುದನ್ನು ನೋಡಿ ಕೆಲವು ಮಹಿಳೆಯರು ಅವರ ಪಕ್ಕದಲ್ಲಿ ಕುಳಿತು ಯೋಗಾಸನ ಮಾಡುತ್ತಿರುವುದು ವಿಶೇಷ.
Related Articles
ಪ್ರತಿ ನಿತ್ಯ ಯೋಗಾಸನ ಮಾಡುತ್ತಿರುವುದರಿಂದ ನಮಗೆ ಯಾವುದೇ ರೀತಿಯ ಕಾಯಿಲೆಗಳು ಬರುತ್ತಿಲ್ಲ ನಮ್ಮ ಸದಸ್ಯರಲ್ಲಿ ಇದ್ದ ಕೆಲವು ಕಾಯಿಲೆಗಳು ಯೋಗದಿಂದ ನಿವಾರಣೆಯಾಗಿವೆ ಆದ್ದರಿಂದ ನಾಔಉ ಪ್ರತಿ ನಿತ್ಯ ತಪ್ಪದೇ ಯೋಗದಲ್ಲಿ ಪಾಲ್ಗೊಳ್ಳುತ್ತೇವೆ ಎನ್ನುತ್ತಾರೆ ವಾಯು ವಿಹಾರಿ ಬಳಗದ ಮಹಿಳೆಯರು
ಶಾಂತಾ ಮಂಡಿ, ಭಾರತಿ ಆಸಂಗಿ, ಮಹಾದೇವಿ ಕಾಡದೇವರ, ಮಹಾದೇವಿ ಮೂಳೇಗಾವಿ, ಸಾವಿತ್ರಿ ಕಾಡದೇವರ, ಸುವರ್ಣಾ ಮದಬಾವಿ, ಪುಸ್ಪಾ ಸುಟ್ಟಟ್ಟಿ, ಬಾಳವ್ವ ಮಾಲಾಪೂರ, ರಾಜೇಶ್ವರಿ ಕರಲಟ್ಟಿ, ಕಮಲಾ ಹಾರೂಗೇರಿ, ಮಹಾದೇವಿ ಮೂಳೆಗಾಂವಿ, ಜಯಶ್ರೀ ಹುಲಜತ್ತಿ, ಸವಿತಾ ಕಣಗೊಂಡ, ಲಲಿತಾ ಪತ್ತಾರ, ಮಾಲಾ ಸರವದೆ, ಅಶ್ವಿನಿ ಪಿಟಗಿ, ವೀಣಾ ಬಾಗಲಕೋಟ, ಪಾರ್ವತಿ ಪೂಜಾರಿ, ಕಲಾ ಪತ್ತಾರ, ಗೀತಾ ಪತ್ತಾರ, ಉಮಾ ಬಡೇಮಿ ಸೇರಿದಂತೆ ಅನೇಕರು ಹಲವಾರು ವರ್ಷಗಳಿಂದ ಯೋಗಾಸನದಲ್ಲಿ ತೊಡಗಿದ್ದಾರೆ.
ಯೋಗದ ಮಹತ್ವ ಅರಿತುಕೊಂಡ ಈ ಮಹಿಳೆಯರು ಯೋಗಾಸನಗಳನ್ನು ಮಾಡುತ್ತಿರುವುದು ಬೇರೆ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ.
ಹದಿನೈದು ವರ್ಷಗಳಿಂದ ಸತತವಾಗಿ ಯೋಗಾಸನಗಳನ್ನು ಮಾಡುತ್ತಾ ಬಂದಿದ್ದೇವೆ. ನಮಗೆ ಇಲ್ಲಿಯವರೆಗೆ ಆರೋಗ್ಯಕ್ಕೆ ಸಂಬಂದಿಸಿದ ಯಾವುದೇ ಸಮಸ್ಯೆಗಳಿಲ್ಲ. ಯೋಗಾಸನ ಮಾಡುವುದರಿಂದ ದಿನವೆಲ್ಲ ಚೈತನ್ಯದಿಂದ ಇರಬಹುದು. –ಶಾಂತಾ ಮಂಡಿ, ಸಂಜೀವಿನಿ ವಾಯುವಿಹಾರಿ ಬಳಗದ ಸದಸ್ಯೆ
– ಕಿರಣ ಶ್ರೀಶೈಲ ಆಳಗಿ