Advertisement
ಶುಭ ಶುಕ್ರವಾರದ ನಿಮಿತ್ತ ಚರ್ಚ್‌ಗಳಲ್ಲಿ ಘಂಟೆಗಳು ನಿನದಿಸಲಿಲ್ಲ, ಬಲಿ ಪೂಜೆಯ ಸಂಭ್ರಮವಿರಲಿಲ್ಲ. ನೀರವ ವಾತಾವರಣದಲ್ಲಿ ಪ್ರಾರ್ಥನೆ ದಿನದ ವೈಶಿಷ್ಟ್ಯ. ಚರ್ಚ್‌ಗಳಲ್ಲಿ ನಡೆದ ಪ್ರಾರ್ಥನೆ, ಧ್ಯಾನ, ಶಿಲುಬೆಯ ಆರಾಧನೆ ಕಾರ್ಯಕ್ರಮಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಯೇಸು ಕ್ರಿಸ್ತರು ನಡೆದ ಶಿಲುಬೆಯ ಹಾದಿಯನ್ನು ಮನನ ಮಾಡುವ ಸಂದರ್ಭದಲ್ಲಿ ವಿವಿಧ ಸಂಕಷ್ಟಗಳಲ್ಲಿರುವ ಜನರಿಗಾಗಿ ಮತ್ತು ಒಟ್ಟು ಲೋಕ ಕಲ್ಯಾಣಕ್ಕಾಗಿ ವಿಶೇಷವಾಗಿ ಪ್ರಾರ್ಥಿಸಲಾಯಿತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದುದು ಮತ್ತು ಮೃತ ಶರೀರ ವನ್ನು ಶಿಲುಬೆಯಿಂದ ಕೆಳಗಿಳಿಸುವ ಪ್ರಕ್ರಿಯೆಯನ್ನು ಸಾಂಕೇತಿಕವಾಗಿ ನಡೆಸಲಾಯಿತು ಹಾಗೂ ಬಳಿಕ ಮೆರವಣಿಗೆ ನೆರವೇರಿತು. ‘ಯೇಸು ಕ್ರಿಸ್ತರು ಲೋಕ ಕಲ್ಯಾಣಕ್ಕಾಗಿ ತಮ್ಮ ಪ್ರಾಣಾರ್ಪಣೆ ಮಾಡಿದರು. ಶಿಲುಬೆಗೇರಿಸುವ ಸಂದರ್ಭದಲ್ಲಿ ಅವರು ಅನುಭವಿಸಿದ ಕಷ್ಟ ಸಂಕಷ್ಟಗಳ ಸ್ಮರಣೆಯು ನಮಗೆ ನಮ್ಮ ಸಂಕಷ್ಟ, ದುಃಖ ದುಮ್ಮಾನಗಳನ್ನು ಸೈರಿಸಲು, ದ್ವೇಷ, ಕೋಪ -ತಾಪಗಳನ್ನು ತೊರೆದು ಸನ್ಮಾರ್ಗದಲ್ಲಿ ಮುನ್ನಡೆಯಲು, ಅಹಿಂಸೆಯ ಹಾದಿಯಲ್ಲಿ ಅಡಿಯಿಡಲು ಸ್ಫೂರ್ತಿಯನ್ನು ನೀಡಲಿ’ ಎಂದು ಬಿಷಪ್ ಅವರು ಸಂದೇಶದಲ್ಲಿ ಹೇಳಿದರು.
ಉಡುಪಿ ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ‘ವೇ ಆಫ್ ದಿ ಕ್ರಾಸ್’ ನಡೆಯಿತು.