Advertisement

ಶಿಕ್ಷಕರ ದಿನಾಚರಣೆ: ವಿದ್ಯಾಗಮ ಯೋಜನೆಯಿಂದ ಚಂದದ್ದೊಂದು ಬಾಂಧವ್ಯ ಏರ್ಪಟ್ಟಿತು

03:05 PM Sep 04, 2020 | keerthan |

ಆಗ ತಾನೇ ಲಾಕ್ ಡೌನ್ ಮತ್ತೆ ಬೇಸಿಗೆ ರಜೆ ಮುಗಿಸಿ ಇಲಾಖೆಯ ಆದೇಶದಂತೆ ಶಾಲೆಗೆ ಹೋಗಲು ತಯಾರಾಗಿದ್ದೆವು. ಮುಖದಲ್ಲಿ ಮಾಸ್ಕ್, ಮನದಲ್ಲಿ ಆತಂಕ ಭಯ!

Advertisement

ಆರಂಭದಲ್ಲಿ ದಿನವೂ ಶಾಲೆಯ ಗೇಟು ಹೊಕ್ಕುವ ಮೊದಲೇ ಕಂಪೌಂಡಿನ ಎಲ್ಲ ಮೂಲೆಗಳಲ್ಲೂ ಇಣುಕುವ ಪುಟ್ಟ ಪುಟ್ಟ ಮುಖಗಳು! “ಯೇ ಹೋಗ್ರೋ ಮನೆಗೆ..’ ಎಂದರೂ ಕೇಳದೇ ಒಂದಷ್ಟು ದಿನ ಅಲ್ಲಿ ಇಲ್ಲಿ ಬಂದು ಸತಾಯಿಸುತ್ತಿದ್ದ ಮಕ್ಕಳನ್ನು ಮನೆಗೆ ಕಳಿಸುವುದು ದೊಡ್ಡ ಸಾಹಸವೇ ಆಗಿತ್ತು.

ನಂತರ ಬಂದಿದ್ದು ವಿದ್ಯಾಗಮ. ಒಂದೇ ಮನೆಯಂತಿರುವ ಸಣ್ಣ ಹಳ್ಳಿ. ಊರಿನ ಎಲ್ಲ ಮನೆಗಳ ಮಕ್ಕಳೂ ಒಂದೇ ಬಯಲಲ್ಲಿ ಆಡುವಷ್ಟು ಸಂಪರ್ಕ. ಕೃಷಿ ಮತ್ತು ಮೀನುಗಾರಿಕೆಯನ್ನು ನಂಬಿಕೊಂಡು ಬದುಕುವ ಬಡತನದ ಮನೆಗಳಲ್ಲಿ, ಹತ್ತು ಸಲ ಕಾಲ್ ಮಾಡಿದರೆ ಒಂದು ಸಲ ರಿಂಗ್ ಆಗಿ, ಹತ್ತು ಮಾತಾಡಿದರೆ ಒಂದು ಮಾತು ಕೇಳುವಷ್ಟು ದುರ್ಬಲ ನೆಟ್ವರ್ಕ್. ಫೋನ್ ಮೂಲಕ ಅಂತೂ ಇಂತೂ ಹೋಮ್ ವರ್ಕ್ ಕೊಟ್ಟರೆ

“ಟೀಚರ್ ಹತ್ತು ಮಾಂಸಾಹಾರಿ ಪ್ರಾಣಿ ಅಂದ್ರೆ ಹುಲಿ ಅಂತ ಹತ್ತು ಸಲ ಬರೀಬೇಕಾ?

“ಟೀಚರ್ ನಮ್ಮ ತಂಗಿ ಹೋಮ್ ವರ್ಕ್ ಮಾಡೋದು ಬಿಟ್ಟು ಜಗಳ ಆಡ್ತಾಳೆ”

Advertisement

” ಟೀಚರ್ ಐವತ್ತು ಜೀವಿಗಳು ಹೆಸರು ಬರೀರಿ ಅಂದ್ರೆ ನಮ್ಮದೆಲ್ಲ ಹೆಸರು ಬರ್ದಿದಾಳೆ ಇವಳು”

ಅಂತೆಲ್ಲ ಹೊತ್ತಲ್ಲದ ಹೊತ್ತಿನಲ್ಲಿ ಫೋನ್ ಬರಲಿಕ್ಕೆ ಶುರುವಾಗಿದ್ದವು.

ಜೊತೆಗೆ ಮಕ್ಕಳನ್ನು ಭೇಟಿಯಾಗಲು ಶಾಲೆಯಿಂದ ಹೊರಗೆ ನಮ್ಮ ಸಾಹಸಯಾತ್ರೆ. ಜುಯ್ಯ.. ಎಂದು ಸುರಿವ ಮಳೆ, ಕಾಲುಕಾಲಿಗೆ ಸಿಗುವ ಹಾವು ಕಪ್ಪೆಗಳು, ಹರಿವ ಹಳ್ಳ, ಮಳೆಗಾಲದಲ್ಲಿ ಮಲೆನಾಡು ಕರಾವಳಿಯ ಹಳ್ಳಿಗಳಲ್ಲಿ ತಿರುಗಾಡುವುದು ಅಷ್ಟು ಸುಲಭವೇನಲ್ಲ. ಮಕ್ಕಳೂ ಹಾಗೇ ಒಂದು ಏರಿಯಾದ ನಾಲ್ಕು ಮಕ್ಕಳನ್ನು ಕರೆದರೆ, ನಾಲ್ಕೂ ದಿಕ್ಕಿನ ಎಲ್ಲ ಮಕ್ಕಳೂ ಬಂದು ಗುಂಪುಗೂಡುವ, ಮಾಸ್ಕ್ ಹಾಕದೇ ಕಳೆದೇ ಹೋಗಿದೆ ಎಂದು ಇದ್ದಬದ್ದ ಟವೆಲ್ ಸುತ್ತಿಕೊಂಡು ಬರುವ ಘಟನೆಗಳೂ ನಡೆಯುತ್ತಿದ್ದವು.

ಕಷ್ಟ ಸುಖ ವಿಚಾರಿಸಿ ಹೋಗುವ ದಾರಿಹೋಕರ ಕಾಳಜಿ, ತಮ್ಮ ಮನೆಯ ದೇವರ ಪ್ರಸಾದ, ಹಣ್ಣು ಹಂಪಲು ತಂದುಕೊಡುವ ಪಾಲಕರ ಪ್ರೀತಿ, ಮಕ್ಕಳ ಮನೆಗಳ ಸಾಮಾಜಿಕ ಆರ್ಥಿಕ ಸಂಕಷ್ಟಗಳು ಎಲ್ಲವೂ ನಮ್ಮ ಅರಿವಿಗೆ ಬಂದವು. ಈ ವಿದ್ಯಾಗಮ ಯೋಜನೆಯಿಂದ ಶಿಕ್ಷಕ ಮತ್ತು ಪಾಲಕರ ಮಧ್ಯೆ ಚಂದದ್ದೊಂದು ಬಾಂಧವ್ಯ ಏರ್ಪಟ್ಟಿರುವುದಂತೂ ಸತ್ಯ.

ಈ ರೋಗ ಯಾವಾಗ ಕಡಿಮೆಯಾಗುತ್ತದೋ ಗೊತ್ತಿಲ್ಲ. ನಮ್ಮನ್ನೇ ನಂಬಿರುವ ನಮ್ಮ ಮಕ್ಕಳು ಸಂಪೂರ್ಣ ಶಿಕ್ಷಣ ವಂಚಿತರಾಗಬಾರದು. ಈಗಿರುವ ಅವಕಾಶದಲ್ಲಿ ನಮ್ಮ ಆತ್ಮತೃಪ್ತಿಗನುಸಾರ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದೇವೆ. ಮುದ್ದು ಮಕ್ಕಳ ಅರಿವಿಗೆ ಬರುವ ಮುನ್ನ ಆ ರೋಗ ತೊಲಗಿದರೆ ಸಾಕು.

ಸಂಧ್ಯಾ ನಾಯ್ಕ, ಸ.ಹಿ.ಪ್ರಾ ಶಾಲೆ ಉಳವರೆ, ಅಂಕೋಲಾ ತಾಲೂಕು, ಉತ್ತರ ಕನ್ನಡ

Advertisement

Udayavani is now on Telegram. Click here to join our channel and stay updated with the latest news.

Next