ಲಕ್ನೋ: ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಹುತಾತ್ಮನಾಗಿದ್ದ ಯೋಧನ ತಂಗಿಯ ಮದುವೆಯನ್ನು ಸಿಆರ್‌ಪಿಎಫ್ ನ ಯೋಧರೇ ನಡೆಸಿಕೊಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮದುವೆಗೆ ಸಾಕ್ಷಿಯಾಗಿದ್ದ ಎಲ್ಲ ಅತಿಥಿಗಳೂ ಈ ಕ್ಷಣಗಳನ್ನು ಕಣ್ತುಂಬಿಕೊಂಡು ಭಾವುಕರಾದರು.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 110ನೇ ಬೆಟಾಲಿಯನ್ ಯೋಧ ಶೈಲೇಂದ್ರ ಪ್ರತಾಪ್ ಸಿಂಗ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದರು. ಅವರ ತಂಗಿ ಜ್ಯೋತಿ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆಯ ದಿನ ಬೆಳಗ್ಗೆಯೇ ಸಮವಸ್ತ್ರ ಧರಿಸಿದ್ದ ಸಿಆರ್‌ಪಿಎಫ್ ಯೋಧರ ದಂಡೊಂದುಸರ್ಪ್ರೈಸ್ ರೀತಿಯಲ್ಲಿ ಮಂಟಪಕ್ಕೆ ಬಂದಿದೆ. ಮದುವೆಯಲ್ಲಿ ಆಕೆಯ ಅಣ್ಣ ಏನೇನು ಕರ್ತವ್ಯಗಳನ್ನು ನಿಭಾಯಿಸಬೇಕಿತ್ತೋ, ಅವೆಲ್ಲವನ್ನೂ ಈ ಯೋಧರೇ ಮಾಡಿದ್ದಾರೆ. ವಧುವನ್ನು ಮಂಟಪಕ್ಕೆ ಕರೆದುಕೊಂಡು ಬರುವುದರಿಂದ ಹಿಡಿದು, ಗಂಡನ ಮನೆಗೆ ಕಳುಹಿಸಿಕೊಡುವವರೆಗೂ ಎಲ್ಲ ಜವಾಬ್ದಾರಿಯನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಸದಸ್ಯರ ಅಮಾನತು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಮಾರಕ; ಡಿಕೆಶಿ
ಮಗಳ ಮದುವೆಯಲ್ಲಿ ಹುತಾತ್ಮ ಪುತ್ರನ ಸ್ನೇಹಿತರ ಕೆಲಸ ನೋಡಿ ಭಾವುಕರಾದ ಪ್ರತಾಪ್ ಸಿಂಗ್ ತಂದೆ, “ನನ್ನ ಮಗನಿಲ್ಲ ಎನ್ನುವ ನೋವಿನಲ್ಲಿದ್ದೆ. ಆದರೆ ಈಗ ಇಷ್ಟೊಂದು ಮಕ್ಕಳಿದ್ದಾರೆ ಎನ್ನುವ ಸಂತೋಷವಿದೆ’ ಎಂದು ಹೇಳಿದ್ದಾರೆ. ಯೋಧರೇ ನಡೆಸಿಕೊಟ್ಟ ಈ ಮದುವೆಯ ಫೋಟೋಗಳನ್ನು ಸಿಆರ್‌ಪಿಎಫ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.