Advertisement
ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಕೆಮ್ಮರ್ಜೆಯಲ್ಲಿ ಹದಿನೇಳು ವರ್ಷಗಳಿಂದ ಕೃಷಿಯಲ್ಲಿ ಸತತ ಪ್ರಯೋಗಗಳನ್ನು ಮಾಡುತ್ತಲೇ ಬಂದವರು ಈ ಜಯನಾರಾಯಣ ಉಪಾಧ್ಯಾಯರು. ಹನಿ ನೀರಾವರಿಯೊಂದಿಗೆ ಗೋಮೂತ್ರವನ್ನು ಮಿಶ್ರ ಮಾಡಿ ಅಡಕೆ ಗಿಡಗಳಿಗೆ ಪೂರೈಸುವುದರಿಂದ ಶೀಘ್ರ ಯೋಗ್ಯ ಪರಿಣಾಮ ಸಾಧ್ಯವಿದೆಯೇ? ಹೀಗಂತ ಕೇಳುವವರಿಗೆ ಉಪಾಧ್ಯಾಯರೇ ಉತ್ತರ ಹೇಳಲು ಅಣಿಯಾಗುತ್ತಾರೆ. ಇದು ಅವರ ಹೊಸ ಪ್ರಯೋಗ. ಇದ ಗಿಡಗಳ ಮೇಲೆ ಸಾಕಷ್ಟು ಉತ್ತಮ ಪರಿಣಾಮವನ್ನು ಬೀರಿದೆ.
Related Articles
Advertisement
ಉಪಾಧ್ಯಾಯರು ಹನಿ ನೀರಾವರಿ ಪೂರೈಕೆಗಾಗಿ ನೆಲದಲ್ಲಿ ಹೊಂಡ ತೋಡಿ ಸುಲಭ ಖರ್ಚಿನ ತೊಟ್ಟಿ ನಿರ್ಮಿಸಿದ್ದಾರೆ. 1500 ಲೀಟರ್ ನೀರು ಶೇಖರಿಸಬಹುದು. ಇದಕ್ಕೆ ಡಿಸ್ಕ್ ಮತ್ತು ಸ್ಯಾಂಡ್ ಫಿಲ್ಟರ್‌ಗಳನ್ನು ಜೋಡಿಸಿದ್ದಾರೆ. ನೀರು ಸೂಕ್ಷ್ಮ ಧೂಳಿನ ಕಣಗಳನ್ನು ಕೂಡ ಶುದ್ಧೀಕರಿಸಿಯೇ ಮುಂದೆ ಹೋಗುತ್ತದೆ. ಹಟ್ಟಿ ತೊಳೆದ ನೀರು, ಗೋಮೂತ್ರಗಳು ಗೋಬರ್ ಬಗ್ಗಡದ ಗುಂಡಿ ಸೇರುತ್ತವೆ. ದೊಡ್ಡ ಅಡಕೆಮರಗಳಿಗೆ ಈ ಬಗ್ಗಡವನ್ನು ತಿಂಗಳಿಗೊಂದು ಸಲ ಪೈಪ್ ಮೂಲಕ ಬುಡಕ್ಕೆ ಹಾಯಿಸುತ್ತಾರೆ. ಹತ್ತು ದಿನಗಳಿಗೊಮ್ಮೆ ಹದಿನೈದು ಲೀಟರ್ ಗೋಮೂತ್ರವನ್ನು ನೇರವಾಗಿ ಸಂಗ್ರಹಿಸಿ ಹನಿ ನೀರಾವರಿಯ ಜೊತೆಗೆ ಸೇರುವಂತೆ ಇಂಜೆಕ್ಟ್ ಮಾಡಲಾಗುತ್ತದೆ. ಇದು ಹೊಸದಾಗಿ ನೆಟ್ಟ ಗಿಡಗಳ ಬುಡವನ್ನು ತಲಪುತ್ತದೆ. ಈ ವ್ಯವಸ್ಥೆಗಾಗಿ ಸುಮಾರು 45 ಸಾವಿರ ರೂಪಾಯಿ ವೆಚ್ಚವಾಗಿದೆ.
ಹನಿ ನೀರಾವರಿಯೊಂದಿಗೆ ಗೋಮೂತ್ರವನ್ನು ಸೇರಿಸಿ ಜಿನುಗಿಸುವ ಈ ನೂತನ ಪ್ರಯೋಗದಿಂದ ಏನು ಲಾಭವಿದೆ? ಒಂದು ವರ್ಷದ ಗಿಡಗಳ ಬೆಳವಣಿಗೆ ನೋಡಿದರೆ ಆರು ತಿಂಗಳು ಹೆಚ್ಚಾದಂತೆ ಕಾಣಿಸುತ್ತವೆ. ಕಡು ಬಿಸಿಲಿನಲ್ಲಿದ್ದರೂ ಒಂದು ಗರಿಯೂ ಒಣಗಿಲ್ಲ. ಪುಷ್ಟವಾಗಿ ಹಸುರಾಗಿರುವ ಗಿಡಗಳು ಆರೋಗ್ಯಕರವಾಗಿವೆ. ಅಡಕೆ ಗಿಡಗಳಿಗೆ ವರ್ಷಕ್ಕೆ ಅರ್ಧ ಬುಟ್ಟಿ ಗೊಬ್ಬರ, 19-19-19ರ ಲಿಕ್ವಿಡ್, ಕಾಲು ಕಿ.ಲೋ ಇಫೊ ರಸಗೊಬ್ಬರವನ್ನು ಎರಡು ಕಂತುಗಳಾಗಿ ಕೊಡುವುದು ಬಿಟ್ಟರೆ ಬೇರೆ ಯಾವ ಪೋಷಕಾಂಶಗಳನ್ನೂ ಉಪಾಧ್ಯಾಯರು ಬಳಸುವುದಿಲ್ಲ. ಅವರ ಹೊಸ ತೋಟದಲ್ಲಿ ಎಲ್ಲ ಕೃಷಿಕರಿಗೂ ಮಾದರಿಯಾಗುವ ನಾಟಿ ವಿಧಾನವಿದೆ. ಮುಂದೆ ತೋಟದ ಕೆಲಸಕ್ಕೆ ಯಂತ್ರಗಳನ್ನು ವಾಹನಗಳನ್ನು ಇಳಿಸಬೇಕಾದ ಸಂದರ್ಭ ಬಂದರೆ ಇರಲಿ ಅಂತ ಪ್ರತೀ ಎರಡು ಸಾಲುಗಳ ನಡುವೆ ಹನ್ನೆರಡು ಅಡಿಗಳ ಒಂದು ಹಾದಿ ಬಿಟ್ಟಿದ್ದಾರೆ. ಎಂಟು ಅಡಿಗಳ ಅಂತರದ ಸಾಲಿನಲ್ಲಿ ಆರು ಅಡಿಗೆ ಒಂದರಂತೆ ಗಿಡಗಳ ನಾಟಿ ಮಾಡಿದ್ದಾರೆ. ಹೀಗಿದ್ದರೂ ಎಕರೆಗೆ 536 ಗಿಡಗಳ ನಾಟಿ ಮಾಡಲು ಸಾಧ್ಯವಾಗಿದೆ.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷರೂ ಆಗಿರುವ ಉಪಾಧ್ಯಾಯರು ನಾಲ್ಕು ದನಗಳನ್ನು ಸಾಕಿ ಹೈನುಗಾರಿಕೆ ಮಾಡುತ್ತಿದ್ದಾರೆ. ಮನೆಯ ಖರ್ಚಿಗೆ ಬೇಕಾಗುವಷ್ಟೇ ಗೋಬರ್ ಅನಿಲ ಉತ್ಪಾದಿಸುತ್ತಾರೆ. ಅತಿ ಕಡಿಮೆ ಪ್ರಮಾಣದ ಕೂಲಿ ಕಾರ್ಮಿಕರ ಬಳಕೆಗೂ ಅವರ ತೋಟ ಮಾದರಿಯಾಗಿದೆ. ಗೋಮೂತ್ರ ಪ್ರಯೋಗದ ಇನ್ನಷ್ಟು ಫಲಿತಾಂಶಕ್ಕಾಗಿ ಅವರು ಕಾಯುತ್ತಿದ್ದಾರೆ. ಬಳಿಕ ಎಲ್ಲ ಮರಗಳಿಗೂ ಅದನ್ನು ಪೂರೈಸುವ ಯೋಜನೆ ಅವರಲ್ಲಿದೆ.
ಪ. ರಾಮಕೃಷ್ಣ ಶಾಸ್ತ್ರಿ