ಮಹಾಮಸ್ತಕಾಭಿಷೇಕದ ಅಂಗವಾಗಿ ಫೆ. 9ರಂದು ಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದು ಆಯೋಜಿತವಾಗಿದ್ದು, ಅದರಲ್ಲಿ ಶಿಲ್ಪಿ ಶೆಣೈ ಅವರ ಪುತ್ಥಳಿಯ ಅನಾವರಣ, ಶೆಣೈ ಕುಟುಂಬ ಸಮ್ಮಾನ ಸೇರಿವೆ. ತನ್ನಿಮಿತ್ತವಾಗಿ ಈ ಲೇಖನ.
“ಇತಿಹಾಸ ಮರುಕಳಿಸುತ್ತದೆ’ ಎಂಬ ಮಾತಿದೆ. ಅಂತಹದೊಂದು ಇತಿಹಾಸದ ಪುನರಾವರ್ತನೆ 20ನೆಯ ಶತಮಾನದ ಉತ್ತರಾರ್ಧದಲ್ಲಿ ನಮಗೆ ಹತ್ತಿರದ ಕಾರ್ಕಳ- ಧರ್ಮಸ್ಥಳಗಳಲ್ಲಿ ನಡೆಯಿತು. ಅದು ಇತಿಹಾಸ ಪುನರಾವರ್ತನೆಯಷ್ಟೇ ಅಲ್ಲ, ಅತ್ಯಾಶ್ಚರ್ಯಕರ ವಿದ್ಯಮಾನವೂ ಆಗಿತ್ತು. ಅದೇ ಕಾರ್ಕಳದ ವೃದ್ಧ ಶಿಲ್ಪಿ ಗೋಪಾಲ ಶೆಣೈಯವರಿಂದ ಗೊಮ್ಮಟ ಮಹಾಮೂರ್ತಿಯ ನಿರ್ಮಾಣ. ಅರುವತ್ತೈದು ಕಿ.ಮೀ. ದೂರದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅದರ ಪ್ರತಿಷ್ಠಾಪನೆ!
ಪರಮಸಾತ್ವಿಕರೂ ದೈವಭಕ್ತರೂ ಆಗಿದ್ದ ಗೋಪಾಲ ಶೆಣೈಯವರ ಮನೆ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಹತ್ತಿರದಲ್ಲೇ ಇತ್ತು, ಈಗಲೂ ಇದೆ. ಅದಕ್ಕೆ ತಾಗಿಕೊಂಡೇ ಅವರ ಕೊಟ್ಟಿಗೆ (ಇದು ಶಿಲ್ಪ ಶಾಲೆಗೆ ಶೆಣೈಯವರದೇ ಪರ್ಯಾಯ ಪದ)! ಅಲ್ಲಿ ಕುಳಿತುಕೊಂಡೇ ನಾಲ್ಕೈದು ಮಂದಿ ಸಹಕಾರಿಗಳೊಂದಿಗೆ ಅವರು ವಿಧವಿಧದ ಆದರೆ, ಸಣ್ಣ ಗಾತ್ರದ ಶಿಲಾ ಮೂರ್ತಿಗಳನ್ನು ಕೆತ್ತಿದರು. ಕಲ್ಲಲ್ಲಿ ಮಾತ್ರವಲ್ಲ, ಮರ, ಮಣ್ಣು, ದಂತ, ಕಂಚು, ಬೆಳ್ಳಿ -ಬಂಗಾರಗಳಲ್ಲೂ ಅಮೃತಶಿಲೆ, ಸಾಲಿಗ್ರಾಮಗಳಲ್ಲೂ ಅವರು ಪ್ರತಿಮೆಗಳನ್ನು ನಿರ್ಮಿಸಿದರು. ಚಿತ್ರಗಳನ್ನು ಬರೆದರು. ಶ್ರೀ ವೆಂಕಟರಮಣ ದೇವಾಲಯದ ಗರುಡ ಮಂಟಪಕ್ಕಾಗಿ ಬೇಲೂರಿನ ಹೊಯ್ಸಳ ಶಿಲ್ಪದ ಮಾದರಿ ಯಲ್ಲಿ ಅವರು ನಿರ್ಮಿಸಿದ ಶಿಲ್ಪಸ್ತಂಭ ಚತುಷ್ಟಯವು ಅವರ ಹೆಸರನ್ನು ಪ್ರಸಿದ್ಧಿಗೆ ತಂದಿತು. ಮುಂದೆ, ಧರ್ಮಸ್ಥಳದ ಬಾಹುಬಲಿ ಮೂರ್ತಿಯಿಂದಾಗಿ ಅವರು ಪ್ರಸಿದ್ಧರಾದರು. ಬಾಹುಬಲಿ ಬಿಂಬದ ಬೆನ್ನಲ್ಲೇ ಜಪಾನಿನ ಚೈತ್ಯಾಲಯಕ್ಕಾಗಿ 67 ಅಡಿ ಎತ್ತರದ ಬೌದ್ಧ ಅವಲೋಕಿತೇಶ್ವರ ಮೂರ್ತಿ, ದಿಲ್ಲಿಯ ಪ್ರಭುದತ್ತ ಬ್ರಹ್ಮ ಚಾರಿಯವರಿಗಾಗಿ ಆಂಜನೇಯ ಸ್ವಾಮಿ (24 ಅಡಿ), ಫಿರೋಜಾಬಾದಿನ ಛದಾಮಿಲಾಲ್ ಜೈನರಿಗಾಗಿ ಬಾಹುಬಲಿ (32 ಅಡಿ), ಕೆ.ಕೆ. ಬಿರ್ಲಾ ಅವರಿಗಾಗಿ ಪರಶಿವ ಬಿಂಬಗಳನ್ನು ನಿರ್ಮಿಸಿ ಕೀರ್ತಿಶಾಲಿ ಯಾದರು, ಪ್ರಶಸ್ತಿ, ಪುರಸ್ಕಾರ, ಸಮ್ಮಾನಗಳನ್ನು ಪಡೆದರು.
ಶಿಲ್ಪಿ ಗೋಪಾಲ ಶೆಣೈಯವರು 1985ರ ಡಿ. 1ರಂದು ನಿಧನ ಹೊಂದಿದರು. ಆಗ ಅವರ ಪ್ರಾಯ 89 ವರ್ಷ. ಶಿಲ್ಪಿ ಶೆಣೈಯವರು ದೀರ್ಘಾಯು, ಅವರ ಕಲೆಗೆ ದೀರ್ಘತಮವಾದ ಆಯುಸ್ಸು!
ಎಂ. ರಾಮಚಂದ್ರ