ಸೇಡಂ: ನಿವೇಶನ ಹಂಚುವುದಾಗಿ ಬಡವರಿಂದ ಐದು ಸಾವಿರ ರೂಪಾಯಿ ಮತ್ತು ಅರ್ಜಿ ಪಡೆದು 10 ವರ್ಷ ಕಳೆದರೂ ಕ್ರಮ ಕೈಗೊಳ್ಳದ ಪುರಸಭೆ ನಡೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಪುರಸಭೆ ಜನರಿಂದ ಅರ್ಜಿ ಪಡೆದು 10 ವರ್ಷ ಕಳೆದರೂ ಸಹ ನಿವೇಶನ ಹಂಚಿಕೆಯಾಗಿಲ್ಲ. ಪ್ರತಿನಿತ್ಯ ನೂರಾರು ಫಲಾನುಭವಿಗಳು ಪುರಸಭೆಗೆ ಅಲೆದು ಸುಸ್ತಾಗುತ್ತಿದ್ದಾರೆ. ಆದರೂ ಸಹ ಸಚಿವ ಡಾ. ಶರಣಪ್ರಕಾಶ ಪಾಟೀಲ ಅಣತಿಯಂತೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ಕುಣಿಯುತ್ತಿದ್ದಾರೆ. ಶಾಸಕರಾಗಿ ಆಯ್ಕೆಯಾದಾಗಿನಿಂದ ಇಲ್ಲಿವರೆಗೂ ಕಿಂಚಿತ್ತೂ ಭೂಮಿ ಖರೀದಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪುರಸಭೆ ಸದಸ್ಯ ಅನೀಲಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರಿಗೆ ತುಂಡು ಗುತ್ತಿಗೆ ನೀಡುವ ಮೂಲಕ ಸಚಿವ ಶರಣಪ್ರಕಾಶ ಪಾಟೀಲ ಸಾಮಾನ್ಯ ಜನರಿಗೆ ದ್ರೋಹ ಮಾಡುತ್ತಿದ್ದಾರೆ. ಪುರಸಭೆ ಕೋಟ್ಯಂತರ ರೂ. ಅನುದಾನವನ್ನು ಒತ್ತಾಯಪೂರ್ವಕ ಲೊಕೋಪಯೋಗಿ ಇಲಾಖೆಗೆ ವರ್ಗಾಯಿಸಿ, ಬಿಜೆಪಿ ಆಡಳಿತವಿರುವ ಪುರಸಭೆಯ ಅನೇಕ ಕಾಮಗಾರಿಗಳಿಗೆ ಪರೋಕ್ಷವಾಗಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ನಗರಾಧ್ಯಕ್ಷ ಅನೀಲ ಐನಾಪುರ, ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜಗೋಪಾಲರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ನಿಲಂಗಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯಕುಮಾರ ಆಡಕಿ, ಮುಖಂಡ ಶಿವಕುಮಾರ ಪಾಟೀಲ (ಜಿಕೆ), ಜಗನ್ನಾಥ ಚಿಂತಪಳ್ಳಿ, ಬಸವರಾಜ ರೆವಗೊಂಡ, ತಾಪಂ ಸದಸ್ಯ ನಾಗರೆಡ್ಡಿ ದೇಶಮುಖ ಮದನಾ, ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಚವ್ಹಾಣ, ಯುವ ಮೋರ್ಚಾ ತಾಲೂಕಾಧ್ಯಕ್ಷ ಮುರುಗೇಂದ್ರರೆಡ್ಡಿ ಪಾಟೀಲ, ಮಲಕಪ್ಪ ಕೊಡದೂರ, ಶ್ರೀನಾಥ ಪಿಲ್ಲಿ, ಶಿವಾನಂದಸ್ವಾಮಿ, ಓಂಪ್ರಕಾಶ ಪಾಟೀಲ, ಗೋವಿಂದ ಮುಡಗುಲ್, ರಮೇಶ ರಾಠೊಡ, ನಾಗರಾಜ ಹಾಬಾಳ, ಶ್ರೀಮಂತ ಅವಂಟಿ, ದೇವಿಂದ್ರ ಕೊಟ್ರಕಿ, ಶೇಖರ ತಡಕಲ್, ಸಿದ್ದಯ್ಯ ಭಂಡಾ, ರವಿ ಭಂಟನಹಳ್ಳಿ, ರವಿ ಲಿಂಗಂಪಲ್ಲಿ, ಕಾಶಿನಾಥ ನಿಡಗುಂದಾ, ರಾಘವೇಂದ್ರ ಮೆಕ್ಯಾನಿಕ್, ಇನಾಯರ್, ಲಕ್ಷ್ಮಣ ಭೋವಿ, ಬಶೀರಖಾನ್ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಸ್ಥಳಕ್ಕಾಗಮಿಸಿದ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.