Advertisement

“ಸೋಲಾರ್‌ ಗ್ರಾಮ”ಆಗಲಿದೆ ಗೋಳಿಹೊಳೆ

12:24 PM Feb 15, 2023 | Team Udayavani |

ಕುಂದಾಪುರ: ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದ ಅನಂತರ ಈಗ ಉಡುಪಿ ಜಿಲ್ಲೆಯ ಮತ್ತೂಂದು ಗ್ರಾಮ ಸಂಪೂರ್ಣ “ಸೋಲಾರ್‌ ಗ್ರಾಮ’ ಆಗುವತ್ತ ಹೆಜ್ಜೆಯಿಟ್ಟಿದೆ. ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮವು ಈಗಾಗಲೇ ಶೇ. 50ರಷ್ಟು ಸೋಲಾರ್‌ ಅಳವಡಿಸಿಕೊಡಿದ್ದು, ಮುಂದಿನ 2 ವರ್ಷದೊಳಗೆ ಪೂರ್ಣ ಪ್ರಮಾಣದ “ಸೋಲಾರ್‌ ಗ್ರಾಮ”ವಾಗಲಿದೆ.

Advertisement

ಸುಸ್ಥಿರ ಗ್ರಾಮದ ಪರಿಕಲ್ಪನೆಯಲ್ಲಿ ಗೋಳಿಹೊಳೆ ಗ್ರಾಮದ ಎಲ್ಲ ಮನೆಗಳಿಗೂ ಸೊಲಾರ್‌ ಅಳವಡಿಸುವ ಯೋಜನೆಯನ್ನು ಸೆಲ್ಕೋ ಸೋಲಾರ್‌ ಸಂಸ್ಥೆಯ ಕುಂದಾಪುರ ಶಾಖೆಯು ಯೋಜನೆ ಹಾಕಿಕೊಂಡಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಸಹಕಾರದೊಂದಿಗೆ ಈ ಯೋಜನೆ ಸಾಕಾರಗೊಳ್ಳುತ್ತಿದೆ. ಸೌರ ವಿದ್ಯುತ್‌ ಉತ್ಪಾದನೆ, ಗೃಹ ಸೌರಶಕ್ತಿ ಸದ್ಬಳಕೆ ಮೂಲಕ ಸ್ವಾವಲಂಬಿಯಾಗುವ ಮಹತ್ವದ ಕಾರ್ಯಕ್ಕೆ ಗೋಳಿಹೊಳೆ ಗ್ರಾಮದಲ್ಲಿ 2019 ರ ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಈಗಾಗಲೇ ಶೇ. 50ರಷ್ಟು ಮನೆ, ವಾಣಿಜ್ಯ ಮಳಿಗೆಗಳಿಗೆ ಸೋಲಾರ್‌ ಅಳವಡಿಸಲಾಗಿದೆ. ಗೋಳಿಹೊಳೆ ಗ್ರಾಮದ 220 ಮನೆಗಳಿಗೆ ಈಗಾಗಲೇ ಸೋಲಾರ್‌ ಅಳವಡಿಸಿಕೊಳ್ಳಲಾಗಿದೆ.

ಹೈನುಗಾರಿಕೆಗೂ ಸೋಲಾರ್‌ ಟಚ್‌

ಅದಲ್ಲದೆ 40 ಸ್ವೋದ್ಯೋಗ, ಉದ್ಯಮ, ಹೈನುಗಾರಿಕೆಗಳಿಗೂಸೋಲಾರ್‌ ವ್ಯವಸ್ಥೆಯ ಪ್ರಯೋಜನ ಪಡೆಯುತ್ತಿದ್ದಾರೆ. ಹಾಲು ಕರೆಯುವ ಯಂತ್ರಕ್ಕೆ, ಟೈಲರಿಂಗ್‌ ಯಂತ್ರಕ್ಕೆ ಸೋಲಾರ್‌ ಅಳವಡಿಕೆ, ಪ್ರಿಂಟರ್‌ಗೂ ಸೋಲಾರ್‌ ಬಳಕೆ, ಕೋಳಿ ಮಾರಾಟದ ಅಂಗಡಿಯ ಫ್ರಿಡ್ಜ್‌, ಮೀನು ಮಾರಾಟದ ಫ್ರಿಡ್ಜ್‌ಗಳಿಗೂ ಸೋಲಾರ್‌ ಶಕ್ತಿಯನ್ನು ಒದಗಿಸಲಾಗಿದೆ.

Advertisement

ರಾಜ್ಯದ ಮೊದಲ ಗ್ರಾಮ ಅಮಾಸೆಬೈಲು

ಉಡುಪಿ ಜಿಲ್ಲೆಯ ಮಾತ್ರವಲ್ಲದೆ ರಾಜ್ಯದ ಮೊದಲ ಸಂಪೂರ್ಣ ಸೋಲಾರ್‌ ಗ್ರಾಮವೆಂಬ ಹೆಗ್ಗಳಿಕೆ ಅಮಾಸೆಬೈಲಿನದ್ದಾಗಿದೆ. ಅಮಾಸೆಬೈಲು ಗ್ರಾಮವನ್ನು ಕತ್ತಲು ಮುಕ್ತ ಗ್ರಾಮವಾಗಿಸುವ ನಿಟ್ಟಿನಲ್ಲಿ ಹಿರಿಯ ಮುತ್ಸದ್ಧಿ ದಿ| ಎ.ಜಿ. ಕೊಡ್ಗಿ ಅವರು ಸೋಲಾರ್‌ ಗ್ರಾಮವಾಗಿಸುವ ಪಣ ತೊಟ್ಟರು. ಅದರಂತೆ 2017ರಲ್ಲಿ ಅಮಾಸೆಬೈಲು ಸೋಲಾರ್‌ ಗ್ರಾಮವಾಗಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ 1,497 ಮನೆಗಳಿಗೆ ಸೋಲಾರ್‌ ಅಳವಡಿಸಲಾಗಿದೆ. ಬೀದಿ ದೀಪಗಳನ್ನು, ವಾಣಿಜ್ಯ ಮಳಿಗೆಗಳಿಗೂ ಸೋಲಾರ್‌ ದೀಪ ಅಳವಡಿಸಲಾಗಿದೆ.

2 ವರ್ಷದೊಳಗೆ ಪೂರ್ಣ
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಸಹಕಾರದೊಂದಿಗೆ ನಮ್ಮ ಸೆಲ್ಕೋ ಸಂಸ್ಥೆಯಿಂದ ಗೋಳಿಹೊಳೆಯನ್ನು ಸಂಪೂರ್ಣ ಸೋಲಾರ್‌ ಗ್ರಾಮವಾಗಿಸುವ ಪ್ರಯತ್ನ ನಡೆಯುತ್ತಿದೆ. ಮುಂದಿನ ಎರಡು ವರ್ಷದೊಳಗೆ ಎಲ್ಲ ಮನೆಗಳಿಗೂ ಸೋಲಾರ್‌ ಅಳವಡಿಸುವ ಕಾರ್ಯ ಆಗಲಿದೆ. ಇದಲ್ಲದೆ ಗ್ರಾ.ಪಂ. ಸಹಕಾರದೊಂದಿಗೆ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯಕ್ಕೂ ಮುಂದಾಗಲಿದ್ದೇವೆ.
– ಶೇಖರ್‌ ಶೆಟ್ಟಿ, ಪ್ರಾದೇಶಿಕ ವ್ಯವಸ್ಥಾಪಕರು,ಸೆಲ್ಕೋ ಫೌಂಡೇಶನ್‌

ಗ್ರಾಮಕ್ಕೆ ವರದಾನ

ಗೋಳಿಹೊಳೆ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶವಾಗಿದ್ದು, ಅರಣ್ಯ ಪ್ರದೇಶಗಳೇ ಹೆಚ್ಚು. ಸೋಲಾರ್‌ ಅಳವಡಿಕೆಯಿಂದ ಮುಖ್ಯವಾಗಿ ಇಲ್ಲಿನ  ವಿದ್ಯುತ್‌ ಸಂಪರ್ಕವೇ ಇಲ್ಲದ ಮನೆಗಳಿಗೆ ಬಹಳಷ್ಟು ಪ್ರಯೋಜನವಾಗಿದೆ. ಇನ್ನು ವಿದ್ಯುತ್‌ ಸಂಪರ್ಕವಿದ್ದರೂ, ಮಳೆಗಾಲದಲ್ಲಿ ಕಾಡು ಪ್ರದೇಶವಾಗಿದ್ದರಿಂದ ಆಗಾಗ್ಗೆ ವಿದ್ಯುತ್‌ ಕೈ ಕೊಡುತ್ತಿದ್ದು, ಇದಕ್ಕೂ ಸೋಲಾರ್‌ ಬೆಳಕು ಪರಿಹಾರ ನೀಡಿದೆ. ಇದರಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಿದೆ.

~ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next