ಉಡುಪಿ: ಅಯೋಧ್ಯೆ ಶ್ರೀರಾಮನಿಗೆ ವಾರಣಾಸಿ ಶ್ರೀ ಕಾಶೀ ಮಠ ಸಂಸ್ಥಾನದಿಂದ ಸ್ವರ್ಣ ಅಟ್ಟೆ ಪ್ರಭಾವಳಿ ಸಮರ್ಪಣೆಗೆ ಸಜ್ಜುಗೊಂಡಿದೆ.
ಕೋಟ ಶ್ರೀ ಕಾಶೀ ಮಠದ ಶಾಖೆಯಿಂದ ವೈಭವದ ಮೆರವಣಿಗೆ ಮೂಲಕ ಸ್ವರ್ಣಮಯ ಅಟ್ಟೆ ಪ್ರಭಾವಳಿ ಅಯೋಧ್ಯೆಗೆ ತೆರಳಿದೆ. ಈ ಅಟ್ಟೆ ಪ್ರಭಾವಳಿಯನ್ನು ಉಡುಪಿಯ ಪ್ರಸಿದ್ಧ ಚಿನ್ನಾಭರಣ ಮಳಿಗೆ ಗುಜ್ಜಾಡಿ ಸ್ವರ್ಣ ಜುವೆಲರ್ ಪ್ರೈ.ಲಿ.ನ ಕಾರ್ಯಾಗಾರದಲ್ಲಿ 1 ಕೆಜಿ ಚಿನ್ನ, 3 ಕೆಜಿ ಬೆಳ್ಳಿಯಿಂದ ತಯಾರಿಸಲಾಗಿದೆ.
ಗುಜ್ಜಾಡಿ ದೀಪಕ್ ನಾಯಕ್ ಅವರ ಮೇಲುಸ್ತುವಾರಿಯಲ್ಲಿ ಸಂಸ್ಥೆಯ ನುರಿತ ಕುಶಲಕರ್ಮಿ ಕಿಶನ್ ಆಚಾರ್ಯರ ತಂಡದಿಂದ ಕೇವಲ 5 ದಿನಗಳಲ್ಲಿ ತಯಾರಿಸಲ್ಪಟ್ಟ ಅಟ್ಟೆ ಪ್ರಭಾವಳಿ ಕುಸುರಿ ಕೆಲಸಗಳಿಂದ ಕಲಾತ್ಮಕವಾಗಿ ಮೂಡಿಬಂದಿದೆ.
ಅಯೋಧ್ಯೆ ಶ್ರೀರಾಮನಿಗೆ ಈಗಾಗಲೇ ಸ್ವರ್ಣ ಜುವೆಲರ್ ಕಾರ್ಯಾಗಾರದಲ್ಲಿ ತಯಾರಿಸಿದ ಬೆಳ್ಳಿಯ ಪಲ್ಲಕಿ, ರಜತ ಕಲಶ ಸಮರ್ಪಣೆಗೊಂಡಿದೆ. ಗುಜ್ಜಾಡಿ ರಾಮದಾಸ ನಾಯಕ್ ಸಹಿತ ಗಣ್ಯರು ಉಪಸ್ಥಿತರಿದ್ದರು.
ಪೇಜಾವರ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರುವ ಮಂಡ ಲೋತ್ಸವದಲ್ಲಿ ಸ್ವರ್ಣ ಅಟ್ಟೆ ಪ್ರಭಾವಳಿ ಬಾಲರಾಮನಿಗೆ ಸಮರ್ಪಿಸಲಾಗುವುದು. ಶ್ರೀ ಕಾಶೀಮಠ ಸಂಸ್ಥಾನದ ಶ್ರೀಮತ್ ಸಂಯಮೀಂದ್ರತೀರ್ಥ ಶ್ರೀಪಾದರ ಆದೇಶದಂತೆ ಜಿಎಸ್‌ಬಿ ಸಮಾಜ ಬಾಂಧವರು ಗುರುಗಳ ಮಾರ್ಗ ದರ್ಶನದಂತೆ ಭಗವಂತನ ಸೇವೆ ಮಾಡುತ್ತಿರುವುದು ನಮಗೆ ಸಂತಸ ತಂದಿದೆ. ಇದು ಗುರುಗಳು ನಿಮ್ಮ ಮೇಲಿಟ್ಟಿರುವ ಅನುಗ್ರಹಕ್ಕೆ ಸಾಕ್ಷಿ ಎಂದು ಅಯೋಧ್ಯೆ ಶ್ರೀರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರು, ಶ್ರೀ ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ನುಡಿದಿದ್ದಾರೆ.