ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಸ್ನೇಹಿತರ ಜತೆ ಸೇರಿ ಕಳ್ಳತನ ಮಾಡಿದ್ದ ಕೆಲಸದಾಕೆ ಸೇರಿ ಮೂವರು ತಲಘಟ್ಟಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಲಘಟ್ಟಪುರದ ತಿಪ್ಪಸಂದ್ರದ ಶ್ರುತಿ (31) ಮತ್ತು ಆಕೆಯ ಸ್ನೇಹಿತ ಸೋಮಶೇಖರ್ ಹಾಗೂ ಸಿದ್ದೇಗೌಡ ಎಂಬುವರನ್ನು ಬಂಧಿಸ ಲಾ ಗಿದೆ. ಆರೋಪಿಗಳಿಂದ 20 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಮನೆ ಮಾಲೀಕ ತೇಜಸ್ ಎಂಬುವರು ನೀಡಿದ ದೂರಿನ ಮೇರೆಗೆ ಆರೋ ಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕನಕಪುರ ರಸ್ತೆಯ ನಾರಾಯಣ ನಗರದಲ್ಲಿ ತೇಜಸ್ ಕುಟುಂಬ ಜತೆ ವಾಸವಾಗಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಶ್ರುತಿ ಅದೇ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಳು. ತೇಜಸ್ ಪತ್ನಿ ಒಡವೆ ಧರಿಸುವುದು ಮತ್ತು ಮನೆಯಲ್ಲಿ ಒಡವೆ ಇಡುವ ಬೀರುವಿನ ಬೀಗ ಇಡುವ ಸ್ಥಳವನ್ನು ಈಕೆ ಗಮನಿಸಿದ್ದಳು. ಈ ಮಧ್ಯೆ ಮಾ.25ರಂದು ಸಮಾರಂಭವೊಂದಕ್ಕೆ ತೇಜಸ್ ಪತ್ನಿ ಒಡವೆ ಧರಿಸಿಕೊಂಡು ಹೋಗಿದ್ದು, ಮನೆಗೆ ವಾಪಸ್ ಬಂದ ಬಳಿಕ ಒಡವೆಗಳನ್ನು ಬೀರುವಿನಲ್ಲಿಟ್ಟು ಅದರ ಕೀ ಅನ್ನು ಅದೇ ಕೊಠಡಿಯಲ್ಲಿರುವ ಅಲ್ಮೇರಾದಲ್ಲಿಟ್ಟಿದ್ದರು. ಏ.6ರಂದು ಒಡವೆಗಳನ್ನು ನೋಡಿದಾಗ ಇರಲಿಲ್ಲ. ಅದರಿಂದ ಗಾಬರಿಗೊಂಡು ಕೆಲಸದಾಕೆ ಶ್ರುತಿಗೆ ಪ್ರಶ್ನಿಸಿದ್ದಾರೆ. ಆಕೆ ಯಾವುದೇ ಉತ್ತರ ನೀಡಿಲ್ಲ. ಬಳಿಕ ಅನುಮಾನಗೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ.
ಇನ್ನು ಮಾಲೀಕ ತೇಜಸ್ ಮನೆಯಲ್ಲಿ ಚಿನ್ನಾಭರಣ ಇರುವ ಬಗ್ಗೆ ತಿಳಿದು, ಸ್ನೇಹಿತರಾದ ಸಿದ್ದೇಗೌಡ ಮತ್ತು ಸೋಮಶೇಖರ್‌ಗೆ ತಿಳಿಸಿದ್ದೆ. ಸುಲಭವಾಗಿ ಹಣ ಸಂಪಾದಿಸಲು ಇದೇ ಸರಿಯಾದ ಮಾರ್ಗ ಎಂಬ ಅವರ ಸಲಹೆ ಮೇರೆಗೆ ಕೇವಲ 10 ದಿನಗಳಲ್ಲಿ ಎಲ್ಲ ಚಿನ್ನಾಭರಣ ಕಳವು ಮಾಡಿದ್ದೆ ಎಂದು ಹೇಳಿಕೆ ನೀಡಿದ್ದಾಳೆ. ಆಕೆಯ ಹೇಳಿಕೆ ಆಧರಿಸಿ ಇತರೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಘಟನೆ ಸಂಬಂಧ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.