ಹೂಡಿಕೆಗಳಲ್ಲಿ ಅತ್ಯಂತ ಪ್ರಾಚೀನ ಹಾಗೂ ಬೆಲೆಯುಳ್ಳದ್ದು ಚಿನ್ನವೇ ಸರಿ. ಆದರೆ, ಚಿನ್ನಕ್ಕೆ ಯಾಕೆ ಅಷ್ಟು ಬೆಲೆ? ಯಾವುದೇ ಆರ್ಥಿಕ ಉಪಯುಕ್ತತೆ ಅಥವಾ ಯುಟಿಲಿಟಿ ಇಲ್ಲದ ಆ ಲೋಹದ ತುಂಡಿಗೆ ಯಾಕೆ ನಾವು ಅಷ್ಟೊಂದು ಬೆಲೆ ಕಟ್ಟುತ್ತೇವೆ? ಇದು ಆರ್ಥಿಕ ತಜ್ಞರು ಕೇಳುವ ಮೂಲಭೂತ ಪ್ರಶ್ನೆ. ಹೌದು. ಚಿನ್ನವನ್ನು ತಿನ್ನಲಾಗುವುದಿಲ್ಲ. ಅದರಲ್ಲಿ ಫ್ಯಾಕ್ಟರಿಯಂತೆ ಸರಕು ತಯಾರಿಗಾಗಿ ಉಪಯೋಗಿಸಲಾಗುವುದಿಲ್ಲ. ಅದರ ಉಪಯುಕ್ತತೆ ಏನಿದ್ದರೂ ಆಭರಣದ ಪ್ರಯುಕ್ತ ಭಾವನಾತ್ಮಕವಾಗಿ ಮಾತ್ರ.
ರಾಜ ಮಹಾರಾಜರ ಕಾಲದಿಂದ ಹಿಡಿದು ವಲ್ಟ್ ವಾರ್‌ನ ಬಳಿಕದ ಅಮೆರಿಕನ್ ಸರ್ಕಾರದವರೆಗೆ, ಎಲ್ಲರೂ ಚಿನ್ನವನ್ನೇ ಸಂಪತ್ತೆಂದು ಪರಿಗಣಿಸಿ ಸಂಗ್ರಹಿಸಿ ಕೂಡಿಟ್ಟದ್ದಂತೂ ನಿಜ. ಎರಡನೇ ಜಾಗತಿಕ ಯುದ್ಧದ ಮೊದಲಿನ “ಗೋಲ್ಟ್ ಸ್ಟಾಂಡರ್ಡ್’ ವ್ಯವಸ್ಥೆ ಹಾಗೂ ಬಳಿಕ ಜಾರಿಗೊಂಡ “ಬ್ರೆಟ್ಟನ್-ವೋಡ್ಸ್ ‘ ಸಿಸ್ಟಂ ಅಥವಾ ಗೋಲ್ಟ್-ಡಾಲರ್ ಸ್ಟ್ಯಾಂಡರ್ಡ್ ವ್ಯವಸ್ಥೆಗಳೆಲ್ಲವೂ ಒಂದು ದೇಶದ ಹಣದ ಮೌಲ್ಯವನ್ನು, ಆ ದೇಶದ ಖಜಾನೆಯಲ್ಲಿರುವ ಚಿನ್ನದ ಪ್ರಮಾಣಕ್ಕೆ ಗಂಟು ಹಾಕಿತು. ಈ ವ್ಯವಸ್ಥೆಯನ್ನು 1971ರ ಬಳಿಕ ರದ್ದು ಪಡಿಸಿದರೂ, ಜಗತ್ತಿನ ಎಲ್ಲಾ ಸರಕಾರಗಳೂ ಚಿನ್ನವನ್ನು ಆಪದ್ಧನ ಎಂಬ ನೆಲೆಯಲ್ಲಿ ಕೂಡಿಡುವುದನ್ನು ನಿಲ್ಲಿಸಲಿಲ್ಲ.
ಏನಿದು ಆಪದ್ಧನ? : ಮಹಾ ವಿಪತ್ತು ಸಂಭವಿಸಿದಾಗ, ಆರ್ಥಿಕತೆಯೇ ಕುಸಿದು ಬಿದ್ದಾಗ, ಬೇರೆಲ್ಲ ಹೂಡಿಕೆಗಳೂ ವಿಫಲವಾದಾಗ, ಮುಷ್ಟಿಯಲ್ಲಿಯೇ ನಮ್ಮೆಲ್ಲ ಸಂಪತ್ತನ್ನು ಎತ್ತಿಕೊಂಡು ಸಿಕ್ಕಲ್ಲಿ ಓಡಿ ಹೋಗಿ, ಅಲ್ಲಿ ಜೀವನವನ್ನು ಪುನಃ ಕಟ್ಟುವ ಸೌಲಭ್ಯ ಚಿನ್ನದಲ್ಲಿ ಮಾತ್ರವೇ ಸಿಗುತ್ತದೆ. ಆ ನಿಟ್ಟಿನಲ್ಲಿ ಚಿನ್ನ ಒಂದು ಅತ್ಯುತ್ತಮ ಆಪದ್ಧನವಾಗಿ ಕೆಲಸ ಮಾಡುವುದು ನಿಜ. ಆಪದ್ಧನವಾಗಿರುವುದರಿಂದ ಮತ್ತು ಉತ್ಪಾದನಾ ಸಾಮರ್ಥ್ಯ ಹೊಂದಿರದೆ ಇರುವುದರಿಂದ, ಆರ್ಥಿಕ ಹಿಂಜರಿತದ ಕಾಲದಲ್ಲಿ ಚಿನ್ನಕ್ಕೆ ಭಾರೀ ಬೇಡಿಕೆ ಬರುತ್ತದೆ. ಆರ್ಥಿಕ ಚಟುವಟಿಕೆಗಳು ಸುಗಮವಾಗಿ ನಡೆಯುತ್ತಿರುವ
ಸಮಯದಲ್ಲಿ ತೈಲ, ಲೋಹ, ಶೇರು, ಮ್ಯೂಚುವಲ್ ಫಂಡು, ಡಾಲರ್. ಕರೆನ್ಸಿ ಇತ್ಯಾದಿ ಉತ್ಪಾದಕಾ ಹೂಡಿಕೆಗಳ ಬೇಡಿಕೆ ಹೆಚ್ಚಾಗಿರುತ್ತದೆ. ಕುಸಿತ ಅಥರಾ ರಿಸೆಶನ್ ಸಮಯದಲ್ಲಿ ಅವೆಲ್ಲಾ ಕುಸಿದು ಆಪದ್ಧನವಾದ ಚಿನ್ನಕ್ಕೆ ಬೇಡಿಕೆ ಏರುತ್ತದೆ. ಹಾಗಾಗಿ, ಆರ್ಥಿಕ ಹಿಂಜರಿತದ ಕಾಲದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಹೆಚ್ಚಳ ಉಂಟಾಗುತ್ತದೆ.
ವ್ಯಾಕ್ಸಿನ್ ಮತ್ತು ಚಿನ್ನದ ದರ : ಮಾರ್ಚ್ 2020 ಸಮಯದಲ್ಲಿ ಬಂದೊದಗಿದ ಕೋವಿಡ್ ಸಮಸ್ಯೆ ಮತ್ತು ಲಾಕ್ ಡೌನ್ ಸಂದರ್ಭವನ್ನು ಅವಲೋಕಿಸಿದರೆ ಈ ತತ್ವದ ಸತ್ಯ ಅರಿವಾಗುತ್ತದೆ. ಮಾರ್ಚ್ ಮಧ್ಯ ಭಾಗದಲ್ಲಿ 10 ಗ್ರಾಮಿಗೆ ಸುಮಾರು 40,000 ರೂ. ಇದ್ದ ಚಿನ್ನದ ಬೆಲೆ ಏರುತ್ತಾ ಹೋಗಿ ಆಗಸ್ಟ್ ನಲ್ಲಿ 55,000 ರೂ.ವರೆಗೂ ಏರಿತ್ತು. ಅದೇ ಈಗ ವ್ಯಾಕ್ಸಿನ್ ವಿಚಾರ ಮತ್ತು ಆರ್ಥಿಕ ಚಟುವಟಿಕೆಗಳ ಪುನರಾರಂಭದ ಸುದ್ದಿ ಬರುತ್ತಿದ್ದಂತೆ, ಚಿನ್ನದ ಬೆಲೆಯಲ್ಲಿ ಇಳಿಕೆ ಆರಂಭವಾಗಿದೆ. ಕಳೆದ ಕೆಲ ತಿಂಗಳುಗಳಿಂದ ಚಿನ್ನದಲ್ಲಿ ಹೂಡಿಕೆಯಾಗಿದ್ದ
ದುಡ್ಡು ಈಗ ವಾಪಸು ತೈಲ, ಲೋಹ, ಷೇರು, ಕಮಾಡಿಟಿ, ಡಾಲರ್ ಇತ್ಯಾದಿ ಆರ್ಥಿಕ ಮಹತ್ವವುಳ್ಳ ಸರಕುಗಳತ್ತ ಹೋಗುತ್ತಿದೆ. ಮತ್ತು ಚಿನ್ನದ ಬೆಲೆ ಸುಮಾರು 51,000 ರೂ.ಗೆ ಇಳಿದಿದೆ. ಆರ್ಥಿಕ ಚಟುವಟಿಕೆ ಚುರುಕಾದಂತೆಲ್ಲಾ ಇದು ಇನ್ನಷ್ಟು ಇಳಿಯಬಹುದು.
-ಜಯದೇವ ಪ್ರಸಾದ ಮೊಳೆಯಾರ