ಬೆಂಗಳೂರು: “ಪೊಲೀಸರಿಗೆ ನೀಡುವಂತೆಯೇ ಇನ್ಮುಂದೆ ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನೌಕರರಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುವುದು’ ಎಂದು ಪರಿಸರ ಮತ್ತು ಅರಣ್ಯ ಸಚಿವ ಬಿ. ರಮಾನಾಥ್ ರೈ ತಿಳಿಸಿದರು. ನಗರದ ಮಲ್ಲೇಶ್ವರ ಅರಣ್ಯ ಭವನದಲ್ಲಿ ಪರಿಸರ ಮತ್ತು ಅರಣ್ಯ ಇಲಾಖೆ ಹಾಗೂ ಬಿ.ಮಾರಪ್ಪ ಸ್ಮಾರಕ ಟ್ರಸ್ಟ್ ಸೋಮವಾರ ಸಂಯುಕ್ತವಾಗಿ ಹಮ್ಮಿಕೊಂಡಿದ್ದ “ಬಿ.ಮಾರಪ್ಪ ಸ್ಮಾರಕ ಟ್ರಸ್ಟ್ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು. ಅನೇಕ ಅಧಿಕಾರಿಗಳು ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಸುಮಾರು 42 ಜನ ಅರಣ್ಯ ಮತ್ತು ವನ್ಯಜೀವಿ ರಕ್ಷಣೆಗಾಗಿ ಪ್ರಾಣ ತೆತ್ತವರೂ ಇದ್ದಾರೆ.
ಕೆಲವರು ತಪ್ಪು ಕಲ್ಪನೆಯಿಂದ ಅರಣ್ಯ ಇಲಾಖೆ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅರಣ್ಯ ರಕ್ಷಣೆಗೆ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುವ ಪ್ರಾಮಾಣಿಕ ಮತ್ತು ದಕ್ಷ ಇಲಾಖೆ ನೌಕರರಿಗೂ ಮುಂದಿನ ದಿನಗಳಲ್ಲಿ ಪದಕ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
33 ಸಾವಿರ ಹೆಕ್ಟೇರ್ ಅರಣ್ಯೇತರ ಬಳಕೆ: ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು ವನ್ಯಜೀವಿ ರಕ್ಷಣಾ ಕಾಯ್ದೆ ಬಂದ ನಂತರವೂ ರಾಜ್ಯದಲ್ಲಿ ಸುಮಾರು 33 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯು ಅರಣ್ಯಯೇತರ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂದು ಇದೇ ವೇಳೆ ಸಚಿವ ರಮಾನಾಥ್ ರೈ ಮಾಹಿತಿ ನೀಡಿದರು.
ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸರ್ಕಾರ ಕಾಯ್ದೆ-ಕಾನೂನುಗಳನ್ನು ರೂಪಿಸಬಹುದು. ಆದರೆ, ಅದರ ಉದ್ದೇಶ ಈಡೇರಬೇಕಾದರೆ ಜನರ ಸಹಕಾರ ಮುಖ್ಯ. ಪರಿಸರ ಮತ್ತು ಅರಣ್ಯ ಸಂರಕ್ಷಣೆಯಲ್ಲೂ ಇದು ಅನ್ವಯ ಆಗುತ್ತದೆ. ಪ್ಲಾಸ್ಟಿಕ್ ನಿಷೇಧಿಸಿದ್ದರೂ ಅದರ ಹಾವಳಿ ನಿಂತಿಲ್ಲ ಎಂದು ತಿಳಿಸಿದರು. ಪ್ರಮುಖ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಇಲಾಖೆ ಮುಖ್ಯಸ್ಥ ಕೆ.ಎಸ್.ಸೂಗಾರ, ಪ್ರಮುಖ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಪುನತಿ ಶ್ರೀಧರ್, ನಿವೃತ್ತ ಐಎಎಸ್ ಅಧಿಕಾರಿ ಎಂ.ಬಿ.ಪ್ರಕಾಶ್, ಬಿ.ಮಾರಪ್ಪ ಸ್ಮಾರಕ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಎನ್.
ಸಂಪಂಗಿ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಇಲಾಖೆಯ ಎಸ್.ಆರ್.ಅಶೋಕರೆಡ್ಡಿ, ರಾಜಶೇಖರ್ ಪಿ.ಲಮಾಣಿ, ರಮೇಶ್ ಕೆ.ಬಡಿಗೇರ, ಕವಿತಾ ಡಿ.ಕಾಂಬಳೆ, ಎಸ್.ಬಿ. ವೆಂಕಟೇಶ್, ಮಹೇಶ್ ಜಕ್ಕಾಳಿ, ಖಂಡೆಪ್ಪ ರಾಮಪ್ಪ ಓಂಕಾರಿ, ಕೆ.ಎನ್.ವಿಜಯಕುಮಾರ್, ಎ.ಎಸ್. ಮಂಜು, ಹರೀಶ್ಚಂದ್ರ ಮುಕುಂದ ಪಟಗಾರ, ಸಂಗಮೇಶ ಪಾಟೀಲ, ಸಿದ್ದಪ್ಪಾಜಿ ಎನ್. ಬಸವೇಗೌಡ, ವೈ.ಆರ್.ರಾತೋಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.