ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ರಾಜಕಾರಣಿಗಳಿಗೆ ಉಡುಗೊರೆ ನೀಡಲು ಚಿನ್ನಾಭರಣ ಬೇಕಾಗಿದೆ ಎಂದು ಚಿನ್ನದ ವ್ಯಾಪಾರಿಯಿಂದ 1.65 ಕೋಟಿ ರೂ. ಮೌಲ್ಯದ 3 ಕೆ.ಜಿ. ಚಿನ್ನಾಭರಣ, 85 ಲಕ್ಷ ರೂ. ಪಡೆದು ವಂಚಿಸಿರುವ ಆರೋಪಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಆರೋಪಿ ಅಭಯ್ ಜೈನ್ ಬಂಧಿತ ಆರೋಪಿ. ವಿಶಾಲ್ ಜೈನ್ ವಂಚನೆಗೊಳಗಾದವರು. ತಲೆಮರೆಸಿಕೊಂಡಿರುವ ಕಿರಣ್, ಸಂಕೇತ್, ನವೀನ್, ಚರಣ್‌ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರೋಪಿ ಪಡೆದುಕೊಂಡಿದ್ದ 3 ಕೆ.ಜಿ. ಚಿನ್ನಕ್ಕೆ ಬದಲಾಗಿ 8 ಕೆ.ಜಿ. ಕಬ್ಬಿಣ ಕೊಟ್ಟು ಮಾಲೀಕನನ್ನೇ ಬೆದರಿಸಿ ಸುಲಿಗೆ ಮಾಡಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ವಿಶಾಲ್ ಜೈನ್ ಕುಟುಂಬಸ್ಥರು ಕೆ.ಆರ್. ಮಾರುಕಟ್ಟೆ ಸಮೀಪ ಜ್ಯುವೆಲ್ಲರಿ ಶಾಪ್ ಹೊಂದಿದ್ದಾರೆ. ಜನವರಿಯಲ್ಲಿ ವಿಶಾಲ್ ಜೈನ್ ದೊಡ್ಡಪ್ಪನ ಮಗನ ಪತ್ನಿಯ ಸಹೋದರ ಸಂಬಂಧಿ ಆರೋಪಿ ಅಭಯ್ ಜೈನ್ ಪರಿಚಯವಾಗಿತ್ತು. ತನಗೆ ಹಲವಾರು ರಾಜಕೀಯ ಮುಖಂಡರ ಪರಿಚಯವಿದ್ದು, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಉಡುಗೊರೆ ನೀಡಲು ಚಿನ್ನಾಭರಣ ಬೇಕಾಗಿದೆ ಎಂದು ಅಭಯ್ ಜೈನ್ ಕೇಳಿಕೊಂಡಿದ್ದ. ಫೆ.16ರಂದು ವಿಶಾಲ್ ಜೈನ್ ಅಂಗಡಿಗೆ ಸ್ನೇಹಿತ ಕಿರಣ್ ಜೊತೆ ಬಂದಿದ್ದ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಹಲವು ದೊಡ್ಡ ದೊಡ್ಡ ರಾಜಕೀಯ ಮುಖಂಡರು ಬರಲಿದ್ದು, ಅವರಿಗೆ ಉಡುಗೊರೆಯಾಗಿ ನೀಡಲು ಚಿನ್ನಾಭರಣ ಬೇಕಿದೆ ಎಂದು ಸುಮಾರು ಎರಡೂವರೆ ಕೆ.ಜಿ. ಚಿನ್ನಾಭರಣ ತೆಗೆದುಕೊಂಡು ಹೋಗಿದ್ದ. ರಾಜಕೀಯದವರು ನನ್ನಿಂದ ಚಿನ್ನ ಖರೀದಿಸಿದರೆ ನಿಮಗೆ ಹಣ ಕೊಡುತ್ತೇನೆ. ಇಲ್ಲದಿದ್ದರೆ ಚಿನ್ನವನ್ನೇ ವಾಪಸ್ ಕೊಡುವುದಾಗಿ ನಂಬಿಸಿದ್ದ. ಚಿನ್ನದ ಬದಲು ಕಬ್ಬಿಣ: ಫೆ.24ರಂದು ಮತ್ತೆ ವಿಶಾಲ್ ಜೈನ್‌ಗೆ ಕರೆ ಮಾಡಿದ ಆರೋಪಿ ಅಭಯ್, ಚಿನ್ನದ ಒಡವೆಗಳಿಗೆ ಬೇಡಿಕೆ ಬಂದಿದ್ದು, ಖಾಸಗಿ ಪಂಚತಾರಾ ಹೋಟೆಲ್ ವೊಂದಕ್ಕೆ ಚಿನ್ನಾಭರಣ ತರುವಂತೆ ಸೂಚಿಸಿದ್ದ. ಅದರಂತೆ ವಿಶಾಲ್ ಜೈನ್ 1.261 ಕೆ.ಜಿ. ಚಿನ್ನಾಭರಣವನ್ನು ಆತ ಹೇಳಿದ ಹೋಟೆಲ್‌ನಲ್ಲಿ ಕೊಟ್ಟಿದ್ದರು.
ಇದಾದ ಬಳಿಕ ಅಭಯ್ ಜೈನ್ ರಾಜಕರಣಿಯೊಬ್ಬರ ಪಿಎ ಜತೆಗೆ ಮಾತನಾಡಿದಂತೆ ನಟಿಸಿ ವಿಶಾಲ್ ಅವರಿಂದ ಚಿನ್ನ ಪಡೆದಿದ್ದ. ಮಾ.6ರಂದು ವಿಶಾಲ್ ಜೈನ್‌ಗೆ ಕರೆ ಮಾಡಿದ ಅಭಯ್ ಸದಾಶಿವನಗರದಲ್ಲಿರುವ ನ್ಯೂ ಶಾಲೆ ಬಳಿ ಬಂದು ಕರೆ ಮಾಡಿದರೆ ನಿಮಗೆ 8 ಕೆ.ಜಿ. ಚಿನ್ನವಿರುವ ಬಾಕ್ಸ್ ಕೊಡುತ್ತೇನೆ. ನಿಮಗೆ ಕೊಡಬೇಕಿದ್ದ ಬಾಕಿ ಹಣಕ್ಕೆ ಜಮೆ ಮಾಡಿಕೊಳ್ಳಿ. ಜೊತೆಗೆ ನಿಮಗೆ ಚಿನ್ನದ ಬಾಕ್ಸ್ ಕೊಡುವ ವ್ಯಕ್ತಿಯ ಕೈಗೆ 50 ಲಕ್ಷ ರೂ. ನಗದು ಕೊಡಿ ಎಂದಿದ್ದ. ಅದರಂತೆ ವಿಶಾಲ್ ಆತ ಸೂಚಿಸಿದ ವ್ಯಕ್ತಿಗೆ 50 ಲಕ್ಷ ರೂ. ಕೊಟ್ಟು, ಚಿನ್ನದ ಗಟ್ಟಿ ಇರುವ ಬಾಕ್ಸ್ ತೆಗೆದುಕೊಂಡು ಬಸವನಗುಡಿಯಲ್ಲಿರುವ ಮನೆಗೆ ಬಂದಿದ್ದ. ಮನೆಯಲ್ಲಿ ಬಾಕ್ಸ್ ತೆಗೆದು ನೋಡಿದಾಗ ಚಿನ್ನದ ಗಟ್ಟಿಯ ಬದಲು ಕಬ್ಬಿಣದ ಪ್ಲೇಟ್ ಕಂಡು ವಿಶಾಲ್ ಅಚ್ಚರಿಕೊಂಡಿದ್ದರು.
ಕೂಡಲೇ ಅಭಯ್ ಗೆ ಕರೆ ಮಾಡಿ ಈ ಬಗ್ಗೆ ಪ್ರಶ್ನಿಸಿದಾಗ, “ನಾನು ರಾಜಯಕೀಯ ಮುಖಂಡರೊಬ್ಬರ ಪಿಎ ಜತೆಗೆ ಮಾತನಾಡಿ ಮತ್ತೆ ಹೇಳುತ್ತೇನೆ’ ಎಂದು ಕರೆ ಕಡಿತಗೊಳಿಸಿದ್ದ. ಬಳಿಕ ಮಾ.7ರಂದು ವಿಶಾಲ್ ನನ್ನು ಖಾಸಗಿ ಹೋಟೆಲ್‌ಗೆ ಬರುವಂತೆ ಸೂಚಿಸಿದ್ದ. ಅಲ್ಲಿಗೆ ಹೋದಾಗ ನಿಮಗೆ ಕೊಟ್ಟಿರುವ ಬಾಕ್ಸ್ ದೊಡ್ಡ ರಾಜಕಾರಣಿಯಿಂದ ಬಂದಿದ್ದು, ನೀವು ಚಿನ್ನವಿಲ್ಲ ಎಂದು ಸುಳ್ಳು ಹೇಳುತ್ತಿದ್ದೀರಿ. ನೀವು ಕೂಡಲೇ ಹಣ ಸೆಟಲ್ ಮಾಡಬೇಕು ಎಂದು ಸ್ನೇಹಿತರ ಜೊತೆಗೂಡಿ ಬೆದರಿಸಿದ್ದ. ಮಾ.13ರಂದು ಸಹಚರರನ್ನು ಇವರ ಅಂಗಡಿಗೆ ಕಳುಹಿಸಿದ ಅಭಯ್ ಜೈನ್, 35 ಲಕ್ಷ ರೂ. ವಸೂಲಿ ಮಾಡಿದ್ದ.
ಇತ್ತ ವಿಶಾಲ್ ಜೈನ್ ಈ ಕುರಿತು ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾವಣೆ ಮಾಡಿತ್ತು. ಇದೀಗ ಸಿಸಿಬಿ ಪೊಲೀಸರು ಅಭಯ್ ಜೈನ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.