ವಿಜಯಪುರ : ಕೋವಿಡ್-19 ಲಾಕ್ ಡೌನ್ ತುರ್ತು ನಿರ್ಬಂಧದ ಹಿನ್ನಲೆ ನಗರದಲ್ಲಿ ಇರುವ ಸರಕಾರಿ ಆಸ್ಪತ್ರೆಯನ್ನು ರಾತ್ರೋರಾತ್ರಿ ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತನೆ ಮಾಡಲಾಗಿದೆ. ನಗರದ ಕೆಲ ಬಡಾವಣೆಗಳನ್ನು ಏಕಾಏಕಿ ಸೀಲ್ ಡೌನ್ ಮಾಡಲಾಗಿದೆ.
ಶನಿವಾರ ಇದ್ದಕ್ಕಿಂತೆ ಕೋವಿಡ್-19 ಲಕ್ಷಣ ಇರುವ ವ್ಯಕ್ತಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಗಂಟಲು ದ್ರವ ಪರೀಕ್ಷೆಗೆ ಕಳಿಸಿದ 92 ಜನರಲ್ಲಿ 65 ವರದಿ ನೆಗೆಟಿವ್ ಬಂದಿದ್ದು, 27 ವರದಿಗಳ ನಿರೀಕ್ಷೆ ಇದೆ. ರೋಗ ಶಂಕಿತ 32 ಜನರನ್ನು ಐಸೋಲೇಶನ್ ನಲ್ಲಿ ಇರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನದಿಂದಲೇ ಜಿಲ್ಲಾಡಳಿತ ಧಾವಂತಕ್ಕೆ ಸಿಲುಕಿದ್ದು, ರಾತ್ರಿಯಿಂದಲೇ ಕೆಲವು ಬಡಾವಣೆಗಳನ್ನು ಸೀಲ್ ಡೌನ್ ಮಾಡಿದೆ. ಅಲ್ಲದೇ ಸೀಲ್ ಡೌ್ನ್ ಮಾಡಿರುವ ಬಡಾವಣೆಗಳ ಜನರು ಯಾರೂ ಮನೆಯಿಂದ ಹೊರಗೆ ಬರದಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸುವುದಾಗಿ ಹೇಳಿದ್ದಾರೆ.
ಕೋವಿಡ್-19 ಆಸ್ಪತ್ರೆಯಾಗಿ ಜಿಲ್ಲಾಸ್ಪತ್ರೆ ಪರಿವರ್ತನೆ ಗೊಳ್ಳುತ್ತಲೇ ಸರ್ಕಾರಿ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ರಾತ್ರೋ ರಾತ್ರಿ ನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದಲ್ಲದೇ ನಗರದ ಒಂದು ಖಾಸಗಿ ವೈದ್ಯಕೀಯ ಕಾಲೇಜು-ಆಸ್ಪತ್ರೆ, ಮತ್ತೊಂದು ಖಾಸಗಿ ಆಸ್ಪತ್ರೆ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
ಮತ್ತೊಂದೆಡೆ ರೋಗ ಶಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿರುವ ನಗಗರದ ಗೋಲಗುಮ್ಮಟ ಪ್ರದೇಶ, ಚಪ್ಪರ್ ಬಂದ್ ಕಾಲೋನಿ, ಬಡಿಕಮಾನ್ ಪ್ರದೇಶ ಸೇರಿದಂತೆ ಹಲವು ಬಡಾವಣೆಗಳನ್ನು ರಾತ್ರೋರಾತ್ರಿ ಸೀಲ್ ಡೌನ್ ಮಾಡಲಾಗಿದೆ.
ಸೀಲ್ ಡೌನ್ ಮಾಡಿದ ಬಡಾವಣೆಗಳಲ್ಲಿ 2000ಕ್ಕೂ ಅಧಿಕ ಕುಟುಂಬಗಳಿದ್ದು, 7-8 ಸಾವಿರ ಜನಸಂಖ್ಯೆ ಇದೆ. ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾಡಳಿತದ ಸೂಚನೆ ಮೇರೆಗೆ ನಗರದಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಲಾಕಡೌನ್ ಇದ್ದರೂ ನಗರದಲ್ಲಿ ಅನಗತ್ಯ ಓಡಾಡುತ್ತಿದ್ದರೂ ಪೊಲಿಸರು ಸುಮ್ಮನಿದ್ದರು. ಭಾನುವಾ ಬೆಳಿಗ್ಗೆಯಿಂದ ರಸ್ತೆಗೆ ಇಳಿಯುತ್ತಿರುವವರಿಗೆ ಪೊಲೀಸರು ಬೆತ್ತ ತೋರಿಸಿ ಎಚ್ಚರಿಕೆ ನೀಡುತ್ತಿದ್ದಾರೆ.