ಮುಂಬಯಿ: ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್ ಹಾಗೂ ಬಿಎಸ್‌ಕೆಬಿ. ಅಸೋಸಿಯೇಶನ್ ಗೋಕುಲ ಸಾಯನ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೆ. 2ರಂದು ಶ್ರೀ ಕೃಷ್ಣ ಬಾಲಾಲಯ ಆಶ್ರಯ, ನೆರೂಲ್ ಇಲ್ಲಿ ನಡೆಯಿತು.
ಗೋಕುಲ ಸ್ಥಾಪಕ ಸದಸ್ಯ ರಲ್ಲೊಬ್ಬರಾದ ದಿ| ಯು. ವಿ. ಉಪಾಧ್ಯ ಅವರ ಕುಟುಂಬ ಸದಸ್ಯರು ಬಾಲಾಲಯ ಹಾಗೂ ಶ್ರೀ ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿಯ ವಿಶೇಷ ಆಲಂಕಾರಕ್ಕಾಗಿ ವಿವಿಧ ಪುಷ್ಪಗಳನ್ನು ಪ್ರಾಯೋಜಿಸಿದ್ದರು. ವೇದಮೂರ್ತಿ ದಿನೇಶ್ ಉಪ್ಪರ್ಣ ಮತ್ತು ಸಹ ಅರ್ಚಕ ವರ್ಗದವರು ಬಾಲಾಲಯ ಹಾಗೂ ಶ್ರೀ ದೇವರ ಮೂರ್ತಿಯನ್ನು ಅತ್ಯಂತ ಸುಂದರವಾಗಿ ಅಲಂಕರಿಸಿದ್ದರು. ಗೋಕುಲ ಭಜನಾ ಮಂಡಳಿ, ಹರಿಕೃಷ್ಣ ಭಜನಾ ಮಂಡಳಿ, ಶ್ರೀಕೃಷ್ಣ ಭಜನಾ ಮಂಡಳಿ ಹಾಗೂ ಬಾಲ ಕಲಾ ವೃಂದದವರಿಂದ ಶ್ರೀ ಕೃಷ್ಣ ದೇವರ ನಾಮಗಳ ಭಜನೆ ನೆರವೇರಿತು.
ನಂತರ ಹರಿ ಭಟ್ ಹಾಗೂ ದಿನೇಶ್ ಉಪ್ಪರ್ಣರ ನೇತೃತ್ವದಲ್ಲಿ ವಿಷ್ಣು ಸಹಸ್ರ ನಾಮ ಪಠನೆ, ಪುಷ್ಪಾರ್ಚನೆ, ಶ್ರೀ ಕೃಷ್ಣಾಷೊuàತ್ತರ ಸ್ತೋತ್ರ ಪಠನೆಗಳೊಂದಿಗೆ ಪೂಜಾ ವಿಧಿವತ್ತಾಗಿ ನಡೆಯಿತು. ದಿನೇಶ್ ಉಪ್ಪರ್ಣ ಅವರು ತಮ್ಮ ಪ್ರಾರ್ಥನೆ ಗೈದು ಮಾತನಾಡಿ, ಕೃಷ್ಣನ ನೆನೆದರೆ ಕಷ್ಟ ಒಂದಿಲ್ಲ ಎಂದು ದಾಸವರೇಣ್ಯರುಗಳು ಕೊಂಡಾಡಿದ್ದಾರೆ. ಆತನ ನಾಮಸ್ಮರಣೆ ಮಾತ್ರದಿಂದ ಮಾನವರ ಕಷ್ಟಗಳು ಪರಿಹಾರವಾಗುತ್ತದೆ. ಧರ್ಮ ಸಂಸ್ಥಾಪನೆಗಾಗಿಯೇ ಅವತರಿಸಿದ ಶ್ರೀ ಕೃಷ್ಣನ ಜನ್ಮದಿನವಾದ ಇಂದು ಭಕ್ತಿ ಶ್ರದ್ಧಾಪೂರ್ವಕವಾಗಿ ಉಪವಾಸ, ಭಜನೆ, ಕೀರ್ತನೆ, ಸ್ತೋತ್ರ ಪಠನೆ, ಮಂತ್ರ ಪುಷ್ಪಾರ್ಚನೆಗಳಿಂದ ಶ್ರೀಕೃಷ್ಣನ ಆರಾಧನೆಯನ್ನು ನಾವೆಲ್ಲಾ ಮಾಡಿದ್ದೇವೆ. ಸಂಘವು ಈಗ ಶ್ರೀ ಕೃಷ್ಣ ಮಂದಿರ ಹಾಗೂ ಗೋಕುಲ ಕಟ್ಟಡ ನಿರ್ಮಾಣದಂತಹ ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದೆ. ಶ್ರೀ ದೇವರ ಅನುಗ್ರಹದಿಂದ ಹಾಗೂ ಭಕ್ತಾದಿಗಳ ಸಹಕಾರದಿಂದ ಶ್ರೀ ಕೃಷ್ಣ ಮಂದಿರದ ನವ ನಿರ್ಮಾಣ
ಕಾರ್ಯ ನಿರ್ವಿಘ್ನವಾಗಿ ನೆರವೇರಿ ನವ ನವೀನ ಮಂದಿರದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠಾಪನೆ ಅತಿ ಶೀಘ್ರವಾಗಿ ನೆರೆವೇರುವಂತಾಗಲಿ ಎಂದರು.
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಕಾರ್ಯಕಾರಿ ಸಮಿತಿ, ಬಿಎಸ್‌ಕೆಬಿ ಅಸೋಸಿಯೇಶನ್ ಉಪಾಧ್ಯಕ್ಷ ವಾಮನ್ ಹೊಳ್ಳ, ಕಾರ್ಯದರ್ಶಿ ಎ. ಪಿ. ಕೆ. ಪೋತಿ, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ನೂರಾರು ಭಕ್ತಾದಿಗಳು ಈ ಧಾರ್ಮಿಕ ವಿಧಿಯಲ್ಲಿ ಪಾಲ್ಗೊಂಡು ಶ್ರೀ ಕೃಷ್ಣನಿಗೆ ಅಘÂì ಪ್ರದಾನಗೈದರು.
ತೀರ್ಥ ಪ್ರಸಾದ ವಿತರಣೆ ಹಾಗೂ ಲಘು ಉಪಾಹಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.