Advertisement

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

06:01 PM Dec 23, 2024 | Team Udayavani |

ಉದಯವಾಣಿ ಸಮಾಚಾರ
ಗೋಕರ್ಣ: ಜಿಲ್ಲೆಯಲ್ಲಿಯೇ ಪ್ರಪ್ರಥಮ ಒಣ ಮತ್ತು ಹಸಿ ಕಸ ಸಂರಕ್ಷಣಾ ಘಟಕ ಗೋಕರ್ಣದಲ್ಲಿ ನಿರ್ಮಿಸಲಾಗಿದ್ದು ಯಾವುದೇ ಪ್ರಯೋಜನ ಇಲ್ಲದಂತಾಗಿದೆ. 4 ವರ್ಷಗಳ ಹಿಂದೆಯೇ ಈ ಘಟಕ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಅದರಂತೆ 63 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೂಡ ಮಾಡಲಾಗಿದೆ.

Advertisement

ಆದರೆ ಇದುವರೆಗೂ ಚಾಲನೆಗೊಳ್ಳದಿದ್ದರಿಂದಾಗಿ ಇಡೀ ಉದ್ದೇಶವೇ ತಲೆ ಕೆಳಗಾಗುವಂತಾಗಿದೆ. 2015 ರಲ್ಲಿ ಸ್ವತ್ಛ ಭಾರತ ಯೋಜನೆಯಡಿಯಲ್ಲಿ ಪ್ರತಿ ಮನೆ ಮನೆಗೂ ಪ್ರತ್ಯೇಕ ಶೌಚಗೃಹ ನಿರ್ಮಿಸಬೇಕು ಎಂದು ಸರಕಾರ ಆದೇಶಿಸಿತ್ತು. ಅದರಂತೆ ಕೇವಲ ಗೋಕರ್ಣ ಪ್ರದೇಶದಲ್ಲಿಯೇ 4 ಸಾವಿರಕ್ಕೂ ಅಧಿ ಕ ಮನೆಗಳಲ್ಲಿ ಪ್ರತ್ಯೇಕ ಶೌಚಗೃಹ ನಿರ್ಮಾಣಗೊಂಡಿತು. ಆದರೆ ಹೋಟೆಲ್‌ ಇನ್ನಿತರೆ ತ್ಯಾಜ್ಯ ವಿಲೇವಾರಿ ತಲೆನೋವಾಗಿ ಪರಿಣಮಿಸಿತು.

ಮನೆಗಳ ಶೌಚಗೃಹದ ಟ್ಯಾಂಕ್‌ ಎರಡೇ ವರ್ಷಗಳಲ್ಲಿ ಭರ್ತಿಯಾಗಲು ಆರಂಭವಾಯಿತು. ಹೀಗಾಗಿ ಸ್ಥಳೀಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತಕ್ಕೂ ಹೊಸ ಸಮಸ್ಯೆ ಎದುರಾಯಿತು. ಹೀಗಾಗಿ ಜಿಲ್ಲಾ ಪಂಚಾಯತ ನೇತೃತ್ವದಲ್ಲಿ ಅಂಕೋಲಾ, ಕುಮಟಾ ತಾಲೂಕಿನ 13 ಗ್ರಾ.ಪಂ. ವ್ಯಾಪ್ತಿಯಲ್ಲಿ ಜನರಿಗೆ ಅನುಕೂಲವಾಗುವಂತೆ ಗೋಕರ್ಣದ ಗುಡ್ಡದ ಮೇಲೆ ಮಲತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ ಕಳೆದ 4 ವರ್ಷಗಳ ಹಿಂದೆ ನಿರ್ಣಯಿಸಲಾಯಿತು. ಇದಕ್ಕೆ 73 ಲಕ್ಷ ರೂ. ಮಂಜೂರಾಗಿತ್ತು. ಈಗ 63 ಲಕ್ಷ ವೆಚ್ಚದಲ್ಲಿ ಘಟಕ ನಿರ್ಮಿಸಲಾಗಿದೆ. ಇನ್ನು 10 ಲಕ್ಷ ರೂ.ಗಳನ್ನು ಅದರ ನಿರ್ವಹಣೆಗಾಗಿ ಕಾಯ್ದಿಡಲಾಗಿದೆ.

ಯಾವ್ಯಾವ ಪಂಚಾಯಿತಿ: ಕುಮಟಾ ತಾಲೂಕಿನ ನಾಡುಮಾಸ್ಕೇರಿ, ಗೋಕರ್ಣ, ಹನೇಹಳ್ಳಿ, ತೊರ್ಕೆ, ಹಿರೇಗುತ್ತಿ, ಬರ್ಗಿ, ಕೊಡ್ಕಣಿ, ಬಾಡ, ಕಾಗಾಲ ಹಾಗೂ ಅಂಕೋಲಾ ತಾಲೂಕಿನ ಅಗ್ರಗೋಣ, ಬೆಳಂಬಾರ, ಶೆಟಗೇರಿ, ಸಗಡಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಒಣ ಮತ್ತು ಹಸಿ ಕಸಗಳನ್ನು ಇಲ್ಲಿಗೆ ತಂದು ಸಂಸ್ಕರಣ ಘಟಕದಲ್ಲಿ ವಿಲೇವಾರಿ ಮಾಡುವ ಉದ್ದೇಶ
ಹೊಂದಲಾಗಿತ್ತು.

ಕಳಪೆ ಕಾಮಗಾರಿ? ಸಂಸ್ಕರಣಾ ಘಟಕ ನಿರ್ಮಾಣಗೊಂಡಿದ್ದರೂ ಕೂಡ ಕಳೆಪ ಕಾಮಗಾರಿ ನಡೆದಿರುವ ಆರೋಪ ಕೇಳಿಬಂದಿದೆ. ಕಡಿಮೆ ವೆಚ್ಚದ ಬಾಳಿಕೆ ಬಾರದ ಪೈಪ್‌ಲೈನ್‌ ಅಳವಡಿಸಲಾಗಿದೆ. ನಿಯಮ ಬಾಹಿರವಾಗಿ ಕೆಲವೊಂದನ್ನು ನಿರ್ಮಿಸಲಾಗಿದೆ. ಹೀಗಾಗಿ ಅಸಮರ್ಪಕ ಕಾಮಗಾರಿಯಿಂದಾಗಿ ಈ ಘಟಕ ಕೆಲವೇ ವರ್ಷಗಳಲ್ಲಿ ಹಾನಿಗೊಳಗಾಗಲಿದೆ.

Advertisement

ಹೀಗಾಗಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗೋಕರ್ಣ ಗ್ರಾ.ಪಂ. ಸದಸ್ಯರಾದ ಸಂದೇಶ ಗೌಡ, ಶಾರದಾ ಮೂಡಂಗಿ ಸಭೆಯಲ್ಲಿಯೇ ಆರೋಪಿಸಿದ್ದರು. ಆದರೂ ಕೂಡ ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದಿರುವುದು ವಿಪರ್ಯಾಸ.

ಸಾವಿರಾರು ಟನ್‌ ತ್ಯಾಜ್ಯ: ಗೋಕರ್ಣವೊಂದರಲ್ಲಿಯೇ ಪ್ರತಿದಿನಕ್ಕೆ ಸಾವಿರಾರು ಟನ್‌ ತ್ಯಾಜ್ಯ ಸೃಷ್ಟಿಯಾಗುತ್ತದೆ.
ಅದರ ನಿರ್ವಹಣೆ ಮಾಡುವುದು ಕೂಡ ಅಷ್ಟು ಸುಲಭವಲ್ಲ. ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿರುವ ಗೋಕರ್ಣದಿಂದ ಸಾಕಷ್ಟು ಆದಾಯ ಬರುತ್ತಿದೆ. ಆದರೂ ನಿರ್ಲಕ್ಷ್ಯ ತೋರುತ್ತಿರುವುದುಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಘಟಕ ಅಂಕೋಲಾ ಮತ್ತು ಕುಮಟಾ ತಾಲೂಕು ವ್ಯಾಪ್ತಿಗೆ ಸೇರುವುದರಿಂದ ಕುಮಟಾದ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಇದರ ಜವಾಬ್ದಾರಿ ನೀಡಲಾಗಿದೆ. ಆದರೆ ಅವರೂ ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಇನ್ನು ಆರಂಭವಾಗದ ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯ ತಂದು ಹಾಕಲಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಘಟಕ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ನೋಡಲಾಗುತ್ತಿದೆ ಎಂದು ನುಣುಚಿಕೊಳ್ಳುತ್ತಿದ್ದಾರೆ. ಸಂಬಂಧಪಟ್ಟವರು ಇನ್ನಾದರೂ ಈ ಬಗ್ಗೆ ಗಮನಹರಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ.

ಗೋಕರ್ಣದಲ್ಲಿ ಸಾಕಷ್ಟು ತ್ಯಾಜ್ಯ ಸೃಷ್ಟಿಯಾಗುತ್ತಿದ್ದು ಮಲತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣ ಬಹುಮುಖ್ಯವಾದದ್ದು.
ಇದು ಆರಂಭಗೊಂಡರೆ ತ್ಯಾಜ್ಯ ವಿಲೇವಾರಿಗೆ ಅನುಕೂಲವಾಗಲಿದೆ.
●ವಿನಾಯಕ ಸಿದ್ದಾಪುರ, ಪಿಡಿಒ ಗೋಕರ್ಣ

ಜಿಲ್ಲಾ ಪಂಚಾಯಿತಿ ವಿಶೇಷ ಅನುದಾನದಿಂದ ಈ ಮಲತ್ಯಾಜ್ಯ ಸಂಸ್ಕರಣ ಘಟಕ ನಿರ್ಮಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ 13 ಗ್ರಾ.ಪಂ. ವ್ಯಾಪ್ತಿಯ ತ್ಯಾಜ್ಯಗಳನ್ನು ಇಲ್ಲಿ ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದರಿಂದಾಗಿ 13 ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯಗಳಿಗೆ ಮುಕ್ತಿ ದೊರೆಯಲಿದೆ.
●ಈಶ್ವರ ಖಾಂಡೂ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ

*ನಾಗರಾಜ ಎಂ.

Advertisement

Udayavani is now on Telegram. Click here to join our channel and stay updated with the latest news.

Next