ಗೋಕರ್ಣ: ಈ ಬಾರಿ ಮಳೆಗಾಲದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸಾಕಷ್ಟು ಸಂಕಷ್ಟ ಉಂಟಾಗಿದ್ದು, ಇದರಿಂದಾಗಿ ಜನರು ಆತಂಕಗೊಂಡಿದ್ದಾರೆ.
ಒಂದೆಡೆ ಶಿರೂರು ಸೇರಿದಂತೆ ವಿವಿಧೆಡೆ ಗುಡ್ಡ ಕುಸಿತ, ನದಿ ಅಂಚಿನ ಮನೆಗಳಿಗೆ ನೀರು ನುಗ್ಗಿ ಹಾನಿ ಮಾಡಿದರೆ, ಸಮುದ್ರ ತೀರಗಳು ಮನೆ, ಅಂಗಡಿಗಳನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ.
ಇಲ್ಲಿಯ ಸಮೀಪದ ದುಬ್ಬನಶಶಿ, ರುದ್ರಪಾದ, ಕರಿಯಪ್ಪನ ಕಟ್ಟೆಯಲ್ಲಿ ತೀವ್ರ ಕಡಲ ಕೊರೆತ ಉಂಟಾಗಿ ಮನೆ ಹಾಗೂ ಹೋಮ್ ಸ್ಟೇಗಳು ಸಮುದ್ರ ಪಾಲಾಗುತ್ತಿವೆ. ಹಲವು ದಶಕಗಳಿಂದ ಈ ಉದ್ಯೋಗವನ್ನೇ ನಂಬಿಕೊಂಡು ಬಂದವರಿಗೆ ಈಗ ದಿಕ್ಕು ತೋಚದಂತಾಗಿದೆ.
ಈ ಭಾಗದಲ್ಲಿ ಸಾಕಷ್ಟು ಸಣ್ಣಪುಟ್ಟ ಹೋಮ್‌ಸ್ಟೇಗಳಿವೆ. ಅದರಿಂದಲೇ ಹಲವರು ಜೀವನ ಸಾಗಿಸುತ್ತಿದ್ದರು. ಆದರೆ ಎಂದೂ ಕಾಣದಂತಹ ಕಡಲ ಕೊರೆತ ಈ ಬಾರಿ ಉಂಟಾಗಿದ್ದರಿಂದಾಗಿ ತಾವು ನಿರ್ಮಿಸಿಕೊಂಡಿದ್ದ ಕಟ್ಟಡ ಹಾಗೂ ಮನೆಗಳು ನೀರು ಪಾಲಾಗುತ್ತಿರುವುದನ್ನು ಕಂಡು ಕಣ್ಣೀರು ಹಾಕುತ್ತಿದ್ದಾರೆ.
ಓಂ ಬೀಚ್, ಕುಡ್ಲೆ ಬೀಚ್ ಸೇರಿದಂತೆ ಹಲವು ಕಡೆಗಳಲ್ಲಿ ಕಡಲ ಆರ್ಭಟ ಹೆಚ್ಚಾಗಿದೆ. ಹೀಗಾಗಿ ಪ್ರವಾಸಿಗರು ಕೂಡ ಇಲ್ಲಿ ಉಳಿದುಕೊಳ್ಳಲು ಹಿಂದೇಟು ಹಾಕುವಂತಾಗಿದೆ. ದೊಡ್ಡ ದೊಡ್ಡ ಅಲೆಗಳು ನೋಡುಗರಲ್ಲಿ ನಡುಕ ಹುಟ್ಟಿಸುತ್ತದೆ. ಇದರಿಂದಾಗಿ ಯಾವುದೇ ಆದಾಯವಿಲ್ಲದೇ ಹಲವರು ದಿನದೂಡುತ್ತಿದ್ದಾರೆ. ಈ ಬಾರಿ ಸಮುದ್ರ ಮಟ್ಟ ಕೂಡ ಏರಿಕೆಯಾಗಿದ್ದು, ಇದರಿಂದಾಗಿ ಕಡಲು ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗುತ್ತಿದೆ.
ಮೀನುಗಾರಿಕಾ ಬಂದರಾಗಿರುವ ತದಡಿಯಲ್ಲಿ ಬಂದರಿನ ಮೇಲೆ ನೀರು ಹರಿದಿದ್ದು, ಅಷ್ಟರ ಮಟ್ಟಿಗೆ ಸಮುದ್ರದ ನೀರು ಮೀನುಗಾರರನ್ನು ಆತಂಕಕ್ಕೀಡು ಮಾಡಿದೆ. ಇನ್ನು ಹಲವೆಡೆಗಳಲ್ಲಿ ಸಮುದ್ರದ ನೀರು ನುಗ್ಗಿದ್ದು, ಅಲ್ಲಲ್ಲಿ ಸಣ್ಣಪುಟ್ಟ ಹಾನಿಯಾಗಿರುವುದು ವರದಿಯಾಗುತ್ತಿದೆ.
ಈಗ ಮತ್ತೆ ಮಳೆ ಸುರಿಯುತ್ತಿರುವುದರಿಂದ ಅಘನಾಶಿನಿ ನದಿಯ ಹರಿವು ಇನ್ನು ಸಮುದ್ರದ ನೀರಿನ ಒತ್ತಡದಿಂದಾಗಿ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೂ ಕೂಡ ನೀರು ನುಗ್ಗುತ್ತಿರುವುದು ಕಂಡುಬರುತ್ತಿದೆ. ಒಟ್ಟಿನಲ್ಲಿ ಎಲ್ಲೆ ನೋಡಿದರೂ ಅಪಾಯ ಎನ್ನುವಂತಾಗಿದೆ. ಹೀಗಾಗಿ ಪ್ರವಾಸಿಗರ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ.