ಗೋಕರ್ಣ: ಶ್ರೀಕ್ಷೇತ್ರ ಗೋಕರ್ಣ ಸಾರ್ವಭೌಮ ಮಹಾಬಲೇಶ್ವರ ದೇವರ ಶಿವರಾತ್ರಿ ಮಹೋತ್ಸವವು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ಫೆ.28ರಿಂದ ವಿಧ್ಯುಕ್ತವಾಗಿ ಆರಂಭವಾಗಲಿದ್ದು, ಮಾ.4 ರಂದು ಮಹಾ ಶಿವರಾತ್ರಿ ಜಾಗರಣೆ ನಡೆಯಲಿದೆ.
ಕಳೆದ ಒಂಬತ್ತು ವರ್ಷಗಳಿಂದ ಒಂಭತ್ತು ದಿನಗಳ ಕಾಲ ಊರಿನಲ್ಲಿ ಪರಂಪರಾಗತವಾಗಿ ನಡೆಸಿಕೊಂಡುಬಂದ ಮನೆತನದ ಅರ್ಚಕರು, ದೇವಾಲಯದ ಉಪಾದಿಗಳನ್ನು ನಡೆಸುವ ಉಪಾಧಿ ವಂತರು ಹಾಗೂ ದೇವಾಲಯದ ಆಡಳಿತಮಂಡಳಿಯವರ ಸಹಕಾರ- ಸಹಯಯೋಗದೊಂದಿಗೆ ವಿಜೃಂಭಣೆಯಿಂದ ನೆರವೇರಲಿದೆ.
ಫೆ.28ರಂದು ಬೆಳಗ್ಗೆ ಮುಖ್ಯ ಅರ್ಚಕ ವೇ. ಮೂ. ಶಿತಿಕಂಠ ಹಿರೇ ನೇತೃತ್ವದಲ್ಲಿ ಗಣೇಶ ಪೂಜೆ, ಪುಣ್ಯಾಹ, ನಾಂದಿ, ಋತ್ವಿಗ್ವರ್ಣನೆ, ಕೌತುಕಬಂಧ, ವೃಷಭ ಧ್ವಜಾರೋಹಣ, ಮೃತ್ತಿಕಾ ಹರಣೋತ್ಸವದೊಂದಿಗೆ ಶಿವರಾತ್ರಿ ಮಹೋತ್ಸವ ಆರಂಭಗೊಳ್ಳಲಿದೆ. ಅಂದಿನಿಂದ ಒಂಬತ್ತುದಿನ ದೇವಾಲಯದಲ್ಲಿ ಧಾರ್ಮಿಕ ವಿಧಿ - ವಿಧಾನಗಳು, ಹವನಾದಿಗಳು ನೆರವೇರವವು. ಸಂಜೆಯವೇಳೆ ಪ್ರತಿದಿನ ಆಗಮೋಕ್ತ ವಿವಿಧ ಉತ್ಸವಾದಿಗಳು, ರಥೋತ್ಸವಾದಿಗಳು, ಬಲಿ, ಭೂತಬಲಿ, ಚೂರ್ಣೊತ್ಸವ, ಅವಭ್ರತೋತ್ಸವಗಳು ನಡೆಯಲಿವೆ. ಮಾ.1 ರಂದು ಸ್ಥಾನಶುದ್ಧಿ, ಗಜವಾಹನ ಯಂತ್ರೋತ್ಸವ, 2ರಂದು ಕಲಾಶಕ್ತ್ಯಾದಿ ಹವನ, ಹಂಸವಾಹನ ಯಂತ್ರೋತ್ಸವ, 3ರಂದು ಶಾಂತಿ ಪ್ರಾಯಶ್ಚಿತ್ತ್ಯಾದಿ ಹವನ, ಸಿಂಹವಾಹನ ಯಂತ್ರೋತ್ಸವ, ಪುಷ್ಪರಥೋತ್ಸವ ನಡೆಯಲಿದೆ. ಮುಖ್ಯವಾಗಿ ಮಾ.4 ರಂದು ಶಿವಯೋಗದ ಮಹಾಪರ್ವ, ಜಾಗರಣೆ ನಡೆಯಲಿದೆ. ಅಂದು ರುದ್ರಹವನ, ಮಹಾ ಕುಂಬಾಭಿಷೇಕ ಪೂರ್ವಕ ಮಹಾಪೂಜೆ, ಸಂಜೆ ಪುಷ್ಪರಥೋತ್ಸವ, ಜಲಯಾನೋತ್ಸವ, ದೀಪೋತ್ಸವ, ಭೂತಬಲಿ ನಡೆಯುವುದು.
5ರಂದು ಮಯೂರ ಯಂತ್ರೋತ್ಸವ, ಪುಷ್ಪರಥೋತ್ಸವ, ಭೂತಬಲಿ ನಡೆಯಲಿದೆ. ಮಾ.6 ರಂದು ಅಮಾವಾಸ್ಯೆ ಪರಿವಾರ ಹವನ, ಸೂಕ್ತಹವನ, ಪವಮಾನ ಹವನ, ವೃಷಭವಾಹನ ಯಂತ್ರೋತ್ಸವ, ಪುಷ್ಪರಥೋತ್ಸವ ನಡೆಯಲಿದೆ. ಮಾ.7 ರಂದು ಫಾಲ್ಗುಣ ಶುಕ್ಲ ಪ್ರತಿಪದೆಯಂದು ಶಾಂತಿ ಘಂಟಾದ್ಯಭಿಷೇಕ, ದಂಡಬಲಿ, ಭೂತಬಲಿ, ಗ್ರಾಮಬಲಿ ನಂತರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ನಡೆಯಲಿದೆ.
ಮಾ.20 ರಂದು ಚೂರ್ಣೋತ್ಸವ, ಚೂರ್ಣಬಲಿ, ಅವಭೃತ, ಜಲಯಾನೋತ್ಸವ, ಮಹಾಪೂರ್ಣಾಹುತಿ, ಅಂಕುರಾರ್ಪಣೆಯೊಂದಿಗೆ ಶಿವರಾತ್ರಿ ಮಹೋತ್ಸವವು ಪರಿಪೂರ್ಣಗೊಳ್ಳಲಿದೆ.