ಗೋಕರ್ಣ : ಇಲಿಯ ಸಮೀಪದ ಗಂಗಾವಳಿ – ಮಂಜಗುಣಿ ಸೇತುವೆಯ ಗಂಗಾವಳಿ ಕೂಡುರಸ್ತೆಗೆ ಹಾಕಲಾದ ಮಣ್ಣು ಭಾನುವಾರ ಕುಸಿದಿದ್ದು, ದೊಡ್ಡ ವಾಹನ ಸಂಚರಿಸಲಾಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಮಂಜಗುಣಿ – ಗಂಗಾವಳಿ ನಡುವಿನ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರು, ಎರಡು ಕಡೆಯು ಕೂಡ ರಸ್ತೆ ನಿರ್ಮಿಸಲಿಲ್ಲ. ಇದರಿಂದ ಆರು ವರ್ಷಗಳಿಂದ ಜನರು ಪರಿತಪಿಸುವಂಥಾಗಿತ್ತು. ಸಾರ್ವಜನಿಕರ ಮತ್ತು ಸ್ಥಳೀಯರ ಒತ್ತಾಯದ ಮೇರೆಗೆ ಮಳೆಗಾಲ ಸಮೀಪಿಸುತ್ತಿದ್ದಂತೆ ರಸ್ತೆಯ ಎರಡು ಕಡೆಗಳಲ್ಲಿಯೂ ಮಣ್ಣು ಹಾಕಿ ತಾತ್ಕಾಲಿಕವಾಗಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಆದರೆ ಭಾನುವಾರ ಗಂಗಾವಳಿ ಭಾಗದ ಸೇತುವೆ ಕೂಡುರಸ್ತೆ ಕುಸಿದಿದ್ದು, ಯಾವುದೇ ಸಂದರ್ಭದಲ್ಲಿ ಹಾನಿ ಉಂಟಾಗುವ ಸಾಧ್ಯತೆ ಇದೆ.
ಇಲ್ಲಿ ವಾಹನ ಸಂಚಾರ ನಡೆಯುತ್ತಿದೆ ಎಂದು ಗೊತ್ತಿದ್ದರೂ ಕೂಡ ಗುತ್ತಿಗೆ ಪಡೆದ ಡಿಆರ್‌ಎನ್ ಕಂಪನಿಯವರು ಆಗಮಿಸಿ ಕೇವಲ ಮಧ್ಯದಲ್ಲಿ ಮಾತ್ರ ದ್ವಿಚಕ್ರ ವಾಹನ ಹಾಗೂ ಸಣ್ಣ ವಾಹನ ಸಂಚಾರಿಕ್ಕೆ ಅವಕಾಶ ಮಾಡಿ ದೊಡ್ಡ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ.
ಗಂಗಾವಳಿಯಲ್ಲಿ ನಿರ್ಮಿಸಲಾಗಿದ್ದ ಪಂಡರ್ ಪಾಸ್ ಗೆ ಮಣ್ಣು ತುಂಬಲಾಗಿತ್ತು. ಆದರೆ ನೀರು ಹಾಕಿ ಅದನ್ನು ಸರಿ ಮಾಡದೆ ಕೇವಲ ಮಣ್ಣನ್ನು ಹಾಕಿ ಸಂಚಾರಿಕ್ಕೆ ಬಿಟ್ಟಿರುವುದರಿಂದ ಈಗ ಮಳೆ ಆರಂಭವಾಗುತ್ತಿದ್ದಂತೆ ಅದು ಕುಸಿಯಲು ಪ್ರಮುಖ ಕಾರಣವಾಗಿದೆ. ಹೀಗಾಗಿ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ಮುಂದಾಗುವ ಅನಾಹುತವನ್ನು ತಪ್ಪಿಸಬೇಕಾಗಿದೆ. ಇಲ್ಲದಿದ್ದರೆ ಈಗಿರುವ ಮಣ್ಣು ಕೂಡ ಯಾವುದೇ ಹಂತದಲ್ಲಿ ಕುಸಿಯುವ ಸಾಧ್ಯತೆ ಇದೆ. ಒಂದೊಮ್ಮೆ ಹಾಗೆ ಕುಸಿದ ಸಮಯದಲ್ಲಿ ವಾಹನಗಳಿದ್ದರೆ ಪ್ರಾಣಹಾನಿಯಾಗುವ ಸಾಧ್ಯತೆ ಇದೆ. ಆದರೆ ಗುತ್ತಿಗೆ ಪಡೆದ ಕಂಪನಿಯವರು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸ್ಥಳೀಯರು ಹಾಗೂ ವಾಹನ ಸಂಚಾರ ಮಾಡುವವರು ಇಲ್ಲಿ ಪ್ರಯಾಣಿಸಲು ಭಯಗೊಂಡಿದ್ದು, ತ್ವರಿತ ಗತಿಯಲ್ಲಿ ಈ ಕೂಡುರಸ್ತೆ ಸರಿಪಡಿಸಬೇಕಾಗಿದೆ.
”ಮಳೆಗಾಲ ಆರಂಭದಲ್ಲಿಯೇ ರಸ್ತೆಗೆ ಹಾಕಲಾದ ಮಣ್ಣು ಕುಸಿಯಲಾಂಭಿಸಿದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಪ್ರಣಹಾನಿಯಾಗುವ ಸಾಧ್ಯತೆಯಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ, ತಾಲೂಕು ಆಡಳಿತ, ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು. ಒಂದೊಮ್ಮೆ ಯಾರಿಗಾದರೂ ತೊಂದರೆ ಉಂಟಾದರೆ ಅದಕ್ಕೆ ಇಲಾಖೆ ಹೊಣೆಯಾಗಲಿದೆ.”
-ಸದಾನಂದ ಎಸ್ ನಾಯ್ಕ ಅಧ್ಯಕ್ಷರು, ಶ್ರೀ ಅರುಣೋದಯ ಯುವಕ ಸಂಘ ಗಂಗಾವಳಿ