Advertisement

Gokarna; ದಕ್ಷಿಣ ಕಾಶಿಯಲ್ಲಿ ಭಕ್ತರ ಮಹಾಪೂರ: ಆತ್ಮಲಿಂಗ ಮುಟ್ಟಿ ಧನ್ಯ

12:18 PM Mar 11, 2024 | Team Udayavani |

ಗೋಕರ್ಣ : ದಕ್ಷಿಣದ ಕಾಶಿ ಎಂದೇ ಪ್ರಖ್ಯಾತಿಯಾಗಿರುವ ಶ್ರೀ ಕ್ಷೇತ್ರ ಗೋಕರ್ಣಕ್ಕೆ ಮಹಾಶಿವರಾತ್ರಿ ನಿಮಿತ್ತ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿ ಶ್ರೀ ಮಹಾಗಣಪತಿ ಹಾಗೂ ಶ್ರೀ ಮಹಾಬಲೇಶ್ವರ ದೇವರ ದರ್ಶನ ಮಾಡಿದರು.

Advertisement

ದೂರದಿಂದ ಆಗಮಿಸುವ ಭಕ್ತರು ಗುರುವಾರವೇ ಬಂದು ಗೋಕರ್ಣ ಸುತ್ತಮುತ್ತಲಿನಲ್ಲಿ ಉಳಿದುಕೊಂಡಿದ್ದರು. ಮಧ್ಯರಾತ್ರಿ 12 ಗಂಟೆ ನಂತರ ಕೋಟಿ ತೀರ್ಥಕ್ಕೆ ತೆರೆದು ಅಲ್ಲಿ ಸ್ನಾನ ಮಾಡಿ, ನಂತರ ಸಾಲುಗಟ್ಟಿ ಶ್ರೀ ಮಹಾಗಣಪತಿಯ ದರ್ಶನ ಪಡೆದರು. ಗಣಪತಿ ದೇವರ ದರ್ಶನವನ್ನು ಪಡೆದ ನಂತರ ಶ್ರೀ ಮಹಾಬಲೇಶ್ವರ ದೇವರ ದರ್ಶನ ಪಡೆದರು ಭಕ್ತರ ಸಂಖ್ಯೆ ಅಧಿಕವಾಗಿರುವುದರಿಂದ ಕೆಲವೇ ನಿಮಿಷಗಳಲ್ಲಿ ದರ್ಶನವನ್ನು ಪೂರ್ಣಗೊಳಿಸಿ, ಮರಳ ಬೇಕಾಯಿತು. ಭಕ್ತರಿಗೆ ಸಮಸ್ಯೆ ಆಗದಂತೆ ಪೊಲೀಸ್ ಇಲಾಖೆ, ತಾಲೂಕು ಆಡಳಿತ, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ-ಸಂಸ್ಥೆಯವರು ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಿದ್ದರು.

ಶ್ರೀ ಮಹಾಬಲೇಶ್ವರ ದೇವಸ್ಥಾನದ ಆವರಣದಲ್ಲಿ ಸಮಿತಿ ವತಿಯಿಂದಲೇ ಪಾನಕ ನೀಡುವ ಮೂಲಕ ಭಕ್ತರ ಆಯಾಸವನ್ನು ತೀರಿಸಿದರು.

ಶುಕ್ರವಾರ ಶ್ರೀ ಮಹಾಗಣಪತಿ ಹಾಗೂ ಮಹಾಬಲೇಶ್ವರ ದೇವರ ದರ್ಶನ ಪಡೆದವರಲ್ಲಿ ಶೇ.80 ರಷ್ಟು ಭಕ್ತರು ಹೊರ ಜಿಲ್ಲೆ ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದವರು. ಅಧಿಕ ಪ್ರಮಾಣದಲ್ಲಿ ಭಕ್ತರು ಕಂಡು ಬಂದರು. ಇಲ್ಲಿಯ ಸ್ಥಳೀಯರು ತಮ್ಮ ತಮ್ಮ ತಾಲೂಕಿನ ಸಮೀಪದಲ್ಲಿರುವ ಈಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಸ್ಥಳೀಯರಿಗಿಂತಲೂ ಹೊರಗಿನ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ. ಶಿವರಾತ್ರಿಯ ವಿಶೇಷವಾಗಿ ಶ್ರೀ ಮಹಾಬಲೇಶ್ವರ ದೇವಸ್ಥಾನದ ಆವರಣದ ಸುತ್ತಲೂ ಬಣ್ಣ ಬಣ್ಣಗಳ ಪತಾಕೆಗಳನ್ನು ಹಾಕಲಾಗಿತ್ತು. ಹಾಗೇ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಅಚ್ಚುಕಟ್ಟಾಗಿ ದರ್ಶನ ಪಡೆಯಲು ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದ್ದರು. ಹೀಗಾಗಿ ಭಕ್ತರಿಗೂ ನಿರಾಸೆಯಾಗದಂತೆ ದೇವಸ್ಥಾನದ ಆಡಳಿತ ಮಂಡಳಿಯವರು ನಡೆಸಿಕೊಂಡು ಬರುತ್ತಿರುವುದು ಭಕ್ತರ ಸಂತಸಕ್ಕೂ ಕಾರಣವಾಗಿದೆ.

ಶಿವರಾತ್ರಿಗೆ ತನ್ನದೇ ಆದ ವಿಶೇಷ ಮಹತ್ವವಿದ್ದು, ಕರ್ನಾಟಕದಿಂದ ಆಗಮಿಸುವವರ ಪೈಕಿ ಉತ್ತರ ಕರ್ನಾಟಕದವರು ಅಧಿಕವಾಗಿದ್ದಾರೆ. ಅಪ್ಪಟ ಶಿವಭಕ್ತರಾಗಿರುವ ಉತ್ತರ ಕರ್ನಾಟಕದ ಮಂದಿ, ಪ್ರತಿ ವರ್ಷ ಶಿವರಾತ್ರಿ ಎಂದು ಗೋಕರ್ಣಕ್ಕೆ ಆಗಮಿಸಿ ದರ್ಶನ ಪಡೆಯುತ್ತಾರೆ. ಹಾಗೆ ತಾವು ಬರುವಾಗ ಕೆಲವು ಬಟ್ಟೆ ಬರೆಗಳನ್ನು ತೆಗೆದುಕೊಂಡು ಬಂದು ದೇವಸ್ಥಾನದ ಸಮೀಪ ಇರುವ ಖಾಲಿ ಜಾಗದಲ್ಲಿ ಮಲಗಿ ಅಲ್ಲಿಯೇ ಊಟದ ವ್ಯವಸ್ಥೆಗಳನ್ನು ಕೂಡ ಮಾಡಿಕೊಳ್ಳುತ್ತಾರೆ. ಮನೆಯಿಂದ ತೆಗೆದುಕೊಂಡು ಹೋದ ರೊಟ್ಟಿ ಚಟ್ನಿಗಳನ್ನು ತಿಂದು ಸದಾ ಶಿವನ ಧ್ಯಾನ ಮಾಡುತ್ತಾರೆ. ಮಧ್ಯರಾತ್ರಿ 12 ಗಂಟೆ ಆಗುತ್ತಿದ್ದಂತೆಯೇ ಎಲ್ಲರೂ ಕೋಟಿ ತೀರ್ಥದತ್ತ ಸಾಗಿ ಸ್ನಾನ ಮಾಡುವ ಮೂಲಕ ದೇವರ ದರ್ಶನಕ್ಕೆ ಅಣೆಯಾದರು.

Advertisement

ಮರಳಿನಲ್ಲಿ ಅರಳಿದ ಶಿವಲಿಂಗ
ದೇವರ ದರ್ಶನ ಪಡೆದ ನಂತರ ಮುಖ್ಯ ಕಡಲ ತೀರಕ್ಕೆ ತೆರಳಿದ ಭಕ್ತರು ಸಮುದ್ರದಲ್ಲಿ ಈಜಾಡುವುದು ಮತ್ತು ಮರಳಿನಲ್ಲಿ ಶಿವಲಿಂಗವನ್ನು ನಿರ್ಮಿಸಿ ಪೂಜಿ ಸಲ್ಲಿಸುವುದು ಕಂಡು ಬಂದವು.

Advertisement

Udayavani is now on Telegram. Click here to join our channel and stay updated with the latest news.

Next