Advertisement

ದಂತ ವೈದ್ಯರ ಬಳಿಗೆ ತೆರಳುವಾಗ…

09:42 PM Jan 15, 2022 | Team Udayavani |

ಈ ಹಲವಾರು ವರ್ಷಗಳಲ್ಲಿ ಜನರಲ್ಲಿ ಹಲ್ಲುಗಳು ಮತ್ತು ಬಾಯಿಯ ಆರೈಕೆಯ ಬಗ್ಗೆ ಅರಿವು ಹೆಚ್ಚಿದೆ. ಹಲ್ಲು ಅಥವಾ ವಸಡು ನೋವನ್ನು ಪರಿಹರಿಸಿಕೊಳ್ಳುವುದು ಅಥವಾ ನಗುವನ್ನು ಉತ್ತಮಪಡಿಸುವುದು, ಅಡ್ಡಾದಿಡ್ಡಿಯಾಗಿ ಬೆಳೆದಿರುವ ಹಲ್ಲುಗಳನ್ನು ಬ್ರೇಸ್‌ ಹಾಕಿ ಸರಿಪಡಿಸಿಕೊಳ್ಳುವುದು, ವಸಡುಗಳ ಬಣ್ಣ ಬದಲಾಗಿರುವುದನ್ನು ಸರಿಪಡಿಸಿಕೊಳ್ಳುವುದು, ಹಲ್ಲುಗಳ ಆಭರಣ ಇತ್ಯಾದಿ ಉದ್ದೇಶಗಳಿಗಾಗಿ ದಂತವೈದ್ಯರಲ್ಲಿಗೆ ಭೇಟಿ ನೀಡುವುದಿರುತ್ತದೆ. ಈ ಭೇಟಿಯು ಒತ್ತಡಮಯ ಸನ್ನಿವೇಶವಾಗಿ ಉದ್ವೇಗಕ್ಕೆ ಕಾರಣವಾಗಬಹುದು. ನೀವು ನಮ್ಮಂತಹ ದಂತವೈದ್ಯರನ್ನು ಭೇಟಿಯಾಗುವ ಸಂದರ್ಭದಲ್ಲಿ ನಾವು ಉತ್ತಮ ಆರೈಕೆಯನ್ನು ಒದಗಿಸುವುದಕ್ಕೆ ಸಹಾಯವಾಗುವಂತೆ ಹಾಗೂ ದಂತ ವೈದ್ಯಕೀಯ ಆರೈಕೆಯು ಒಂದು ಸಂತೋಷದಾಯಕ ಅನುಭವವಾಗುವುದಕ್ಕೆ ಏನು ಮಾಡಬಹುದು ಎಂಬ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.

Advertisement

ನಿಮ್ಮ ವೈದ್ಯಕೀಯ ಚರಿತ್ರೆಯ ಬಗ್ಗೆ ಪ್ರಾಮಾಣಿಕವಾಗಿರಿ
ಬಾಯಿಯು ದೇಹದ ಕನ್ನಡಿ ಇದ್ದಂತೆ. ಅದು ದೇಹವ್ಯವಸ್ಥೆಯಲ್ಲಿ ಆಗುವ ರಕ್ತಹೀನತೆ, ಮಧುಮೇಹ ಇತ್ಯಾದಿ ಅನೇಕ ಬದಲಾವಣೆಗಳನ್ನು ಪ್ರತಿಫ‌ಲಿಸುತ್ತದೆ. ನಾವು ಕೇವಲ ಹಲ್ಲುಗಳಿಗೆ ಚಿಕಿತ್ಸೆ ಒದಗಿಸುವುದಲ್ಲವೆ ಎಂಬ ಭಾವನೆಯನ್ನು ನೀವು ಹೊಂದಿರಬಹುದು. ಆದರೂ ಈ ಸಂದರ್ಭದಲ್ಲಿ ದಂತ ವೈದ್ಯರ ಜತೆಗೆ ನೀವು ನಿಮ್ಮ ಸಂಪೂರ್ಣ ವೈದ್ಯಕೀಯ ಚರಿತ್ರೆಯನ್ನು ತಿಳಿಸುವುದು ಅಗತ್ಯ. ಶಿಫಾರಸು ಪತ್ರ, ಡಿಸಾcರ್ಜ್‌ ಸಮ್ಮರಿ, ಇತ್ತೀಚೆಗಿನ ಪ್ರಯೋಗಾಲಯ ವರದಿಗಳು, ಎಕ್ಸ್‌ರೇ/ ಸ್ಕ್ಯಾನ್‌ ವರದಿಗಳು, ಲಸಿಕೆ ವಿವರಗಳು ಇತ್ಯಾದಿಗಳಿಂದ ದಂತ ವೈದ್ಯರಿಗೆ ನಿಮ್ಮ ಈಗಿನ ಆರೋಗ್ಯ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ಚಿತ್ರಣ ಹೊಂದಲು ಸಾಧ್ಯವಾಗುತ್ತದೆ.

ನಿಮ್ಮ ಔಷಧಗಳು/ ಔಷಧ ಅಲರ್ಜಿಗಳ ಬಗ್ಗೆ ಮಾಹಿತಿ ನೀಡಿ
ರಕ್ತ ತೆಳು ಮಾಡುವಂತಹವುಗಳ ಸಹಿತ ಕೆಲವು ಔಷಧಗಳು ದಂತವೈದ್ಯಕೀಯ ಚಿಕಿತ್ಸೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಆದ್ದರಿಂದ ದಂತವೈದ್ಯರ ಬಳಿಗೆ ಹೋಗುವಾಗ ನೀವು ತೆಗೆದುಕೊಳ್ಳುತ್ತಿರುವ ಇತರ ಔಷಧಗಳ ಪ್ರಿಸ್ಕ್ರಿಪ್ಶನ್‌ ಅಥವಾ ಮಾತ್ರೆಗಳ ಹಾಳೆಯನ್ನು ಜತೆಗೆ ಇರಿಸಿಕೊಳ್ಳಿ.

ಊಟ – ಉಪಾಹಾರ ಮತ್ತು ನಿಯಮಿತ ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳಿ
ದಂತವೈದ್ಯಕೀಯ ಕ್ಲಿನಿಕ್‌ಗೆ ಭೇಟಿ ನೀಡುವುದಕ್ಕೆ ಮುನ್ನ ನಿಮಗಿರುವ ರಕ್ತದೊತ್ತಡ/ ಮಧುಮೇಹ ಔಷಧಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಿ. ದಂತವೈದ್ಯರ ಭೇಟಿಗೆ ಮುನ್ನ ಊಟ -ಉಪಾಹಾರ ತಪ್ಪಿಸಿಕೊಳ್ಳಬೇಡಿ.

ಭೇಟಿಗೆ ಮುನ್ನ ಸರಿಯಾಗಿ ಹಲ್ಲುಜ್ಜಿಕೊಳ್ಳಿ
ದಂತ ವೈದ್ಯರ ಭೇಟಿಗೆ ಮುನ್ನ ಗಾಢ ವಾಸನೆಯ ಬೆಳ್ಳುಳ್ಳಿ, ನೀರುಳ್ಳಿಯಂತಹ ಆಹಾರವಸ್ತುಗಳನ್ನು ಸೇವಿಸಬೇಡಿ. ಧೂಮಪಾನ, ಗುಟ್ಕಾ/ಪಾನ್‌ ಜಗಿಯದಿರಿ. ದಂತವೈದ್ಯರ ಭೇಟಿಗೆ ಮುನ್ನ ಸರಿಯಾಗಿ ಹಲ್ಲುಜ್ಜಿಕೊಳ್ಳಿ.

Advertisement

ಭೇಟಿಗೆ ನಿಗದಿಯಾದ ಸಮಯಕ್ಕೆ ಸರಿಯಾಗಿ ಹೋಗಿ
ದಂತವೈದ್ಯರ ಭೇಟಿಗೆ ನಿಗದಿಯಾದ ಸಮಯಕ್ಕಿಂತ ಸ್ವಲ್ಪ ಮುನ್ನವೇ ಅಲ್ಲಿಗೆ ತಲುಪಿ. ನೀವು ತಡವಾಗಿ ಹೋಗುವುದೇ ಆದಲ್ಲಿ ನಿಗದಿತ ಸಮಯಕ್ಕಿಂತ ಕನಿಷ್ಠ ಅರ್ಧ ತಾಸು ಮುಂಚಿತವಾಗಿ ಈ ಬಗ್ಗೆ ದಂತವೈದ್ಯರಿಗೆ ಮಾಹಿತಿ ನೀಡಿ. ಇದರಿಂದ ನಿಮಗೆ ಹೆಚ್ಚು ಉತ್ತಮವಾಗಿ ಆರೈಕೆ ಒದಗಿಸಲು ಅವರಿಗೆ ಸಾಧ್ಯವಾಗುತ್ತದೆ.

ಅವಸರ ಮಾಡಬೇಡಿ
ನಿಮಗೆ ಅಗತ್ಯವಾದ ಚಿಕಿತ್ಸೆಯನ್ನು ಉತ್ತಮವಾಗಿ ಒದಗಿಸಲು ದಂತವೈದ್ಯರಿಗೆ ಸಾಕಷ್ಟು ಸಮಯ (ಚಿಕಿತ್ಸೆಯನ್ನು ಆಧರಿಸಿ 45 ನಿಮಿಷಗಳಿಂದ 1 ತಾಸಿನ ವರೆಗೆ)
ನೀಡಿ. ಇದಕ್ಕಾಗಿ ನಿಮ್ಮ ಆ ದಿನದ ಕೆಲಸಕಾರ್ಯಗಳನ್ನು ಸೂಕ್ತವಾಗಿ ಹೊಂದಾಣಿಕೆ ಮಾಡಿಕೊಳ್ಳಿ.

ಲಿಪ್‌ಸ್ಟಿಕ್‌ ಹಾಕಬೇಡಿ
ದಂತಚಿಕಿತ್ಸೆಯನ್ನು ನೀಡುವ ಸಂದರ್ಭದಲ್ಲಿ ನೀವು ಲಿಪ್‌ಸ್ಟಿಕ್‌ ಹಾಕಿದ್ದರೆ ಅದು ಹರಡಿಕೊಳ್ಳಬಹುದು. ಹೀಗಾಗಿ ದಂತಚಿಕಿತ್ಸೆಗೆ ಹೋಗುವಾಗ ಲಿಪ್‌ಸ್ಟಿಕ್‌ ಬೇಡ. ಸಾದಾ ಲಿಪ್‌ಬಾಮ್‌ ಹಾಕಿಕೊಂಡರೆ ಅಡ್ಡಿಯಿಲ್ಲ.

 ಸಲಹೆ ಸೂಚನೆಗಳನ್ನು ಅನುಸರಿಸಿ
ತಮ್ಮಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ತಾವು ನೀಡುವ ಸಲಹೆ ಸೂಚನೆಗಳನ್ನು ಸರಿಯಾಗಿ ಪಾಲಿಸಬೇಕು ಎಂಬುದು ಪ್ರತಿಯೊಬ್ಬ ದಂತವೈದ್ಯರ ಅಪೇಕ್ಷೆಯಾಗಿರುತ್ತದೆ. ಏಕೆಂದರೆ ದಂತಚಿಕಿತ್ಸೆಯ ಯಶಸ್ಸು ಆ ಬಳಿಕ ವೈದ್ಯರ ಸಲಹೆ ಸೂಚನೆಗಳನ್ನು ರೋಗಿ ಎಷ್ಟರಮಟ್ಟಿಗೆ ಪಾಲಿಸುತ್ತಾರೆ ಎಂಬುದನ್ನು ಆಧರಿಸಿರುತ್ತದೆ. ಮರುಭೇಟಿ ಅಗತ್ಯವಿದ್ದರೆ ಹಾಗೆ ಮಾಡಿ, ನಿಮಗೆ ಮುಖತಃ ಭೇಟಿ ಸಾಧ್ಯವಿಲ್ಲ ಎಂದಾದರೆ ವೈದ್ಯರಿಗೆ ಕರೆ ಮಾಡಿ ಮಾತನಾಡಿ.

ಕೈಸಂಕೇತ ಉಪಯೋಗಿಸಿ
ಚಿಕಿತ್ಸೆ ನಡೆಯುತ್ತಿರುವ ಸಂದರ್ಭದಲ್ಲಿ ನಿಮಗೆ ಉಗಿಯಬೇಕು/ ಬಾಯಿ ಮುಚ್ಚಬೇಕು/ ವಿರಾಮ ತೆಗೆದುಕೊಳ್ಳಬೇಕು/ ಬಾಯಿ ಮುಕ್ಕಳಿಸಬೇಕು ಎಂದೆನಿಸಿದರೆ ದಯಮಾಡಿ ಕೈ ಎತ್ತಿ ಚಿಕಿತ್ಸೆಯನ್ನು ನಿಲ್ಲಿಸುವಂತೆ ವೈದ್ಯರಿಗೆ ಸನ್ನೆ ಮಾಡಿ.

ನಿಮಗೇನಾದರೂ ಸಂದೇಹಗಳಿದ್ದರೆ ವೈದ್ಯರನ್ನು ಕೇಳಿ, ಗೂಗಲ್‌ ಮೊರೆ ಹೊಗದಿರಿ
ದಂತವೈದ್ಯಕೀಯದ ಯಾವುದೇ ವಿಚಾರ ಅಥವಾ ಬಾಯಿಯ ಆರೋಗ್ಯದ ವಿಚಾರದಲ್ಲಿ ನಿಮಗೇನಾದರೂ ಸಂದೇಹ, ಪ್ರಶ್ನೆಗಳಿದ್ದಲ್ಲಿ ಸರಿಯಾದ ಮಾಹಿತಿಗಾಗಿ ದಂತವೈದ್ಯರನ್ನು ಸಂಪರ್ಕಿಸಿ. ಉದಾಹರಣೆಗೆ, “ಮೌತ್‌ ಅಲ್ಸರ್‌’ ಎಂಬ ಹುಡುಕಾಟಕ್ಕೆ ಗೂಗಲ್‌ ಒದಗಿಸುವ ಚಿತ್ರಗಳಲ್ಲಿ ಕೆಲವು ನಿಮ್ಮಲ್ಲಿ ಭಯ, ಗಾಬರಿ ಉಂಟುಮಾಡಬಹುದು. ಹೀಗಾಗಿ ಯಾವುದೇ ಸಂಶಯ ಇದ್ದರೂ ಗೂಗಲ್‌ಗೆ ಶರಣಾಗದೆ ದಂತವೈದ್ಯರನ್ನು ಸಂಪರ್ಕಿಸಿ.

ಮಕ್ಕಳ ಮುಂದೆ ವೈದ್ಯರನ್ನು
“ಭಯಮೂರ್ತಿ’ಯಂತೆ ಚಿತ್ರಿಸಬೇಡಿ
“ಬೇಗ ಊಟ ಮಾಡು, ಇಲ್ಲವಾದರೆ ಡಾಕುó ಇಂಜೆಕ್ಷನ್‌ ಕೊಡುತ್ತಾರೆ ನೋಡು’ ಎಂಬುದು ನಾವೆಲ್ಲ ಸಾಮಾನ್ಯವಾಗಿ ಕೇಳಿರುವ ಮಾತು. ತನ್ನ ಮಗು ಊಟ-ಉಪಾಹಾರವನ್ನು ಸೇವಿಸುವಂತೆ ಮಾಡುವುದಕ್ಕಾಗಿ ಅನೇಕ ಹೆತ್ತವರು ಈ ಅಸ್ತ್ರವನ್ನು ಪ್ರಯೋಗಿಸುತ್ತಾರೆ. ಇದರಿಂದಾಗಿ ಮಗು ವೈದ್ಯರ ಬಗ್ಗೆ ಅನೂಹ್ಯ ಭೀತಿಯೊಂದನ್ನು ಬೆಳೆಸಿಕೊಳ್ಳುತ್ತದೆ ಮತ್ತು ಮಕ್ಕಳಿಗೆ ದಂತವೈದ್ಯಕೀಯ ಚಿಕಿತ್ಸೆ ನೀಡುವುದು ಇದರಿಂದ ಭಾರೀ ಸವಾಲಾಗಿ ಪರಿಣಮಿಸುತ್ತದೆ. ವೈದ್ಯರು ಎಂದರೆ ಕೆಟ್ಟವರು ಅಥವಾ ಭಯಾನಕರು ಎಂಬ ರೀತಿಯಾಗಿ ಮಕ್ಕಳ ಮುಂದೆ ಚಿತ್ರಿಸಬೇಡಿ, ಇದು ಮಕ್ಕಳ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುತ್ತದೆ.

ವಿಶೇಷ ಪ್ರಕರಣಗಳು ಕಿತ್ತುಹೋದ ಹಲ್ಲುಗಳು
ಅಪಘಾತದ ಪರಿಣಾಮವಾಗಿ ಇಡೀ ಹಲ್ಲು ಕಿತ್ತುಬಂದಿದ್ದರೆ/ ಬಿದ್ದುಹೋಗಿದ್ದರೆ ಅಂತಹ ಸಂದರ್ಭದಲ್ಲಿ ಹಲ್ಲನ್ನು ಹಾಲು/ಎಳನೀರಿನಲ್ಲಿ ಸಂರಕ್ಷಿಸಿ ತನ್ನಿ. ಅದನ್ನು ಬಟ್ಟೆ ಅಥವಾ ಹತ್ತಿಯಲ್ಲಿ ಸುತ್ತುವುದು ಬೇಡ, ಹಾಗೆ ಮಾಡಿದರೆ ಜೀವಧಾರಕ ಅಂಗಾಂಶಗಳು ಒಣಗಿ ಅದನ್ನು ಮತ್ತೆ ಕೂರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

ಬ್ರಿಜ್‌/ಕ್ಯಾಪ್‌ ಸ್ಥಾನಪಲ್ಲಟವಾಗಿದ್ದರೆ
ಕ್ರೌನ್‌/ಬ್ರಿಜ್‌ ಸ್ಥಾನಪಲ್ಲಟಗೊಂಡ ಸಂದರ್ಭದಲ್ಲಿ ಅದು ಆಧರಿಸುವ ಹಲ್ಲು ಮುರಿಯದೆ ಇದ್ದಾಗ ಅದನ್ನು ಮರಳಿ ಕೂರಿಸಬಹುದಾಗಿದೆ. ಸ್ಥಾನಪಲ್ಲಟಗೊಂಡ ಬ್ರಿಜ್‌/ಕ್ಯಾಪ್‌ ಅನ್ನು ಶುದ್ಧ ಹತ್ತಿಯ ಉಂಡೆಯಲ್ಲಿ ಅಥವಾ ಶುಚಿಯಾದ ಎನವಲಪ್‌ನಲ್ಲಿ ಇರಿಸಿ ಆದಷ್ಟು ಬೇಗನೆ ದಂತ ವೈದ್ಯರಲ್ಲಿಗೆ ಭೇಟಿ ಕೊಡಿ.

ಮುರಿದ ಹಲ್ಲು
ಹಲ್ಲು ಮುರಿದಿದ್ದರೆ ತುಣುಕುಗಳನ್ನು ಗೋಂದು ಇತ್ಯಾದಿಗಳಿಂದ ಜೋಡಿಸಲು ಮುಂದಾಗಬೇಡಿ. ಹಾಗೆ ಮಾಡಿದರೆ ಅದರಲ್ಲಿರುವ ರಾಸಾಯನಿಕಗಳಿಂದ ಬಾಯಿಯ ಅಂಗಾಂಶಗಳಿಗೆ ತೊಂದರೆಯಾಗಬಹುದು. ದಂತವೈದ್ಯರು ಅವುಗಳನ್ನು ವೈಜ್ಞಾನಿಕ ವಿಧಾನದಲ್ಲಿ ಸರಿಜೋಡಿಸಿ ಮತ್ತೆ ನಿಮ್ಮ ಬಳಕೆಗೆ ಸಿಗುವಂತೆ ಮಾಡಬಲ್ಲರು.
ನೀವು ನಿಮ್ಮ ದಂತ ಸಂಬಂಧಿ ಸಮಸ್ಯೆಗಳಿಗೆ ವೃತ್ತಿಪರ ಪರಿಸರದಲ್ಲಿ ವೃತ್ತಿನಿಪುಣರ ಸಲಹೆಯನ್ನು ಪಡೆಯುವುದು ಅತ್ಯಂತ ಸೂಕ್ತವಾಗಿದೆ. ಇದರಿಂದ ನಾವು ನಿಮ್ಮ ಪ್ರಶ್ನೆಗಳಿಗೆ ಸರಿಯಾದ ಮತ್ತು ಸಮರ್ಪಕವಾದ ಉತ್ತರಗಳನ್ನು ನೀಡುವುದು ಸಾಧ್ಯವಾಗುತ್ತದೆ.

ಈಗೊಂದು ಅತೀ ದೊಡ್ಡ ಪ್ರಶ್ನೆ ಇದೆ: ಯಾವಾಗ
ದಂತವೈದ್ಯರನ್ನು ಭೇಟಿ ಮಾಡಬೇಕು?
ಈ ಕೆಳಕಂಡ ಅಂಶಗಳು ಕಂಡುಬರುತ್ತಿವೆ ಎಂದು ನಿಮಗೆ ಅನ್ನಿಸಿದರೆ:
-ಹಲ್ಲುನೋವಿದ್ದಾಗ
– ಬಿಸಿ/ ತಂಪಾದ ಆಹಾರವನ್ನು ಸೇವಿಸುವಾಗ ಹಲ್ಲುಗಳು ಜುಮುಗುಡುತ್ತಿದ್ದರೆ
-ಹಲ್ಲುಗಳು ಬಣ್ಣಗೆಡಲು ಆರಂಭವಾಗಿದ್ದರೆ
-ಹಲ್ಲು ಹುಳುಕಾಗಲು ಆರಂಭವಾಗಿದ್ದರೆ/ ಹಲ್ಲುಗಳ ನಡುವೆ ಆಹಾರದ ತುಣುಕುಗಳು ಸಿಕ್ಕಿಕೊಳ್ಳಲು ಆರಂಭವಾಗಿದ್ದರೆ
– ಹಲ್ಲುಜ್ಜುವಾಗ ರಕ್ತ ಸ್ರಾವವಾಗುತ್ತಿದ್ದರೆ/ ಹಲ್ಲು ಅಲುಗಾಡಲು ಆರಂಭವಾಗಿದ್ದರೆ/ ಹಲ್ಲುಗಳು ಸಡಿಲವಾಗಿದ್ದರೆ
– ಮಧುಮೇಹ ನಿಯಂತ್ರಣ ತಪ್ಪಿದ್ದರೆ
-ಹಲ್ಲು ಕಳೆದುಹೋಗಿದ್ದರೆ
– 2 ವಾರಗಳಿಂದ ಗುಣವಾಗದ ಬಾಯಿಹುಣ್ಣು/ ಕೆಂಪಾಗಿರುವುದು/ ಬಿಳಿ ಮಚ್ಚೆ ಇದ್ದರೆ
– ಮಗು ಬೆರಳು ಚೀಪುವುದು/ ಬಾಯಿಯಲ್ಲಿ ಉಸಿರಾಡುವುದು/ ಮಾತಿನ ತೊಂದರೆ ಹೊಂದಿದ್ದರೆ
– ಮುರುಕಾದ/ ಅಡ್ಡಾದಿಡ್ಡಿ ಬೆಳೆದ ಹಲ್ಲುಗಳು
– ದವಡೆಗಳನ್ನು ತೆರೆಯಲು ಕಷ್ಟ/ “ಕ್ಲಿಕ್‌’ ಸದ್ದು ಬರುತ್ತಿದ್ದರೆ ನಿಯಮಿತವಾಗಿ ದಂತವೈದ್ಯರನ್ನು ಭೇಟಿ (ಆರು ತಿಂಗಳಿಗೆ ಒಮ್ಮೆ)ಮಾಡಿ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದುಕೊಂಡರೆ ಬಾಯಿಯ ಆರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳಬಹುದು.ನಿಮ್ಮ ಮುಖದಲ್ಲಿ ನಗು ಸದಾ ಇರಲಿ.

-ಡಾ| ಶ್ರುತಿ ಆಚಾರ್ಯ
ಅಸೋಸಿಯೇಟ್‌ ಪ್ರೊಫೆಸರ್‌, ಓರಲ್‌ ಮೆಡಿಸಿನ್‌ ಮತ್ತು ರೇಡಿಯಾಲಜಿ ವಿಭಾಗ
ಎಂಸಿಒಡಿಎಸ್‌, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next