Advertisement

ಸೇವೆ ಮಾಡಿ ಹೋಗುತ್ತಿರಬೇಕು…

11:41 AM May 05, 2018 | Team Udayavani |

ಬೆಂಗಳೂರು: ಕೊನೆಯ ಉಸಿರಿರುವವರೆಗೆ ಪಕ್ಷ ಸಂಘಟನೆ ಹಾಗೂ ಸಮಾಜ ಸೇವೆ ಮಾಡಿ ಹೋಗುತ್ತಿರಬೇಕು ಎನ್ನುತ್ತಿದ್ದ ಶಾಸಕ ವಿಜಯಕುಮಾರ್‌ ಅದೇ ರೀತಿ ಬದುಕಿ ಮಾದರಿಯಾಗಿದ್ದಾರೆ! ಈ ರೀತಿಯ ಮಾತುಗಳು ಜಯನಗರದಲ್ಲಿ ಶುಕ್ರವಾರ ಇಡೀ ದಿನ ಕೇಳಿಬಂತು. ಅಗಲಿದ ಸರಳ ಜೀವಿಗೆ ಕಂಬನಿ ಮಿಡಿದ ಆಪ್ತ ಬಳಗ ಅವರ ಆದರ್ಶಗಳನ್ನು ಮೆಲುಕು ಹಾಕುತ್ತಿತ್ತು.

Advertisement

ಸಹೋದರನ ಅಗಲಿಕೆಯಿಂದ ಅಕ್ಕ ವಸಂತಾ ಸ್ವಾಮಿ ದುಃಖತಪ್ತರಾಗಿದ್ದರು. ಸಹೋದರನ ಆದರ್ಶದ ಬಗ್ಗೆ ಮೆಲುಕು ಹಾಕಿದ ಅವರು, ಜೀವನದಲ್ಲಿ ಕೊನೆಯುಸಿರು ಇರುವವರೆಗೆ ಕೆಲಸ ಮಾಡುತ್ತಿರಬೇಕು ಎಂದು ಹೇಳುತ್ತಿದ್ದ ವಿಜಿ ಅದೇ ರೀತಿ ನಡೆದುಕೊಂಡ.

ವಿಜಿಗೆ ಆರೋಗ್ಯ ಸರಿ ಇಲ್ಲದಿದ್ದರೂ ಪಾದಯಾತ್ರೆ ಮೂಲಕವೇ ಮತ ಯಾಚಿಸುತ್ತಿದ್ದ. ಇದರಿಂದ ಕುಟುಂಬದವರಿಗೆಲ್ಲಾ ಆತಂಕವಾಗುತ್ತಿತ್ತು. ಪ್ರತಿ ಚುನಾವಣೆಗೂ ಕುಟುಂಬದವರೆಲ್ಲಾ ಕೈಜೋಡಿಸುತ್ತಿದ್ದರು. ಈ ಬಾರಿಯೂ ಗೆಲ್ಲುವ ವಿಶ್ವಾಸವಿತ್ತು. ಆದರೆ ಆ ಸಂತಸದ ಗಳಿಗೆ ಇಲ್ಲವಾಯಿತು ಎಂದು ಅವರು ಕಣ್ಣೀರಿಟ್ಟರು.

ನಾನು ಸಾಮಾನ್ಯ ಕಾರ್ಯಕರ್ತ: ಅನಾರೋಗ್ಯವಿದ್ದ ಕಾರಣ ಪಾದಯಾತ್ರೆ ಬದಲಿಗೆ ತೆರೆದ ಜೀಪ್‌ನಲ್ಲಿ ನಿಂತು ಇಲ್ಲವೇ ಕುಳಿತು ಪ್ರಚಾರ ಮಾಡಿ ಎಂದು ಪರಿ ಪರಿಯಾಗಿ ಕೇಳಿಕೊಂಡೆವು. ಅದಕ್ಕೆ ಒಪ್ಪದ ಅವರು, “ನಾನು ಮೋದಿ ಅಥವಾ ವಾಜಪೇಯಿ ಅವರಂತೆ ಅಪಾರ ಜನಮನ್ನಣೆ ಗಳಿಸಿದ ನಾಯಕನೇನಲ್ಲ. ನಾನೇನಿದ್ದರೂ ಸಾಮಾನ್ಯ ಕಾರ್ಯಕರ್ತನಂತೆ ಓಡಾಡಬೇಕು ಎಂದು ಹೇಳುತ್ತಿದ್ದರು’ ಎಂದು ಬೆಂಬಲಿಗರೊಬ್ಬರು ಹನಿಗಣ್ಣಾದರು.

ಅನಾರೋಗ್ಯವಿದ್ದರೂ ಪಾದಯಾತ್ರೆ: ಸುಮಾರು 20 ದಿನಗಳ ಹಿಂದಷ್ಟೇ ಜಯದೇವ ಆಸ್ಪತ್ರೆಯಲ್ಲಿ ವಿಜಯಕುಮಾರ್‌ ಅವರ ಹೃದಯ ನಾಳಕ್ಕೆ ಸ್ಟಂಟ್‌ ಅಳವಡಿಸಲಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿದ್ದ ಜಯದೇವ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಆದರೆ ಒಂದು ದಿನವಷ್ಟೇ ವಿಶ್ರಾಂತಿ ಪಡೆದು ಮರುದಿನ ಕಚೇರಿಯಲ್ಲಿದ್ದ ವಿಜಯಕುಮಾರ್‌ ಮತ್ತೆ ಪಾದಯಾತ್ರೆ ಆರಂಭಿಸಿದ್ದರು. ಇದರಿಂದ ಆರೋಗ್ಯದಲ್ಲಿ ಏರುಪೇರಾಯಿತು ಎಂದು ಆಪ್ತರು ಹೇಳುತ್ತಾರೆ.

Advertisement

ವೈದ್ಯರ ಸೂಚನೆಯಿದ್ದರೂ ವಿಶ್ರಾಂತಿ ಪಡೆಯದೆ ವಿಜಯಕುಮಾರ್‌ ಅವರು ಪಾದಯಾತ್ರೆ ನಡೆಸುತ್ತಿದ್ದರು. ಬುಧವಾರ ಶಾಕಾಂಬರಿನಗರದಲ್ಲಿ ಪ್ರಚಾರ ನಡೆಸುವಾಗಲೇ ಸ್ವಲ್ಪ ಅಸ್ವಸ್ಥಗೊಂಡಿದ್ದರು. ಅನಾರೋಗ್ಯವಿದ್ದರೂ ನಿತ್ಯ ಬೆಳಗ್ಗೆ 7.30ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 4ರಿಂದ 7.30ರವರೆಗೆ ಪಾದಯಾತ್ರೆ ನಡೆಸುತ್ತಿದ್ದರು ಎಂದು ಪಾಲಿಕೆ ಸದಸ್ಯ ಎನ್‌.ನಾಗರಾಜ್‌ ಭಾವುಕರಾದರು.

ಮತ ಯಾಚಿಸುತ್ತಲೇ…: ಗುರುವಾರ ಮಧ್ಯಾಹ್ನ 12.30ಕ್ಕೆ ಜಯದೇವ ಆಸ್ಪತ್ರೆಗೆ ತೆರಳಿದ ವಿಜಯಕುಮಾರ್‌ ಅವರು ಡಾ.ಮಂಜುನಾಥ್‌ ಅವರು ಬೇರೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ವಿಷಯ ತಿಳಿದು ಬೇರೆ ವೈದ್ಯರಿದ್ದರೂ ಆರೋಗ್ಯ ತೋರಿಸಿಕೊಳ್ಳದೆ ವಾಪಸ್ಸಾಗಿದ್ದರು.

ಮಧ್ಯಾಹ್ನ 3 ಗಂಟೆಗೆ ವೈದ್ಯರನ್ನು ಕಾಣಬೇಕೆಂದು ಚಾಲಕ ನೆನಪಿಸಿದರೂ ಹೋಗದೆ ಪ್ರಚಾರಕ್ಕೆ ಸಜ್ಜಾಗಿದ್ದರು ಎಂದು ಮಾಜಿ ಕಾರ್ಪೋರೇಟರ್‌ ರಾಮಮೂರ್ತಿ  ಸಂದರ್ಭ ವಿವರಿಸಿದರು. ಪಟ್ಟಾಭಿರಾಮನಗರ ವಾರ್ಡ್‌ನಲ್ಲಿ ಸಂಜೆ 5 ಗಂಟೆಗೆ ಪಾದಯಾತ್ರೆ ಆರಂಭಿಸಿದರು. 6.45ರ ಹೊತ್ತಿಗೆ ಬಹುತೇಕ ಮುಗಿದಿತ್ತು.

ಎರಡು ಮನೆ ಕಂಡು ಮತಯಾಚನೆಗೆ ಮುಂದಾದರು. ಅವರನ್ನು ಪರಿಚಯಿಸುತ್ತಲೇ ನಮಸ್ಕಾರ ಎಂದರು. ಹಿಂದಿದ್ದವರು ಬಿಜೆಪಿಗೆ ಮತ ಹಾಕಿ ಎಂದಾಗ ಕೈ ಮುಗಿಯುತ್ತಲೇ ವಿಜಯಕುಮಾರ್‌ ಕುಸಿದುಬಿದ್ದರು. ತಕ್ಷಣ ಐದಾರು ನಿಮಿಷದಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು. ಒಮ್ಮೆಯಷ್ಟೇ ನನಗೇನಾಗಿದೆ ಎಂದು ಕೇಳಿದ ಅವರು ಮತ್ತೆ ಮಾತನಾಡಲಿಲ್ಲ ಎಂದು ರಾಮಮೂರ್ತಿ ಹನಿಗಣ್ಣಾದರು.

Advertisement

Udayavani is now on Telegram. Click here to join our channel and stay updated with the latest news.

Next