Advertisement

ದೆಹಲಿಗೆ ಹೋಗುವುದೇ ಸರ್ಕಾರದ ಸಾಧನೆ

07:49 PM Jul 17, 2021 | Team Udayavani |

ಜಮಖಂಡಿ: ಜನತೆ ಸಂಕಷ್ಟ ಮತ್ತು ತೊಂದರೆಗೆ ಬಿಜೆಪಿ ಸರ್ಕಾರ ಸ್ಪಂದಿಸದೇ ಕೇವಲ ಮುಖ್ಯಮಂತ್ರಿ ಪಟ್ಟ ಉಳಿಸಿಕೊಳ್ಳುವ ನೆಪದಲ್ಲಿ ಪದೇ ಪದೇ ದೆಹಲಿ ಹೈಕಮಾಂಡ್‌ ಪ್ರಮುಖರಿಗೆ ಭೇಟಿ ನೀಡುತ್ತಿರುವುದು ನಾಚಿಕೆಯ ಸಂಗತಿ. ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ದೆಹಲಿಗೆ ಹೋಗುವುದೇ ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ಶಾಸಕ ಆನಂದ ನ್ಯಾಮಗೌಡ ಆರೋಪಿಸಿದರು.

Advertisement

ನಗರದ ಸರ್ಕಾರಿ ರಮಾ ನಿವಾಸದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊರೊನಾ 2ನೇ ಅಲೆ ನಿಯಂತ್ರಿಸುವಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದು, ಲಸಿಕೆ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ರಾಜ್ಯ ಸರ್ಕಾರ ಘೋಷಿಸಿದ ಪ್ಯಾಕೇಜ್‌ನಲ್ಲಿ ಯಾವುದೇ ಸಮತೋಲನ ಇಲ್ಲವಾಗಿದೆ. ಕಾರ್ಮಿಕರಿಗೆ ಒಂದು ರೀತಿ ಪರಿಹಾರ, ಇನ್ನೊಬ್ಬರಿಗೆ ಇನ್ನೊಂದು ರೀತಿ ಪರಿಹಾರ ಘೋಷಿಸಿದ್ದು ಅವೈಜ್ಞಾನಿಕ. ಫಲಾನುಭವಿಗಳಿಗೆ ಪರಿಹಾರ, ಧನಸಹಾಯ ತಲುಪಿರುವುದಿಲ್ಲ ಎಂದರು.

ಜು.18ರಂದು ಜಮಖಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪ್ರವಾಸ ಕೈಗೊಂಡಿದ್ದು, ಕೊರೊನಾ ಸಂದರ್ಭದಲ್ಲಿ ತೊಂದರೆ ಅನುಭವಿಸಿದ, ಮೃತರ ಕುಟುಂಬಸ್ಥರಿಗೆ ಭೇಟಿಯಾಗಿ ಆತ್ಮಸ್ಥೆರ್ಯ ತುಂಬಲಿದ್ದಾರೆ. ನಗರದ ಎಪಿಎಂಸಿ ಮಂಗಲ ಕಾರ್ಯಾಲಯದಲ್ಲಿ ಬೆಳಗ್ಗೆ 8ಕ್ಕೆ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್‌ ವಿವಿಧ ಘಟಕಗಳ ಕಾರ್ಯಕರ್ತರ ಸಭೆ ನಡೆಯಲಿದೆ. ಪಕ್ಷ ಸಂಘಟನೆ ಮತ್ತು ಚುನಾವಣೆ ಸಿದ್ಧತೆ ಕುರಿತು ಕಾರ್ಯಕರ್ತರೊಂದಿಗೆ ಚರ್ಚಿಸಲಿದ್ದಾರೆ ಎಂದರು. ಕೆಪಿಸಿಸಿ ಅಧ್ಯಕ್ಷರಾಗಿ ಮೊದಲ ಬಾರಿಗೆ ಆಗಮಿಸುತ್ತಿರುವ ಅವರು ನಮ್ಮ ಭಾಗದಲ್ಲಿ ನೇಕಾರರ ಸಮಸ್ಯೆ ಕುರಿತು ವಿಶೇಷ ಚರ್ಚೆ ನಡೆಸಲಿದ್ದು, ಅವರೊಂದಿಗೆ ಮುಕ್ತ ಸಮಾಲೋಚನೆ, ತಾಂಡಾ ಜನರ ಸಮಸ್ಯೆ ಸಹಿತ ಬೆಲೆ ಏರಿಕೆ ಮತ್ತು ಕೇಂದ್ರ-ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ಜಿಲ್ಲೆಯಲ್ಲಿ ಪ್ರವಾಸ ನಡೆಸಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಆಗಮನ ಹಿನ್ನಲೆಯಲ್ಲಿ ಯಾವುದೇ ಸಂಭ್ರಮಾಚರಣೆ ಸ್ವಾಗತಕ್ಕೆ ನಿರ್ಬಂಧ ಹೇರಲಾಗಿದ್ದು, ಸನ್ಮಾನ ಕೂಡ ನಿಷೇ ಧಿಸಲಾಗಿದೆ ಎಂದರು.

ಈ ವೇಳೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಜಿಲ್ಲಾ ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ನಿಖೀಲ ಪಾಟೀಲ, ಜವಳಿ ನಿಗಮದ ಮಾಜಿ ಉಪಾಧ್ಯಕ್ಷ ನಜೀರ್‌ ಕಂಗನೊಳ್ಳಿ, ಶ್ಯಾಮರಾವ್‌ ಘಾಟಗೆ, ನಗರಸಭೆ ಅಧ್ಯಕ್ಷ ಸಿದ್ದು ಮೀಸಿ, ಸದಸ್ಯರಾದ ಪರಮಾನಂದ ಗವರೋಜಿ, ಈಶ್ವರ ವಾಳೆನ್ನವರ, ನ್ಯಾಯವಾದಿಗಳಾದ ರವಿ ಯಡಹಳ್ಳಿ, ಎಸ್‌. ಎಂ. ಜಕ್ಕನ್ನವರ, ಶಿವಾನಂದ ಹೂಗಾರ, ರಾಜು ಕಡಕೋಳ, ಬಸು ಹರಕಂಗಿ, ಕುಮಾರ ಆಲಗೂರ, ಮೀರಾ ಒಂಟಮೋರಿ, ಮಲ್ಲು ದಾನಗೊಂಡ, ಸದಾಶಿವ ನ್ಯಾಮಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next