ಒಂದಾನೊಂದು ಕಾಲದಲ್ಲಿ ಒಬ್ಬ ಸಂತನಿದ್ದ. ಆತ ಎಷ್ಟು ಸದ್ಗುಣಿ ಎಂದರೆ, ದೇವರಂತಹ ಮನುಷ್ಯ ಎಂದರೆ ಹೇಗಿರುತ್ತಾನೆ ಎಂಬು ದನ್ನು ನೋಡಲು ಗಂಧರ್ವರೇ ಧರೆಗಿಳಿದು ಬಂದರು. ಸಂತ ತುಂಬ ಸರಳ ಜೀವಿ. ತಾರೆ ಗಳು ಬೆಳಕನ್ನು ಬೀರುವಂತೆ, ಹೂವುಗಳು ಕಂಪನ್ನು ಪಸರಿಸುವಂತೆ ತಾನೂ ಸದ್ಗುಣ ಗಳನ್ನು ಬೀರುತ್ತ ಆತ ಬದುಕಿದ್ದ. ಅವನ ದೈನಿಕ ಜೀವನವನ್ನು ಎರಡೇ ಎರಡು ಪದ ಗಳಲ್ಲಿ ವಿವರಿಸಬಹುದಿತ್ತು, “ಕೊಟ್ಟ, ಮರೆತ’. ಆದರೆ ಇದನ್ನು ಆತ ಹೇಳುತ್ತಲೂ ಇರಲಿಲ್ಲ. ಅವನ ಹಸನ್ಮುಖ, ಕಾರುಣ್ಯ, ಸಹನೆ, ಔದಾರ್ಯ ಗಳ ಮೂಲಕ ಅವು ವ್ಯಕ್ತಗೊಳ್ಳುತ್ತಿದ್ದವು.
ಗಂಧರ್ವರು ದೇವರಿಗೆ ವರದಿ ಒಪ್ಪಿಸಿ ದರು, “ದೇವರೇ ಈ ಸಂತ ಬಯಸಿದ್ದು ಈಡೇರುವಂತಹ ವರವನ್ನು ಅನುಗ್ರಹಿಸು’.
ದೇವರು ಸರಿ ಎಂದರು, ಸಂತನಿಗೇನು ಬೇಕು ಎಂದು ಕೇಳಿಕೊಂಡು ಬರುವಂತೆ ತಿಳಿಸಿದರು. ಗಂಧರ್ವರು ಸಂತನ ಬಳಿಗೆ ಮರಳಿ, “ನಿನ್ನ ಸ್ಪರ್ಶದಿಂದ ರೋಗ ಗುಣವಾಗುವಂತಹ ವರ ಬೇಕೇ’ ಎಂದು ಕೇಳಿದರು. ಸಂತ, “ಬೇಡ, ಅದು ದೇವರ ಕೆಲಸ’ ಎಂದ. “ಕೆಟ್ಟವರನ್ನು ಒಳ್ಳೆಯ ದಾರಿಗೆ ತರುವ ವರ ಆದೀತೆ’ ಎಂದು ಪ್ರಶ್ನಿಸಿದರು. ಆತ, “ಅದು ಗಂಧರ್ವರ ಕೆಲಸ, ನನ್ನದಲ್ಲ’ ಎಂದ. “ನಿನ್ನ ಸದ್ಗುಣಗಳಿಂದ ಎಲ್ಲರೂ ನಿನ್ನ ಬಳಿಗೆ ಆಕರ್ಷಿತರಾಗುವಂತಹ ವರ ಬೇಕೇ’ ಎಂದು ಗಂಧರ್ವರು ಕೇಳಿದರು. ಸಂತ, “ಹಾಗೆ ಆದರೆ ಎಲ್ಲರೂ ದೇವರನ್ನು ಮರೆತು ನನ್ನ ಹಿಂದೆ ಬಿದ್ದಾರು, ಅದಾಗದು’ ಎಂದ. “ನೀವು ಏನನ್ನೂ ಕೇಳದೆ ಇದ್ದರೆ ನಾವೇ ಯಾವುದಾದರೊಂದು ವರವನ್ನು ಒತ್ತಾಯ ಪೂರ್ವಕ ಕೊಡಬೇಕಾದೀತು’ ಎಂದರು ಗಂಧರ್ವರು. ಸಂತ, “ಅದು ಆಗಬಹುದು. ಆದರೆ ಅದು ನನ್ನ ಅರಿವಿಗೆ ಬರಬಾರದು’ ಎಂದು ಒಪ್ಪಿಕೊಂಡ.
ಗಂಧರ್ವರಿಗೆ ಸಂತೃಪ್ತಿಯಾಯಿತು. ಅವರು ಸಂತನ ಎರಡೂ ಪಾರ್ಶ್ವಗಳು ಮತ್ತು ಬೆನ್ನ ಹಿಂದೆ ಬೀಳುವ ಅವನ ನೆರಳಿಗೆ ರೋಗ, ಸಂಕಟ, ದುಃಖ ಶಮನಕಾರಿ ಶಕ್ತಿಯನ್ನು ಅನುಗ್ರಹಿಸಿದರು.
ಆ ಬಳಿಕ ಸಂತ ಹೋದ ಹಾದಿಯುದ್ದಕ್ಕೂ ಹಸುರು ಬೆಳೆಯಿತು. ಅದರಲ್ಲಿ ನಡೆದಾಡಿದ ವರ ದುಃಖಗಳು ಇಲ್ಲವಾದವು, ರೋಗ ಗಳು ಗುಣವಾದವು. ಸಂಕಟಗಳು ಶಮನ ಗೊಂಡವು. ಸಂತ ಇದ್ಯಾವುದರ ಅರಿವೂ ಇಲ್ಲದೆ ಸದ್ಗುಣಗಳ ಕಂಪನ್ನು ಸೂಸುತ್ತ ಬದುಕಿದ್ದ. ಅವನ ಗುಣಶ್ರೇಷ್ಠತೆಯನ್ನು ಮೆಚ್ಚುತ್ತ, ಗೌರವಿಸುತ್ತ ಜನರು ಮೌನವಾಗಿ ಅವನನ್ನು ಹಿಂಬಾಲಿಸುತ್ತಿದ್ದರು. ಕೊನೆ ಕೊನೆಗೆ ಅವನ ನೈಜ ಹೆಸರು ಕೂಡ ಎಲ್ಲರಿಗೂ ಮರೆತು ಹೋಯಿತು. ಅವನು “ದೇವರ ನೆರಳು’ ಎಂದೇ ಪ್ರಸಿದ್ಧನಾದ.
ಇದೊಂದು ಕಥೆ ನಿಜ. ಆದರೆ “ದೇವರ ನೆರಳು’ ಎನ್ನುವುದು ಮನುಷ್ಯನು ಮುಟ್ಟಬಹುದಾದ ಅತ್ಯುನ್ನತ ಸ್ಥಿತಿ. ನಮ್ಮೊಳಗೆ ಸಂಭವಿಸ ಬಹುದಾದ ಅತ್ಯುನ್ನತ ಪರಿ ವರ್ತನೆ ಇದು – ಮನುಷ್ಯ ಎಂಬ ಕೇಂದ್ರದ ಪಲ್ಲಟ. ಇಂತಹ ಸ್ಥಿತಿಯಲ್ಲಿ ನಮಗೆ ನಮ್ಮದೇ ಆದ ಕೇಂದ್ರ ಎಂಬುದು ಇರುವುದಿಲ್ಲ; ದೇವರೇ ಕೇಂದ್ರವಾಗಿರುತ್ತಾನೆ, ನಾವು ಅವನ ನೆರಳಾಗಿ ರುತ್ತೇವೆ. ನಾವು ಶಕ್ತಿಶಾಲಿಗಳಾಗಿರುವುದಿಲ್ಲ, ಯಾಕೆಂದರೆ ಶಕ್ತಿಯ ಕೇಂದ್ರ ನಮ್ಮಲ್ಲಿರು ವುದಿಲ್ಲ. ನಾವು ಸದ್ಗುಣಿ ಗಳೂ ಆಗಿರುವುದಿಲ್ಲ, ಗುಣಗಳ ಕೇಂದ್ರ ನಮ್ಮಲ್ಲಿರುವುದಿಲ್ಲ. ನಾವು ಧರ್ಮವಂತರೂ ಆಗಿರುವುದಿಲ್ಲ, ಏಕೆಂದರೆ ಧರ್ಮದ ಕೇಂದ್ರ ನಮ್ಮೊಳಗಿರುವುದಿಲ್ಲ. ನಾವು ಏನೂ ಅಲ್ಲ ಎಂಬ ಅತ್ಯುನ್ನತ ಶೂನ್ಯ, ಯಾವ ಅಡೆತಡೆ, ಚೌಕಟ್ಟುಗಳೂ ಇಲ್ಲದ ಶೂನ್ಯವು ನಮ್ಮ ಮೂಲಕ ದೈವಿಕತೆಯನ್ನು ಹರಿಯಿಸುತ್ತದೆ. ಆ ದೈವಿಕತೆಯ ಹರಿಯು ವಿಕೆಯು ನಮ್ಮೊಳಗೆ ನಿಲ್ಲುವುದೂ ಇಲ್ಲ, ಏಕೆಂದರೆ ಅಲ್ಲಿ ನಿಲ್ಲುವಂತಹ ಕೇಂದ್ರವಿಲ್ಲ. ಅದು ನಮ್ಮ ಮೂಲಕ ಹರಿಯುತ್ತಿರುತ್ತದೆ.
“ನಾನು’ ಎಂಬುದು ಇಲ್ಲವಾಗಿ ನಾವು ದೇವರವರು ಆಗುವುದು ಹೀಗೆ. ಆಗ ನಾವೂ “ದೇವರ ನೆರಳು’ಗಳಾಗುತ್ತೇವೆ.
(ಸಾರ ಸಂಗ್ರಹ)