ಬೆಂಗಳೂರು: ಸುದ್ದಿವಾಹಿನಿಯೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ವೇಳೆ ತಿರುಪತಿ ವೆಂಕಟೇಶ್ವರ ಸ್ವಾಮಿ ಹಣೆಯ ಮೇಲಿರುವ ನಾಮದ ಗುರುತನ್ನು ಅವಹೇಳನಾಕಾರಿಯಾಗಿ ಟೀಕಿಸಿದ್ದ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಬಂಧನ ವಿಳಂಬ ಸಂಬಂಧ ಹೈಕೋರ್ಟ್ ತರಾಟೆ ಬಳಿಕ ಎಚ್ಚೆತ್ತ ಪೊಲೀಸರು ಆರೋಪಿಯನ್ನು ಬಂಧಿಸಿದ ಘಟನೆ ಮಂಗಳವಾರ ಜರುಗಿತು.
ದೇವರನಾಮದ ಬಗ್ಗೆ ಅವಹೇಳನಕಾರಿ ಪದ ಬಳಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ನರಸಿಂಹಮೂರ್ತಿ ವಿರುದ್ಧ ದೂರು ನೀಡಿ ಮೂರು ತಿಂಗಳಾದರೂ ಯಶವಂತಪುರ ಠಾಣೆ ಪೊಲೀಸರು ಬಂಧಿಸಿಲ್ಲ ಎಂದು ಆಕ್ಷೇಪಿಸಿ ಬಿ.ಎಂ ಸುರೇಶ್ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿ ವಿಚಾರಣೆಯನ್ನು ಮಂಗಳವಾರ ಬೆಳಿಗ್ಗೆ ನಡೆಸಿದ ನ್ಯಾ. ಅರವಿಂದಕುಮಾರ್ ಅವರಿದ್ದ ಏಕಸದಸ್ಯಪೀಠ, ಪೊಲೀಸರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ನಮ್ಮದು ಜಾತ್ಯಾತೀತ ರಾಷ್ಟ್ರವಾಗಿದೆ. ಯಾವುದೇ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಬಾರದು. ಯಾವುದೇ ಧರ್ಮದ ವ್ಯಕ್ತಿಯಾಗಿದ್ದರೂ ಕಾನೂನು ಕ್ರಮಜರುಗಿಸಬೇಕಲ್ಲವೇ ಎಂದು ತರಾಟೆ ತೆಗೆದುಕೊಂಡಿತು.
ಅರ್ಜಿದಾರರು ದೂರು ನೀಡಿ ಮೂರು ತಿಂಗಳು ಕಳೆದರೂ ಇದುವರೆಗೂ ಯಾಕೆ ಆರೋಪಿಯನ್ನು ಬಂಧಿಸಿಲ್ಲ, ಇತರೆ ಪ್ರಕರಣಗಳಲ್ಲಿಯೂ ಹೀಗೆ ಮಾಡುತ್ತೀರಾ ಎಂದು ಪ್ರಶ್ನಿಸಿದ ನ್ಯಾಯಪೀಠ, ಆರೋಪಿಯನ್ನು ತತ್‌ಕ್ಷಣ ಬಂಧಿಸಿ ಮೆಮೊ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.
ಬಳಿಕ ಸಂಜೆ ನಾಲ್ಕು ಗಂಟೆ ಸುಮಾರಿಗೆ ನ್ಯಾಯಪೀಠದ ಮುಂದೆ ಹಾಜರಾದ ಯಶವಂತಪುರ ಠಾಣೆ ಪೊಲೀಸರು, ಆರೋಪಿ ನರಸಿಂಹಮೂರ್ತಿಯನ್ನು ಬಂಧಿಸಿರುವುದಾಗಿ ಮೆಮೊ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.
“ಸೆಕ್ಸ್ ಸಿಂಬಲ್’ ಆರೋಪದ ವಿರುದ್ಧ ಎಫ್ಐಆರ್: ಏಪ್ರಿಲ್ 27ರಂದು ಖಾಸಗಿ ಸುದ್ದಿವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನರಸಿಂಹಮೂರ್ತಿ, ತಿರುಪತಿ ವೆಂಕಟೇಶ್ವರ ದೇವರನಾಮ “ಸೆಕ್ಸ್ ಸಿಂಬಲ್’ ಕಾಣುತ್ತದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿ.ಎಂ ಸುರೇಶ್ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ನರಸಿಂಹಮೂರ್ತಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಬಂಧಿಸಿರಲಿಲ್ಲ. ಈ ಕ್ರಮ ಪ್ರಶ್ನಿಸಿ ಅವರು ಕೋರ್ಟ್ ಮೊರೆಹೋಗಿದ್ದರು.