ಯುಎಇ: ಮೆಗಾಸ್ಟಾರ್ ಚಿರಂಜೀವಿ ಅವರ ʼಗಾಡ್ ಫಾದರ್ʼ ಚಿತ್ರ ಅ.5 ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಭರ್ಜರಿ ಪ್ರಚಾರದಲ್ಲಿ ನಿರತರಾದ ಚಿತ್ರ ತಂಡ ಈಗ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಮಲಯಾಳಂನ ʼಲೂಸಿಫರ್ʼ ಸಿನಿಮಾದ ರಿಮೇಕ್ ಚಿತ್ರದಲ್ಲಿ ಚಿರಂಜೀವಿ ಹಾಗೂ ಸಲ್ಮಾನ್ ಖಾನ್ , ನಯನತಾರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದ ಯಾವುದೇ ಸಿನಿಮಾ ವಿದೇಶದಲ್ಲಿ ಬಿಡುಗಡೆ ಆಗಬೇಕಾದರೆ ಅಲ್ಲಿ ಪ್ರತ್ಯೇಕವಾಗಿ ಸೆನ್ಸಾರ್ ಆಗಬೇಕು. ವಿದೇಶದ ಸೆನ್ಸಾರ್ ಬೋರ್ಡ್ ನಲ್ಲಿ ಸದಸ್ಯರಾಗಿರುವ ಉಮೈರ್ ಸಂಧು, ಭಾರತದ ಸಿನಿಮಾಗಳನ್ನು ನೋಡಿ ಟ್ವಿಟರ್ ನಲ್ಲಿ ತಮ್ಮ ವಿಮರ್ಶೆಯನ್ನು ಬರೆಯುತ್ತಾರೆ.
ಕನ್ನಡದ ಕೆಜಿಎಫ್, ವಿಕ್ರಾಂತ್ ರೋಣ ಸಿನಿಮಾವನ್ನು ನೋಡಿ ತಮ್ಮ ಅಭಿಪ್ರಾಯವನ್ನು ಬರೆದಿದ್ದರು. ಈಗ ಉಮೈರ್ ಸಂಧು ಮೆಗಾಸ್ಟಾರ್ ಅವರ ʼಗಾಡ್ ಫಾದರ್ʼ ಸಿನಿಮಾವನ್ನು ನೋಡಿ, ಮಾಡಿರುವ ವಿಮರ್ಶೆ ಚಿರಂಜೀವಿ ಅಭಿಮಾನಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ.
ಟ್ವಿಟರ್ ನಲ್ಲಿ ಉಮೈರ್, ಇದು ಸೆನ್ಸಾರ್ ಬೋರ್ಡ್ ನಿಂದ ʼಗಾಡ್ ಫಾದರ್ʼ ಚಿತ್ರದ ಮೊದಲ ವಿಮರ್ಶೆ. ಇದೊಂದು ಸಾಧಾರಣವಾದ ಸಿನಿಮಾ. ಇದು ಹೊಸ ಬಾಟಲಿನಲ್ಲಿರುವ ಓಲ್ಡ್ ವೈನ್ ನಂತೆ ಇದೆ. ಚಿರಂಜೀವಿ ಅವರು ದಯವಿಟ್ಟು ವಿಶ್ರಾಂತಿ ಪಡೆದುಕೊಳ್ಳಿ. ಚಿರಂಜೀವಿ ಅವರಿಗೆ ಒಳ್ಳೆಯ ಸ್ಕ್ರಿಪ್ಟ್ ಬೇಕು. ಅವರು ಇಂಥ ಕಳಪೆ ಸ್ಕ್ರಿಪ್ಟ್ ಆಯ್ದುಕೊಂಡು ತಮ್ಮ ಪ್ರತಿಭೆಯನ್ನು ವೇಸ್ಟ್ ಮಾಡುತ್ತಿದ್ದಾರೆ ಎಂದು ಹೇಳಿ, 2.5/5 ರೇಟಿಂಗ್ ಕೊಟ್ಟಿದ್ದಾರೆ.
ಈ ವಿಮರ್ಶೆಗೆ ಚಿರಂಜೀವಿ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಟ್ವಟರ್ ಬಳಕೆದಾರರೊಬ್ಬರು, ಉಮೈರ್ ನಿಮ್ಮ ವಿಮರ್ಶೆಯನ್ನು ಗೌರವಿಸುತ್ತೇನೆ. ಆದರೆ ನಿಮಗೆ ಚಿರಂಜೀವಿ ಅವರು ಸಿನಿಮಾದಿಂದ ವಿಶ್ರಾಂತಿ ಪಡೆದುಕೊಳ್ಳಿ, ಸಿನಿಮಾ ಮಾಡಬೇಡಿ ಎಂದು ಹೇಳುವ ಹಕ್ಕಿಲ್ಲ ಎಂದಿದ್ದಾರೆ. ಮತ್ತೊಬ್ಬರು ಉಮೈರ್ ಅವರಿಗೆ ಸಿನಿಮಾ ವಿಮರ್ಶೆ ಮಾಡಲು ಬರಲ್ಲ, ಅವರು ದಯವಿಟ್ಟು ವಿಶ್ರಾಂತಿ ಪಡೆದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.