Advertisement
ಅದು ಅವರ ದೇಸಿ ತಳಿಸಂರಕ್ಷಣೆಯ 50 ವರ್ಷಗಳ ತಪಸ್ಸಿಗೆ ಸಂದ ಗೌರವ. ಪಿಯುಸಿ ಶಿಕ್ಷಣ ಮುಗಿಸಿದ ದೇವರಾಯರು ಆ ಕಾಲದಲ್ಲಿ ಸುಲಭವಾಗಿ ಯಾವುದಾದರೂ ಉದ್ಯೋಗಕ್ಕೆ ಸೇರಿಕೊಳ್ಳ ಬಹುದಾಗಿತ್ತು. ಆದರೆ, ಯಾರದೋ ಕೈಕೆಳಗೆ ಕೆಲಸ ಮಾಡುವುದು ಅವರ ಜಾಯಮಾನಕ್ಕೆ ಒಗ್ಗಲಿಲ್ಲ. ಅಪ್ಪಟ ಸ್ವಾಭಿಮಾನಿ ದೇವರಾಯರನ್ನು ಕೈಬೀಸಿ ಕರೆದದ್ದು ಅವರ ತಂದೆಯವರ 20 ಎಕರೆ ಜಮೀನು. ಅಲ್ಲಿ ಭತ್ತ ಬೆಳೆಯಲು ಶುರು ಮಾಡಿದಾಗ ದೇವರಾಯರಿಗೆ 20 ವರ್ಷ ವಯಸ್ಸಿನ ಏರು ಜವ್ವನ. ಕಳೆದ ಐವತ್ತು ವರುಷಗಳ ಉದ್ದಕ್ಕೂ ಒಂದು ತಪಸ್ಸಿನಂತೆ ಆ ಕಾಯಕ ಮುಂದುವರಿಸಿಕೊಂಡು ಬಂದದ್ದೇ ಅವರ ಸಾಧನೆ.
Related Articles
Advertisement
ಸರಳ ಬದುಕು ಎಂದರೇನೆಂದು ದೇವರಾಯರನ್ನು ನೋಡಿ ಕಲಿಯಬೇಕು. ಅವರು ಬರಿಗಾಲಿನಲ್ಲೇ ನಡೆಯುವವರು; ಚಪ್ಪಲಿ ಹಾಕಿಕೊಳ್ಳೋದೇ ಇಲ್ಲ. ನಡೆಯುವಾಗ ನಮ್ಮ ಪಾದಗಳು ಮಣ್ಣಿಗೆ ತಾಗುತ್ತಿರುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಅವರ ನಂಬಿಕೆ. ಪಂಚೆ ಮತ್ತು ಷರಟು (ಅಥವಾ ಹೆಗಲಿಗೆ ಶಲ್ಯ) ಅವರ ಸರಳ ಉಡುಪು. “ನನ್ನ ಅಕ್ಕಿ ನಾನೇ ಬೆಳೀತೇನೆ. ನನ್ನ ತರಕಾರಿ ನಾನೇ ಬೆಳೀತೇನೆ. ಸೌತೆ, ಬೆಂಡೆ, ಬದನೆ, ಬಸಳೆ, ಕುಂಬಳಕಾಯಿ ಎಲ್ಲವೂ ನಮ್ಮ ತೋಟದಲ್ಲಿ ಉಂಟು. ಮಧ್ಯಾಹ್ನ ನನ್ನದು ಗಂಜಿಯೂಟ. ಊಟಕ್ಕೆ ಏನಾದರೂ ತರಕಾರಿ ಇದ್ದರಾಯಿತು. ಚೆನ್ನಾಗಿ ಬದುಕಲಿಕ್ಕೆ ಇನ್ನೇನು ಬೇಕು?’ ಎಂಬ ಅವರ ನೇರ ಪ್ರಶ್ನೆಗೆ ಉತ್ತರ ಕೊಡುವುದು ಸುಲಭವಲ್ಲ.
ಬೆಳಗ್ಗೆ ಐದು ಗಂಟೆಗೆ ಏಳುವುದು ದೇವರಾಯರ ಅಭ್ಯಾಸ. ಆ ಮುಂಜಾವಿನಲ್ಲಿ ಅರ್ಧ ತಾಸು ಯೋಗಾಸನ ಅವರ ದಿನನಿತ್ಯದ ಸಾಧನೆ. ಅದರಿಂದಾಗಿಯೇ ಅವರ ನಡಿಗೆಯ ವೇಗ ಹಾಗೂ ಕೆಲಸದ ಚುರುಕು ಸರಿಗಟ್ಟಲು ಯುವಕರಿಗೂ ಕಷ್ಟ. ಯೋಗಾಸನದ ನಂತರ ದೇವರ ಪೂಜೆ. ಅಲ್ಲಿಯವರೆಗೆ ಒಂದು ತೊಟ್ಟು ನೀರನ್ನೂ ಅವರು ಕುಡಿಯೋದಿಲ್ಲ. ಅನಂತರ ಜಮೀನಿನತ್ತ ನಡೆಯುವ ದೇವರಾಯರದು ದಿನವಿಡೀ ಬಿಡುವಿಲ್ಲದ ಕೃಷಿಕಾಯಕ. “ಹಾಗಾಗಿಯೇ ನನಗೆ ರಾತ್ರಿ ಮಲಗಿದ ಕೂಡಲೇ ನಿದ್ದೆ ಬರುತ್ತದೆ’ ಎನ್ನುವಾಗ ಅವರ ಮುಖದಲ್ಲಿ ಸಂತೃಪ್ತ ನಗು.
ಯಾರಾದರೂ ಬಂದು ಯಾವುದೋ ಭತ್ತದ ತಳಿಯ ಬೀಜ ಕೇಳಿದರೆ, ಒಂದು ಮುಷ್ಟಿ ಬೀಜ ಕೊಡುವ ದೇವರಾಯರು, ಅದಕ್ಕೆ ಹಣ ಪಡೆಯೋದಿಲ್ಲ. ಬದಲಾಗಿ ಇದನ್ನು ಬಿತ್ತಿ ಬೆಳೆದು ಎರಡು ಮುಷ್ಠಿ ಬೀಜ ತಂದು ಕೊಡಿ ಎಂದು ಷರತ್ತು ಹಾಕುತ್ತಾರೆ. ದೇವರಾಯರ ಭತ್ತದ ತಳಿರಕ್ಷಣೆಯ ಮಹಾನ್ ಕಾಯಕದಲ್ಲಿ ಬೆಂಬಲಕ್ಕೆ ನಿಂತವರು ಅವರ ಪತ್ನಿ ಶಾರದಾ, ಮಗಳು ಮತ್ತು ಮಗ ಪರಮೇಶ್ವರ ರಾವ್. ಇಂಜಿನಿಯರಿಂಗ್ ಕಲಿತಿರುವ ಪರಮೇಶ್ವರ ರಾನ್, ತಮ್ಮ ಉದ್ಯೋಗ ತೊರೆದು ಬಂದು ನೆಲೆಸಿದ್ದು ಹಳ್ಳಿಯಲ್ಲಿ. ತಂದೆಯವರ ಎಲ್ಲ ಕೆಲಸಗಳಿಗೂ ಇವರ ಒತ್ತಾಸೆ.
ತಮ್ಮ ಜಮೀನಿನ ಎಲ್ಲ ಮರಗಳನ್ನೂ ಹಾಗೆಯೇ ಉಳಿಸಿಕೊಂಡಿದ್ದಾರೆ ದೇವರಾಯರು. ನನ್ನಲ್ಲಿ 22 ಜಾತಿಯ ಮಾವಿನ ಮರಗಳುಂಟು. ಬೇಸಗೆಯಲ್ಲಿ ನಮಗೆ ಬೇಕಾದಷ್ಟು ಮಾವಿನ ಹಣ್ಣು. ಹಳೆಯ ಹಲಸಿನ ಮರಗಳಿಂದ ನೂರಾರು ಹಲಸಿನ ಹಣ್ಣುಸಿಗುತ್ತದೆ. ಇದಕ್ಕಿಂತ ದೊಡ ಸಂಭ್ರಮ ಏನುಂಟು? ಎಂಬ ದೇವರಾಯರ ಪ್ರಶ್ನೆಗೆ ಉತ್ತರವಿದೆಯೇ? ಮುಂದಿನ ತಲೆಮಾರುಗಳಿಗಾಗಿ ಭತ್ತದ ತಳಿಗಳ ಸಂರಕ್ಷಣೆ ದೇವರಾಯರ ಬದುಕಿನ ತಪಸ್ಸು. ಇದು ಯಾವುದೇ ವಿಶ್ವವಿದ್ಯಾಲಯ ಮಾಡಲಾಗದ ಮಹತ್‌ಕಾರ್ಯ. ಎಲ್ಲ ಆಮಿಷಗಳನ್ನು ಮೀರಿ ನಿಂತು, ಭತ್ತದ ಕೃಷಿಯಲ್ಲೇ ಖುಷಿ ಕಂಡುಕೊಂಡ ಸಂತ ದೇವರಾಯರು. ಮಿತ್ತಬಾಗಿಲಿನ ಅವರ ಕರ್ಮಭೂಮಿಯಲ್ಲಿ ಅವರೊಂದಿಗೆ ಹೆಜ್ಜೆ ಹಾಕುವಾಗ, ನಮಗೆ ಹೆಜ್ಜೆಹೆಜ್ಜೆಗೂ ಅನ್ನದಾತರೊಬ್ಬರ ಬದುಕಿನ ದರ್ಶನ. ಆ ಉದಾತ್ತ ಬದುಕಿಗೆ, ಮಹಾನ್ ತಪಸ್ಸಿಗೆ ನಮೋ.
* ಅಡ್ಡೂರು ಕೃಷ್ಣರಾವ್