ಬೆಂಗಳೂರು: ಮನೆ ಎದುರು ಹಾಗೂ ರಸ್ತೆ ಬದಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಎಂಜಿನ್ ಮತ್ತು ಚಾರ್ಸಿ ಸಂಖ್ಯೆಯನ್ನು ಟ್ಯಾಂಪರಿಂಗ್ ಮಾಡಿ ಓಎಲ್‌ಎಕ್ಸ್ ಹಾಗೂ ನೇರವಾಗಿ ಮಾರಾಟ ಮಾಡುತ್ತಿದ್ದ ಇಬ್ಬರು ಎಂಜಿನಿಯರ್‌ಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಬಸಪಟ್ಟಣದ ನಿವಾಸಿ ರಾಘವೇಂದ್ರ(25) ಹಾಗೂ ಗಂಗಾವತಿಯ ಸಾಯಿತೇಜ (25) ಬಂಧಿತರು.
ಆರೋಪಿಗಳಿಂದ 26 ಲಕ್ಷ ರೂ. ಮೌಲ್ಯದ 25 ದ್ವಿಚಕ್ರ ವಾಹನ, 6 ಮೊಬೈಲ್, 2 ಲ್ಯಾಪ್‌ಟಾಪ್ ಹಾಗೂ 1 ಕಲರ್ ಪ್ರಿಂಟರ್ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಆರೋಪಿಗಳ ಬಂಧನದಿಂದ ವಿದ್ಯಾರಣ್ಯಪುರ, ಯಲಹಂಕಉಪನಗರ, ಕೊಡಿಗೆಹಳ್ಳಿ , ಕೊತ್ತನೂರು, ಹೆಣ್ಣೂರು, ಕೆ.ಆರ್.ಪುರ ಠಾಣೆಗಳಲ್ಲಿ ದಾಖಲಾಗಿದ್ದ 12 ದ್ವಿಚಕ್ರ ಪ್ರಕರಣಗಳು ಪತ್ತೆಯಾಗಿವೆ ಎಂದರು.
ಆರೋಪಿಗಳು 2 ವರ್ಷಗಳ ಕಾಲ ಎಂಜಿನಿಯರಿಂಗ್ ಓದಿದ್ದು, ಅರ್ಧಕ್ಕೆ ವ್ಯಾಸಂಗ ಬಿಟ್ಟು ಐಷಾರಾಮಿ ಜೀವನಕ್ಕಾಗಿ ಕಳ್ಳತನ ಎಸಗುತ್ತಿದ್ದರು. ನಗರದ ಹುಣಸಮಾರನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನಗರದಲ್ಲಿ ರಾತ್ರಿ ವೇಳೆ ನಿಲುಗಡೆ ಮಾಡಿದ್ದ ದುಬಾರಿ ಬೆಲೆಯ ದ್ವಿಚಕ್ರ ವಾಹನಗಳನ್ನೇ ಕಳ್ಳತನ ಮಾಡುತ್ತಿದ್ದರು. ಹುಣಸಮಾರನಹಳ್ಳಿಯ ಬಾಡಿಗೆ ಮನೆಯಲ್ಲಿ ಕಲರ್ ಪ್ರಿಂಟರ್ ಇಟ್ಟುಕೊಂಡು ನೋಂದಣಿ ಪ್ರಮಾಣ ಪತ್ರ, ವಿಮೆ ಸೇರಿ ಅಗತ್ಯ ದಾಖಲೆಗಳನ್ನು ಅನುಮಾನ ಬಾರದಂತೆ ಸೃಷ್ಟಿಸುತ್ತಿದ್ದರು. ಆರ್‌ಟಿಒ ಸ್ಮಾರ್ಟ್ ಕಾರ್ಡ್‌ಗಳಂತೆ ನಕಲಿ ದಾಖಲೆಗಳು ಸೃಷ್ಟಿಸುತ್ತಿದ್ದರು. ಅಲ್ಲದೇ ಕಳ್ಳತನ ಮಾಡಿದ್ದ ದ್ವಿಚಕ್ರ ವಾಹನಗಳ ಬಿಡಿಭಾಗಗಳನ್ನು ಬಿಚ್ಚಿ ಬೇರೊಂದು ವಾಹನಕ್ಕೆ ಜೋಡಣೆ ಮಾಡುತ್ತಿದ್ದರು ಎಂದರು.