ಚೆನ್ನೈ: ದೇಗುಲದ ಹೆಸರಿನಲ್ಲಿ ಇರುವ ಜಮೀನನ್ನು ಮುಂದಿ ಟ್ಟು ಕೊಂಡು ಸಾರ್ವಜನಿಕರ ಬಳಕೆಗಾಗಿ ಇರುವ ಹೆದ್ದಾರಿಯ ನಿರ್ಮಾಣಕ್ಕೆ ಅಡ್ಡಿಪಡಿಸುವಂತೆ ಇಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ದೇವರು ಎಲ್ಲೆಡೆಯೂ ಇದ್ದಾನೆ. ಹೀಗಾಗಿ, ಆತನ ಅಸ್ತಿತ್ವ ಸ್ಥಾಪಿಸುವ ನಿಟ್ಟಿನಲ್ಲಿ ನಿಗದಿತ ಸ್ಥಳದ ಅಗತ್ಯವೇ ಇಲ್ಲ. ಜನರನ್ನು ಅಂಧಾಭಿಮಾನದ ಹೆಸರಿನಲ್ಲಿ ವಿಭಜಿಸುವವರೇ ಸಮಸ್ಯೆಗೆ ಕಾರಣರು ಎಂದು ನ್ಯಾ.ಎಸ್.ವೈದ್ಯನಾಥನ್ ಮತ್ತು ನ್ಯಾ.ಡಿ.ಭರತ ಚಕ್ರವರ್ತಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ತಮಿಳುನಾಡಿನ ಪೆರಂಬಲೂರು ಜಿಲ್ಲೆಯ ವೆಪ್ಪನ್‌ತಟ್ಟಿಯಲ್ಲಿ ಹೆದ್ದಾರಿ ನಿರ್ಮಾಣಕ್ಕಾಗಿ ದೇಗುಲ ತೆರವುಗೊಳಿಸಬೇಕು ಎಂದು ರಾಜ್ಯ ಸರ್ಕಾರದ ಹೆದ್ದಾರಿ ಇಲಾಖೆ ನೀಡಿದ ನೋಟಿಸ್ ವಜಾ ಮಾಡಬೇಕು ಎಂಬ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ:ಜೀವಂತ ವ್ಯಕ್ತಿಯ ಹೆಸರಿನಲ್ಲಿ ನಕಲಿ ಮರಣ ಪ್ರಮಾಣ ಪತ್ರ ಪ್ರಕರಣ : ಎರಡನೇ ಆರೋಪಿಯ ಸೆರೆ
ಅರ್ಜಿದಾರರು ಮೂವತ್ತು ವರ್ಷಗಳ ಹಿಂದೆಯೇ ಸಂಚಾರಕ್ಕೆ ಮತ್ತು ಜನರಿಗೆ ತೊಂದರೆಯಾಗದ ರೀತಿಯಲ್ಲಿ ದೇಗುಲ ನಿರ್ಮಿಸಲಾಗಿದೆ ಎಂದು ವಾದಿಸಿದ್ದರು. ಆ ಅಂಶವನ್ನು ತಿರಸ್ಕರಿಸಿದ ನ್ಯಾಯಪೀಠ, ದೇಗುಲದ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ಅರ್ಜಿದಾರರು ವಿಫಲರಾಗಿದ್ದಾರೆ. ಒಂದು ವೇಳೆ, ಈ ಅರ್ಜಿ ಸ್ವೀಕಾರ ಮಾಡಿದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ಅದರಿಂದ ಜನರಿಗೆ ತೊಂದರೆಯಾಗದು ಎಂದು ಪ್ರತಿಪಾದಿಸುವ ಅಂಶಬರಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.