ಅಂದು ರಾತ್ರಿ ಸುಮಾರು 2 ಗಂಟೆ 15 ನಿಮಿಷ ಇರಬಹುದು. ನಾನು ಮೈಸೂರಿನ ಮೂವಿ ಮಲ್ಟಿಪ್ಲೆಕ್ಸ್ ಡಿಆರ್‌ಸಿ ಸಿನಿಮಾಸ್‌ನಲ್ಲಿ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರಣ, ನನ್ನ ಕೆಲಸದ ವೇಳೆ ಪ್ರತಿದಿನ ಸಂಜೆ 4 ರಿಂದ ಮಧ್ಯರಾತ್ರಿ 1 ಗಂಟೆಯವರೆಗೂ ಇರುತ್ತಿತ್ತು. ಆ ದಿನ ಕೆಲಸ ಮುಗಿಯುವುದು ಸ್ವಲ್ಪ ತಡವಾಯಿತು. ನಾನು ಮಲ್ಟಿಪ್ಲೆಕ್ಸ್‌ನಿಂದ ಹೊರಟಾಗ ಸಮಯ 2 ಗಂಟೆ ಆಗಿತ್ತು. ಕೆಲಸ ಮಾಡುವ ಆಫೀಸಿನಿಂದ ನಮ್ಮ ಮನೆ 8ಮೈಲಿ ದೂರವಿದೆ. ನನ್ನ ಬಳಿ ದ್ವಿಚಕ್ರ ವಾಹನವಿತ್ತು.
ಅಂದು ಕೆಲಸ ಮುಗಿಸಿ ಮನೆಗೆ ಹೋಗುವಾಗ, ಸರಿಯಾಗಿ ಬಂಕ್ ಮುಂದೆಯೇ ಬೈಕ್‌ನ ಪೆಟ್ರೋಲ್ ಖಾಲಿಯಾಗಿ ಬಿಡುವುದೇ? ತಿಂಗಳ ಕೊನೆ. ಜೇಬಿನಲ್ಲಿ ಹಣವಿಲ್ಲ…ಸರಿ, ಇನ್ನೇನು ಮಾಡೋದು? ಇನ್ನು 5ಮೈಲಿ ಬೈಕ್‌ನ ತಳ್ಳಿಕೊಂಡೇ ಮನೆ ಸೇರೋಣ ಅಂಥ ನಿರ್ಧರಿಸಿ, ಬೈಕ್ ಅನ್ನು 200 ಮೀಟರ್ ದೂರ ತಳ್ಳಿಕೊಂಡೇ ಹೋದೆ. ಪುಣ್ಯಾತ್ಮ ಎಲ್ಲಿದ್ದನೋ ಕಾಣೆ ಎಕ್ಸೆಲ್ ಗಾಡಿಯಲ್ಲಿ ಬಂದ ಒಬ್ಬ ವ್ಯಕ್ತಿ ಏನಾಯಿತು ಸಾರ್ ? ಎಂದರು. ನಾನು ವಿಷಯ ಹೇಳಿದೆ.
ಅದಕ್ಕೆ ಅವರು, “ಇಲ್ಲೇ ಹಿಂದೆ ಪೆಟ್ರೋಲ್ ಬಂಕ್ ಇದ್ಯಲ್ಲ ಸಾರ್, ಅಲ್ಲೇ ಪೆಟ್ರೋಲ್ ಹಾಕಿಸಿºಡಿ’ ಅಂದರು. ನಾನು ಸಂಕೋಚದಿಂದಲೇ -“ಪರ್ವಾಗಿಲ್ಲ ಸಾರ್, ನನ್ನ ಹತ್ತಿರ ಸಧ್ಯಕ್ಕೆ ಪೆಟ್ರೋಲ್ ಹಾಕಿಸೋಕೆ ದುಡ್ಡು ಇಲ್ಲ’ ಅಂದೆ. ಅದಕ್ಕೆ ಅವರು, “ಅಯ್ಯೋ ಮಧ್ಯರಾತ್ರಿ ಬೇರೆ. ತಗೊಳ್ಳಿ ಈ 50 ರೂನ. ಪೆಟ್ರೋಲ್ ಹಾಕಿಸಿಕೊಂಡು ಮನೆ ಸೇರಿಕೊಳ್ಳಿ’ ಅಂದರು.
ಅವರ ಆ ಮಾತು ಕೇಳಿ ನನ್ನ ಕಣ್ಣಾಲಿ ತುಂಬಿ ಬಂತು. ಮರು ಮಾತನಾಡದೆ ಆ ದೇವರೇ ನನ್ನ ಸಹಾಯಕ್ಕೆ ಬಂದಿರಬೇಕೆಂದು ಭಾವಿಸಿ, “ಸಾರ್, ನಿಮ್ಮ ನಂಬರ್ ಕೊಡಿ. ಈ ದುಡ್ಡನ್ನು ನಿಮಗೆ ನಾಳೆಯೇ ಹಿಂದಿರುಗಿಸುತ್ತೀನಿ’ ಅಂದೆ. ಅದಕ್ಕೆ ಅವರು ಮನುಷ್ಯ ಮನುಷ್ಯನಿಗಲ್ಲದೆ ಮತ್ತಿನ್ಯಾರಿಗೆ ಸಹಾಯ ಮಾಡಲು ಸಾಧ್ಯ ಹೇಳಿ..! ಪರವಾಗಿಲ್ಲ, ನೀವು ಹಿಂದಿರುಗಿಸುವ ಅವಶ್ಯಕತೆ ಏನಿಲ್ಲ’ ಎಂದು ಹೇಳಿದರು.
ನಾನು ಪೆಟ್ರೋಲ್ ಹಾಕಿಸಲು ಬಂಕ್ ನ ಬಳಿ ಬಂದೆ. ನಂತರ ನೆನಪಾಯಿತು; ನಾನು ಅವರ ಹೆಸರನ್ನೇ ಕೇಳುವುದನ್ನೇ ಮರೆತಿದ್ದೆ ಎಂದು. ಈಗಲೂ, ಬೈಕ್‌ನ ಪೆಟ್ರೋಲ್ ಖಾಲಿ ಆದಾಗೆಲ್ಲಾ ಈ ವ್ಯಕ್ತಿ ಕಣ್ಣ ಮುಂದೇ ಬಂದು ಹೋಗುತ್ತಾರೆ… ಆ ವ್ಯಕ್ತಿ ಎಲ್ಲೇ ಇದ್ದರೂ ಆ ದೇವರು ಆ ನಿಷ್ಕಲ್ಮಶ ಮನಿಸ್ಸಿನ ವ್ಯಕ್ತಿಗೆ ಒಳ್ಳೆಯದನ್ನ ಮಾಡಲಿ, ಆರೋಗ್ಯ ಕೊಟ್ಟು ಕಾಪಾಡಲಿ.
* ಹೇಮಂತ್ ರಾಜ್ .ಆರ್.